ಕಳೆದ 107 ವರ್ಷಗಳಲ್ಲಿ ವಿಡಿಸಿಸಿ ಬ್ಯಾಂಕ್ ಉತ್ತಮ ಸಾಧನೆ ಮಾಡಿದ್ದು, ಈ ಬಾರಿ ₹8,076 ಕೋಟಿ ದಾಖಲೆಯ ವಹಿವಾಟು ನಡೆಸಿದ್ದು, 29.16 ಕೋಟಿ ಲಾಭ ಗಳಿಸಿದೆ. ರಾಷ್ಟ್ರದಲ್ಲಿರುವ 351 ಡಿಸಿಸಿ ಬ್ಯಾಂಕ್ ಗಳಲ್ಲಿ ವಿಜಯಪುರದ ವಿಡಿಸಿಸಿ ಬ್ಯಾಂಕ್ ಹಲವು ವಿಭಾಗಗಳಲ್ಲಿ 30ನೇ ಸ್ಥಾನದಲ್ಲಿದ್ದರೆ, ರಾಜ್ಯ ಮಟ್ಟದಲ್ಲಿ ಮೂರು-ನಾಲ್ಕನೇ ಸ್ಥಾನದಲ್ಲಿದೆ ಎಂದು ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಳೆದ 107 ವರ್ಷಗಳಲ್ಲಿ ವಿಡಿಸಿಸಿ ಬ್ಯಾಂಕ್ ಉತ್ತಮ ಸಾಧನೆ ಮಾಡಿದ್ದು, ಈ ಬಾರಿ ₹8,076 ಕೋಟಿ ದಾಖಲೆಯ ವಹಿವಾಟು ನಡೆಸಿದ್ದು, ₹29.16 ಕೋಟಿ ಲಾಭ ಗಳಿಸಿದೆ. ರಾಷ್ಟ್ರದಲ್ಲಿರುವ 351 ಡಿಸಿಸಿ ಬ್ಯಾಂಕ್ ಗಳಲ್ಲಿ ವಿಜಯಪುರದ ವಿಡಿಸಿಸಿ ಬ್ಯಾಂಕ್ ಹಲವು ವಿಭಾಗಗಳಲ್ಲಿ 30ನೇ ಸ್ಥಾನದಲ್ಲಿದ್ದರೆ, ರಾಜ್ಯ ಮಟ್ಟದಲ್ಲಿ ಮೂರು-ನಾಲ್ಕನೇ ಸ್ಥಾನದಲ್ಲಿದೆ ಎಂದು ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು.

ನಗರದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೇಂದ್ರ ಕಚೇರಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ವಿಡಿಸಿಸಿ ಬ್ಯಾಂಕ್ ಸಾಧನೆಯ ಕುರಿತು ಮಾಹಿತಿ ನೀಡಿದ ಅವರು, ವಿಜಯಪುರ-ಬಾಗಲಕೋಟೆ ಎಂದು ಡಿಸಿಸಿ ಬ್ಯಾಂಕ್ ವಿಭಜನೆ ಆಗಿರದಿದ್ದರೆ ಇಂದು ನಾವು ರಾಷ್ಟ್ರಮಟ್ಟದಲ್ಲಿ ಪ್ರಥಮ ಅಥವಾ ದ್ವಿತೀಯ ಸ್ಥಾನದಲ್ಲಿರುತ್ತಿದ್ದೆವು. ಕೃಷಿ ಸಾಲ ಕೊಡುವುದರಲ್ಲಿ ರಾಜ್ಯದಲ್ಲಿ ನಮ್ಮ ಬ್ಯಾಂಕ್ ತೃತೀಯ ಸ್ಥಾನದಲ್ಲಿದ್ದು, ರೈತರಿಗೆ ಅತಿ ಹೆಚ್ಚು ಸಾಲ ಕೊಡುತ್ತಿದ್ದೇವೆ. ವಿಡಿಸಿಸಿ ಬ್ಯಾಂಕ್ 273 ಪಿಕೆಪಿಎಸ್ ಗಳೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ 223 ಪಿಕೆಪಿಎಸ್‌ ಲಾಭದಲ್ಲಿವೆ. ಅಂದಾಜು 2.55 ಲಕ್ಷ ರೈತರಿಗೆ ₹2115 ಕೋಟಿ ಕೃಷಿ ಸಾಲ ನೀಡುವ ಮೂಲಕ ವಿಡಿಸಿಸಿ ಬ್ಯಾಂಕ್ ಇತಿಹಾಸ ನಿರ್ಮಿಸಿದೆ. ಇದಕ್ಕೆ ವಿಡಿಸಿಸಿ ಬ್ಯಾಂಕ್ ಸಿಬ್ಬಂದಿ, ಆಡಳಿತ ಹಾಗೂ ರೈತರ ಸಹಕಾರ ಸಂಘಗಳಿಂದ ಬ್ಯಾಂಕ್ ಈ ಮಟ್ಟದಲ್ಲಿ ಬೆಳವಣಿಗೆ ಕಂಡಿದೆ ಎಂದು ತಿಳಿಸಿದರು.

ವಿಡಿಸಿಸಿ ಕೇಂದ್ರ ಕಚೇರಿ ಪಕ್ಕದಲ್ಲಿರುವ 2 ಎಕರೆ ಪ್ರದೇಶದಲ್ಲಿ ₹50 ಕೋಟಿ ವೆಚ್ಚದಲ್ಲಿ ಏಕಕಾಲಕ್ಕೆ 2200 ಜನರಿಗೆ ತರಬೇತಿ ಸಿಗುವಂತಹ ಕೋ-ಆಪರೇಟಿವ್ ಟ್ರೇನಿಂಗ್ ಕ್ಯಾಂಪಸ್ ನಿರ್ಮಿಸಲಾಗುತ್ತಿದೆ. ಬ್ಯಾಂಕ್ ವಿಭಜನೆಯಾಗುವ ಸಮಯದಲ್ಲಿ ಕೇವಲ 25 ಇದ್ದ ಶಾಖೆಗಳನ್ನು ಈಗ 52 ಶಾಖೆಗಳಿಗೆ ಏರಿಸಲಾಗಿದೆ. ವಿಡಿಸಿಸಿ ಬ್ಯಾಂಕ್ ಗಳಲ್ಲಿ 508 ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ 739 ಸಹಕಾರ ಸಂಘ ಸಂಸ್ಥೆಗಳು ಬ್ಯಾಂಕಿನ ಸದಸ್ಯತ್ವ ಹೊಂದಿದ್ದು, ಒಟ್ಟು 78595 ಸದಸ್ಯರು ಹಾಗೂ ಸಹ ಸದಸ್ಯರನ್ನು ಹೊಂದಿದೆ. ಕೇವಲ ರೈತರಿಗೆ ಮಾತ್ರವಲ್ಲದೆ 37 ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೂ ಸಾಲ‌ ಕೊಟ್ಟಿದ್ದೇವೆ. ದಾಳಿಂಬೆ, ಒಣದ್ರಾಕ್ಷಿ ಮಾಡುವವರಿಗೆ ಕೇವಲ ಶೇ.3 ಬಡ್ಡಿಯಲ್ಲಿ ಕೃಷಿಸಾಲ ಕೊಡುತ್ತಿದ್ದೇವೆ. ತೋಟದಲ್ಲಿ ಮನೆ ಕಟ್ಟಲು ರೈತರಿಗೆ ₹20 ಲಕ್ಷದ ವರೆಗೆ ಸಾಲ ಕೊಟ್ಟಿದ್ದು, ಇದುವರೆಗೂ 202 ರೈತರಿಗೆ ₹27.64 ಕೋಟಿ ಸಾಲ ಮಂಜೂರಿಸಲಾಗಿದೆ ಎಂದು ತಿಳಿಸಿದರು.

ಕಡಿಮೆಯಾದ ಕೇಂದ್ರದ ಸಹಾಯ: ಡಿಸಿಸಿ ಬ್ಯಾಂಕ್ ಗಳಿಗೆ ಕೇಂದ್ರ ಸರ್ಕಾರದ ಸಹಾಯ ಕಡಿಮೆಯಾಗುತ್ತಿದೆ. ನಬಾರ್ಡ್ ನಿಂದ ಬರಬೇಕಿದ್ದ 100ಕ್ಕೆ 40 ರೂಪಾಯಿ ಸಹಾಯದಲ್ಲಿ ಕೇವಲ 15 ರೂಪಾಯಿಯಷ್ಟು ಮಾತ್ರ ಕೊಡಲಾಗುತ್ತಿದೆ. ಅಲ್ಲದೆ ಕೇಂದ್ರದಿಂದ ಡಿಸಿಸಿ ಬ್ಯಾಂಕ್‌ಗಳ ಮೇಲೆ ಹೆಚ್ಚಿನ ನಿಯಂತ್ರಣ ಹೇರಲಾಗುತ್ತಿದೆ. ಕೇಂದ್ರ ಸರ್ಕಾರ ಬ್ಯಾಂಕ್ ಗಳನ್ನು ಮರ್ಜ್ ಮಾಡಿರುವುದರಿಂದ ಜನರಿಗೆ ಸಿಗುವ ಸೌಲಭ್ಯಗಳು ಕಡಿಮೆಯಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲಾಭದಲ್ಲಿ ಸಾರ್ವಕಾಲಿಕ ದಾಖಲೆ :2025-26ನೇ ಸಾಲಿನ ವರ್ಷಾಂತ್ಯಕ್ಕೆ ಬ್ಯಾಂಕಿನ ಹಣಕಾಸಿನ ಸ್ಥಿತಿ ಸದೃಢವಾಗಿದ್ದು, ಶೇ.8.04ರಷ್ಟು ಷೇರು ಬಂಡವಾಳ ಹೆಚ್ಚಳವಾಗಿದೆ. ಶೇ.9.59 ರಷ್ಟು ನಿಧಿಗಳು, ಶೇ.15.42 ರಷ್ಟು ಠೇವು, ಶೇ.8.64ರಷ್ಟು ಪಡೆದ ಸಾಲ ಬಾಕಿ, ಶೇ.14.25ರಷ್ಟು ದುಡಿಯುವ ಬಂಡವಾಳ, ಶೇ.11.97 ರಷ್ಟು ಸಾಲ ಮುಂಗಡಗಳ ಬಾಕಿ, ಶೇ.24.78ರಷ್ಟು ಗುಂತಾವಣೆಗಳಲ್ಲಿ ಹೆಚ್ಚಳವಾಗಿದೆ. ಬ್ಯಾಂಕಿನ ಸ್ವಂತ ಬಂಡವಾಳ ₹652.20 ಕೋಟಿಗಳಷ್ಟಿದೆ. ಈ ವರ್ಷದಲ್ಲಿ ₹54.44 ಕೋಟಿ ಹೆಚ್ಚಳವಾಗಿದೆ. ಇದರಿಂದ ಸ್ವಂತ ಬಂಡವಾಳದಲ್ಲಿ ಶೇ.9.11ರಷ್ಟು ಏರಿಕೆಯಾಗಿದೆ. ಬ್ಯಾಂಕ್ ತನ್ನ 51 ಶಾಖೆಗಳ ಮೂಲಕ ಶೇ.15.42ರಷ್ಟು ಠೇವಣಿ ಹೆಚ್ಚಳ ಹಾಗೂ ₹29.16 ಕೋಟಿ ಸಾರ್ವಕಾಲಿಕ ದಾಖಲೆಯ ನಿವ್ವಳ ಲಾಭ ದಾಖಲಿಸಿದೆ.

ಠೇವಣಿ ಸಂಗ್ರಹಣೆಯಲ್ಲೂ ಪ್ರಗತಿ: ಬ್ಯಾಂಕ್ ತನ್ನ 51 ಶಾಖೆಗಳ ಮೂಲಕ ಒಟ್ಟು ₹4,402.36 ಕೋಟಿ ಠೇವಣಿ ಸಂಗ್ರಹಿಸಿದೆ. ಕಳೆದ ವರ್ಷಕ್ಕೆ (₹3,814.16 ಕೋಟಿ) ಹೋಲಿಸಿದರೆ ಈ ವರ್ಷ ₹588.20 ಕೋಟಿಗಳಷ್ಟು ಹೆಚ್ಚುವರಿ ಠೇವಣಿ ಸಂಗ್ರಹವಾಗಿದ್ದು, ಶೇ.15.42ರಷ್ಟು ವಾರ್ಷಿಕ ಬೆಳವಣಿಗೆಯಾಗಿದೆ. ನಬಾರ್ಡ್, ಅಪೆಕ್ಸ್ ಬ್ಯಾಂಕಿನಿಂದ ಒಟ್ಟು ₹562.36 ಕೋಟಿ ಸಾಲ ಪಡೆದಿದ್ದು, ವರ್ಷಾಂತ್ಯಕ್ಕೆ ₹492.29 ಕೋಟಿ ಸಾಲ ಬಾಕಿ ಇದೆ. ಬ್ಯಾಂಕ್ ನಿಯಮಿತವಾಗಿ ಸಾಲ ಮರುಪಾವತಿಸುತ್ತಿದ್ದು, ಯಾವುದೇ ಸುಸ್ತಿ ಬಾಕಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ದುಡಿಯುವ ಬಂಡವಾಳ ಹೆಚ್ಚಳ: 2025-26 ರಲ್ಲಿ ಬ್ಯಾಂಕಿನ ಒಟ್ಟು ದುಡಿಯುವ ಬಂಡವಾಳ ₹5,599.89 ಕೋಟಿ ತಲುಪಿದೆ. ಕಳೆದ ವರ್ಷಕ್ಕಿಂತ ₹698.29 ಕೋಟಿ ಹೆಚ್ಚಳ ಅಂದರೆ ಶೇ.14.25 ರಷ್ಟು ವಾರ್ಷಿಕ ಪ್ರಗತಿಯಾಗಿದೆ. 2025-26ನೇ ಸಾಲಿನಲ್ಲಿ ಬ್ಯಾಂಕ್ ₹40.15 ಕೋಟಿ ತೆರಿಗೆ ಪೂರ್ವ ಲಾಭ ಗಳಿಸಿದ್ದು, ₹10.99 ಕೋಟಿ ತೆರಿಗೆ ಪಾವತಿಸಿದ ನಂತರ ₹29.16 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲಿಯೇ ಸಾರ್ವಕಾಲಿಕ ಗರಿಷ್ಠ ವಾರ್ಷಿಕ ಲಾಭವಾಗಿದೆ ಎಂದರು.

ಸಾಲ ಮತ್ತು ಮುಂಗಡಗಳ ವಿತರಣೆ: ಕೃಷಿ ಕ್ಷೇತ್ರಕ್ಕೆ ಆದ್ಯತೆ ನೀಡಲಾಗುತ್ತಿದ್ದು, 2025-26 ರಲ್ಲಿ ಕೃಷಿಗಾಗಿ ₹1,953.43 ಕೋಟಿ ಮತ್ತು ಕೃಷಿಯೇತರ ಉದ್ದೇಶಗಳಿಗೆ ₹1,438.20 ಕೋಟಿ ಸೇರಿ ಒಟ್ಟು ₹3,391.63 ಕೋಟಿ ಸಾಲ ವಿತರಿಸಲಾಗಿದೆ. 31.03.2026ಕ್ಕೆ ಒಟ್ಟು ಸಾಲಗಳ ಬಾಕಿ ₹3,673.20 ಕೋಟಿ ಇದೆ (ಕೃಷಿ ಸಾಲ ಬಾಕಿ ₹2,115.09 ಕೋಟಿ ಹಾಗೂ ಕೃಷಿಯೇತರ ₹1,558.11 ಕೋಟಿ). ಸಾಲದ ಅನುಪಾತ ಕೃಷಿ ಮತ್ತು ಕೃಷಿಯೇತರ ವಲಯಗಳ ನಡುವೆ 58:42 ರಷ್ಟಿದೆ ಎಂದು ಅಧ್ಯಕ್ಷ ಶಿವಾನಂದ ಪಾಟೀಲ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರಾದ ಶೇಖರ ದಳವಾಯಿ, ಬಾಪುಗೌಡ ಪಾಟೀಲ ಯಾಳಗಿ, ಸಂಯುಕ್ತಾ ಪಾಟೀಲ, ಗುರುಶಾಂತ ನಿಡೋಣಿ, ಸುರೇಶ ಬಿರಾದಾರ, ಎಸ್.ಎಸ್.ಜಹಾಗಿರದಾರ, ಎಂ.ಸಿ.ಗುಂದಗಿ, ಸಹಕಾರ ಸಂಘಗಳ ಉಪನಿಭಂದಕಿ ಎಸ್.ಕೆ.ಭಾಗ್ಯಶ್ರೀ, ಆಡಳಿತ ಮಂಡಳಿ ನಿರ್ದೇಶಕರು, ಪ್ರಧಾನ ವ್ಯವಸ್ಥಾಪಕರು ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.