ಕನ್ನಡಪ್ರಭ ವಾರ್ತೆ ಮೂಡುಬಿದಿರೆಇಲ್ಲಿನ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಮಾದಕ ವ್ಯಸನ ಜಾಗೃತಿ ಸಮಿತಿಯಿಂದ ‘ವಿಶ್ವ ತಂಬಾಕು ರಹಿತ ದಿನದ’ ಅಂಗವಾಗಿ ಕಾನೂನಿನ ಅರಿವು ಮತ್ತು ಜಾಗೃತಿ ಕಾರ್ಯಕ್ರಮ ವಿ.ಎಸ್.ಆಚಾರ್ಯ ಸಭಾ ಭವನದಲ್ಲಿ ಬುಧವಾರ ನಡೆಯಿತು.ಮೂಡುಬಿದಿರೆ ಆರಕ್ಷಕ ಠಾಣೆಯ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ಮಾತನಾಡಿ, ಕಾಲೇಜಿನಲ್ಲಿ ಓದುವ ವಯಸ್ಸಿನಲ್ಲಿ ಕುತೂಹಲಕ್ಕಾಗಿ ಸಿಗರೇಟ್‌ನಿಂದ ಆರಂಭವಾಗುವ ಚಟಗಳು ನಿಧಾನವಾಗಿ ಮಾದಕ ವ್ಯಸನಗಳ ಜಾಲದಲ್ಲಿ ಬೀಳುವಂತೆ ಮಾಡುತ್ತವೆ. ಮೊದಲು ಗ್ರಾಹಕನಾಗಿರುವ ವ್ಯಕ್ತಿ ನಂತರ ಹಣದ ಆಸೆಯಿಂದ ಮಾದಕದ್ರವ್ಯಗಳ ವ್ಯಾಪಾರಕ್ಕೆ ಇಳಿಯುತ್ತಾನೆ ಎಂದು ವಿವರಿಸಿದರು.ಸಮಾಜದಲ್ಲಿ ಇಂತಹ ಕೃತ್ಯಕ್ಕೆ ವಿದ್ಯಾರ್ಥಿಗಳನ್ನೇ ಬಲೆ ಬೀಸಲಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ದುಶ್ಚಟಗಳಿಂದ ದೂರವಿರಬೇಕು. ಮಕ್ಕಳ ಇಂತಹ ಕೃತ್ಯದಿಂದ ತಂದೆ ತಾಯಂದಿರು ಅವಮಾನ ಎದುರಿಸುವಂತಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಯಲ್ಲಿ ನಿರತರಾಗಿರುವುದು ಹಾಗೂ ಒಳ್ಳೆಯ ಗೆಳೆಯರ ಸ್ನೇಹ ಬೆಳೆಸುವುದು ಅಗತ್ಯ ಎಂದರು. ಮೊದಲ ಬಾರಿ ಡ್ರಗ್ಸ್ ಸೇವನೆ ಮಾಡಿದವರಿಗೆ ರು. 10 ಸಾವಿರ ದಂಡ ಅಥವಾ 6 ತಿಂಗಳು ಅಥವಾ 1 ವರ್ಷ ಜೈಲು ಶಿಕ್ಷೆ, ಮತ್ತೆ ಅದು ಪುನರಾವರ್ತನೆಯಾದರೆ 5 ವರ್ಷ ಜೈಲು 1 ಲಕ್ಷ ರು. ದಂಡ ವಿಧಿಸಲಾಗುತ್ತದೆ. ಕರ್ನಾಟಕ ಪೊಲೀಸ್ ಇಂದು ನವಮಾಧ್ಯಮವನ್ನು ಬಳಸಿ ಅಪರಾಧಿಗಳನ್ನು ಸುಲಭದಲ್ಲಿ ಪತ್ತೆಹಚ್ಚಬಲ್ಲರು ಎಂದು ತಿಳಿಸಿದರು.
ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಝಾನ್ಸಿ ಪಿ. ಎನ್, ಕಲಾ ನಿಖಾಯದ ಡೀನ್ ವೇಣುಗೋಪಾಲ್ ಶೆಟ್ಟಿ, ಸಂಸ್ಥೆಯ ನಿಲಯ ಪಾಲಕರು ಹಾಗೂ ಕ್ಷೇಮಪಾಲಕರು ಇದ್ದರು. ಉಪನ್ಯಾಸಕ ಶಿವಪ್ರಸಾದ ಬಿವಿ ನಿರೂಪಿಸಿದರು. ಅರುಣ್‌ಕುಮಾರ್ ಸ್ವಾಗತಿಸಿದರು. ಬಬಿತಾ ವಂದಿಸಿದರು.