ವಿಜಯಪುರ ನಗರದ ವೆಲೋಡ್ರೋಮ್‌ನಲ್ಲಿ ರಾಜ್ಯಮಟ್ಟದ 13ನೇ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌ಗೆ ವಿಸಿಜಿ ಗ್ರೂಪ್‌ ನ ಡಾ.ಮಹಾಂತೇಶ ಬಿರಾದಾರ ಶನಿವಾರ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಅವಿಭಜಿತ ವಿಜಯಪುರ ಜಿಲ್ಲೆ ಸೈಕ್ಲಿಂಗ್‌ ಕ್ರೀಡೆಗೆ ಜಗತ್ಪ್ರಸಿದ್ಧವಾಗಿದೆ. ಭವಿಷ್ಯದ ದಿನಗಳಲ್ಲೂ ಸೈಕ್ಲಿಸ್ಟ್‌ ಗಳಿಗೆ ಉತ್ತೇಜನ ನೀಡುವ ದೂರದೃಷ್ಟಿಯಿಂದ ಸಚಿವ ಎಂ.ಬಿ.ಪಾಟೀಲರು 50 ಲಕ್ಷ ರೂ. ವೆಚ್ಚದ ಸೈಕಲ್‌ ಗಳನ್ನು ಸೈಕ್ಲಿಸ್ಟ್‌ಗಳಿಗೆ ಕೊಡಮಾಡುತ್ತಿದ್ದಾರೆ ಎಂದು ವಿಸಿಜಿ ಗ್ರೂಪ್‌ ನ ಡಾ.ಮಹಾಂತೇಶ ಬಿರಾದಾರ ಹೇಳಿದರು.

ನಗರದಲ್ಲಿ ಆರಂಭವಾದ 13ನೇ ಟ್ರ್ಯಾಕ್‌ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್‌ ಉದ್ಘಾಟಿಸಿ ಮಾತನಾಡಿದ ಅವರು, ಸೈಕ್ಲಿಂಗ್‌ ಚಟುವಟಿಕೆಗಳಿಗೆ ನಗರದ ಬಿಎಲ್‌ಡಿಇ ಸಂಸ್ಥೆ ನೆರವು, ಸಹಕಾರ ನೀಡುತ್ತಿದೆ. ನಿರಂತರವಾಗಿ ಕ್ರೀಡೆಗಳನ್ನು ಆಯೋಜಿಸುತ್ತಿರುವ ಕರ್ನಾಟಕ ರಾಜ್ಯ ಅಮೆಚೂರ ಸೈಕ್ಲಿಂಗ್‌ ಅಸೋಸಿಯೇಷನ್‌ ಕಾರ್ಯ ಶ್ಲಾಘನೀಯವಾಗಿದೆ. ವಿಜಯಪುರದಲ್ಲಿ ವೆಲೋಡ್ರೋಮ್‌ ನಿರ್ಮಾಣವಾಬೇಕೆಂಬ ಕನಸಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ವಿಶೇಷ ಕಾಳಜಿಯೇ ಕಾರಣವಾಗಿದೆ ಎಂದರು.

ಕರ್ನಾಟಕ ರಾಜ್ಯ ಅಮೆಚೂರ ಸೈಕ್ಲಿಂಗ್‌ ಅಸೋಸಿಯೇಷನ್‌ ರಾಜ್ಯಾಧ್ಯಕ್ಷ ರಾಜು ಬಿರಾದಾರ ಮಾತನಾಡಿ, ಸೈಕ್ಲಿಸ್ಟ್‌ ಗಳ ವಿದ್ಯಾಭ್ಯಾಸಕ್ಕೆ ವೆಲೋಡ್ರೋಮ್‌ ನಿರ್ಮಾಣ ಮಾಡಬೇಕು ಎಂಬ ದಶಕಗಳ ಕನಸನ್ನು ಸಚಿವ ಎಂ.ಬಿ.ಪಾಟೀಲರು ನನಸು ಮಾಡಿದ್ದಾರೆ. ಸೈಕ್ಲಿಸ್ಟ್‌ ಗಳು ಇಲ್ಲಿ ಉತ್ತಮ ಅಭ್ಯಾಸ ಮಾಡಿ, ಹೆಚ್ಚಿನ ಸಾಧನೆಗೈಯ್ಯಲು ವೆಲೋಡ್ರೋಮ್‌ ಸಹಕಾರಿಯಾಗಲಿದೆ ಎಂದರು.

ನೂತನ ವೆಲೋಡ್ರೋಮ್‌ ನಲ್ಲಿ ಪ್ರಥಮವಾಗಿ 13ನೇ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ ಶಿಪ್ ಆಯೋಜಿಸಿದ್ದಕ್ಕೆ ಸಂತಸವಾದ್ದು, ಕ್ರೀಡಾಕೂಟದಲ್ಲಿ 145 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಜೊತೆಗೆ 50 ಕ್ರೀಡಾಧಿಕಾರಿಗಳು ಭಾಗವಹಿಸಿದ್ದಾರೆ ಎಂದರು.

ಮಹಾನಗರಪಾಲಿಕೆ ಮೇಯರ್‌ ಎಂ.ಎಸ್.‌ಕರಡಿ, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾಧಿಕಾರಿ ರಾಜಶೇಖರ ದೈವಾಡಿ, ರಾಹುಲ ಜಾಧವ, ರಾಜು ಚವ್ಹಾಣ, ಪ್ರದೀಪ ರಾಠೋಡ, ನಾಗರಾಜ ಬಿರಾದಾರ ಪಾಲ್ಗೊಂಡಿದ್ದರು.