ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಇಲ್ಲಿನ ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಎನ್‌ಡಿಎ (ನ್ಯಾಷನಲ್ ಡಿಫೆನ್ಸ್ ಅಕಾಡೆಮಿ) ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಅಭಿವಿನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾತನಾಡಿದ ಖ್ಯಾತ ವೈದ್ಯ ಹಾಗೂ ಅಂಕಣಕಾರ ಮೇಜರ್ ಡಾ ಕುಶವಂತ್ ಕೋಳಿಬೈಲು, ಪಿಯು ಮಟ್ಟದಲ್ಲಿ ಈ ಕೋರ್ಸ್ ಕುರಿತು ಅರಿವು ಇರುವುದು ಬಹಳ ಮುಖ್ಯ. ಪದವಿಪೂರ್ವ ಹಂತವನ್ನು ಮುಗಿಸಿದ ನಂತರವೇ ವಿದ್ಯಾರ್ಥಿಗಳು ಎನ್‌ಡಿಎ ಪ್ರವೇಶ ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ. ಇದಕ್ಕೆ ತಯಾರಿ ಈಗಲೇ ಆರಂಭಿಸಿದರೆ, ಭವಿಷ್ಯದಲ್ಲಿ ನಮ್ಮ ದೇಶದ ರಕ್ಷಕರಾಗುವ ಅವಕಾಶ ನಮ್ಮ ಕೈಯಲ್ಲಿರಲಿದೆ ಎಂದರು.ಎನ್‌ಡಿಎ ಕೇವಲ ಉದ್ಯೋಗವಲ್ಲ. ಅದು ದೇಶ ಸೇವೆಯ ಕನಸು ಹಾಗೂ ಪ್ರತಿಷ್ಠೆಯ ಕಾಯಕ. ಎನ್‌ಡಿಎ ಪರೀಕ್ಷೆಗಳು ವರ್ಷಕ್ಕೆ ಎರಡು ಭಾರಿ ನಡೆಯುತ್ತಿದ್ದು, ಕುಬ್ಜ ವ್ಯಕ್ತಿಗಳು ಪರೀಕ್ಷೆ ಎದುರಿಸಬಹುದು ಎಂದು ತಿಳಿಸಿದರು. ನಮ್ಮ ಭವಿಷ್ಯದ ಬಗ್ಗೆ ಬೇರೆಯವರು ನಿರ್ಧಾರ ತೆಗೆದುಕೊಳ್ಳಲು ಬದಲು ನಾವೇ ನಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪಿಯು ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್ ಮಾತನಾಡಿ ನಿರ್ಧಿಷ್ಟ ಸಮಯದಲ್ಲಿ ಉತ್ತಮ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ಜೀವನದಲ್ಲಿ ಗರಿಷ್ಠ ಲಾಭವನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಗುರಿಯ ಕಡೆ ಗಮನಹರಿಸಿ ಇಂದಿನಿಂದಲೇ ಕಾರ್ಯವನ್ನು ಆರಂಭಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು.ಎನ್‌ಡಿಎ ಪರೀಕ್ಷೆಗಳ ಸಂಯೋಜಕ ದೇವಿಪ್ರಸಾದ್ ಮಾತನಾಡಿ, ಒಂದು ದಿನದ ಪ್ರವಾಸಕ್ಕೆ ಯೋಜನೆ ರೂಪಿಸುವ ಆಸಕ್ತಿಯನ್ನು, ನಮ್ಮ ಒಂದು ವರ್ಷದ ಶಿಕ್ಷಣಕ್ಕೆ ತೋರಿಸಿದರೆ ಅಂದುಕೊಂಡ ಹಾಗೆ ಗೆಲುವು ಸಾಧಿಸಲು ಸಾಧ್ಯ ಎಂದರು.ಸಂಯೋಜಕ ವರುಣ್ ಪ್ರಭು ಇದ್ದರು. ಇಂಗ್ಲೀಷ್ ಉಪನ್ಯಾಸಕಿ ದೀಪಾ ಶೆಟ್ಟಿ ನಿರೂಪಿಸಿದರು.