ಕನ್ನಡಪ್ರಭ ವಾರ್ತೆ ಮೂಡುಬಿದಿರೆ
ಈ ಬಾರಿಯ ಉದ್ಯೋಗ ಮೇಳದಲ್ಲಿ ಭಾಗವಹಿಸಿದ ಒಟ್ಟು ೨೫೮ ಕಂಪನಿಗಳ ಪೈಕಿ ೨೧೭ ಕಂಪನಿಗಳು ೫೯೫೩ ಜನರನ್ನು ಶಾರ್ಟ್‌ಲಿಸ್ಟ್ ಮಾಡಿ ಮುಂದಿನ ಹಂತಕ್ಕೆ ಆಯ್ಕೆ ಮಾಡಿವೆ. ಉದ್ಯೋಗ ಮೇಳದ ಎರಡನೇ ದಿನ ೧೫೪೨ ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡಿದ್ದು, ಒಟ್ಟು ಎರಡು ದಿನಗಳ ಉದ್ಯೋಗ ಮೇಳದಲ್ಲಿ ೧೪೭೮೦ ಅಭ್ಯರ್ಥಿಗಳು ಭಾಗವಹಿಸಿದರು. ಬೆಂಗಳೂರಿನ ಸರ್ಕಾರಿ ಎಸ್‌ಕೆಎಸ್‌ಜೆ ಟೆಕ್ನಾಲಜಿ ಇನ್‌ಸ್ಟಿಟ್ಯೂಟ್ ಎಂಜಿನಿಯರಿಂಗ್ ಕಾಲೇಜಿನ ೪೩ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆಯ ಮೇರೆಗೆ ಆಳ್ವಾಸ್ ಸಂಸ್ಥೆಯ ವತಿಯಿಂದ ಉಚಿತ ವಾಹನ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿ, ಪ್ರಗತಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಇಲ್ಲಿನ ವಿದ್ಯಾರ್ಥಿಗಳು ಪ್ರತಿಷ್ಠಿತ ಇಜಿ ಇಂಡಿಯಾ, ಇಸಿಯಾ ಸಾಫ್ಟ್ ಹಾಗೂ ಫ್ಲಿಪ್‌ಕಾರ್ಟ್ ಕಂಪೆನಿಗಳಿಗೆ ಉತ್ತಮ ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಮುಂಬೈಯ ವಿದ್ಯಾರ್ಥಿಗೂ ಉದ್ಯೋಗ: ಮುಂಬೈನ ಠಾಕೂರ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ವಿದ್ಯಾರ್ಥಿ ಶೌರ್ಯ ಪೂಜಾರಿ ಮೂಲತಃ ಪಡುಬಿದ್ರಿಯವರಾಗಿದ್ದು, ಆಳ್ವಾಸ್ ಪ್ರಗತಿಯಂತಹ ಬೃಹತ್ ಉದ್ಯೋಗ ಮೇಳದ ಜನಸಾಗರವನ್ನು ವೀಕ್ಷಿಸಿ ತುಸು ಭಯಪಟ್ಟಿದ್ದರು. ಆದರೆ ಇಲ್ಲಿನ ಸ್ವಯಂ ಸೇವಕ ವರ್ಗ ಅವರನ್ನು ಒಳ್ಳೆಯ ರೀತಿಯಲ್ಲಿ ಸೂಕ್ತ ಸಮಯದಲ್ಲಿ ಮಾರ್ಗದರ್ಶನ ನೀಡಿದರು. ಇಲ್ಲಿ ಎಲ್ಲವೂ ಬಹಳ ಅಚ್ಚು ಕಟ್ಟಾಗಿ ವ್ಯವಸ್ಥೆ ಮಾಡಿದ್ದರು. ಹಲವಾರು ಕಂಪನಿಗಳಿಗೆ ಸಂದರ್ಶನ ನೀಡಿದ್ದೇನೆ, ಅದರಲ್ಲಿ ಟೊಯೋಟೋ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಕಂಪನಿಗೆ ವಾರ್ಷಿಕ ೪.೭ ಲಕ್ಷ ವೇತನದೊಂದಿಗೆ ಆಯ್ಕೆಯಾಗಿದ್ದೇನೆ. ಆಳ್ವಾಸ್ ಪ್ರಗತಿ ಒಂದು ಜವಾಬ್ದಾರಿಯುತ ಉದ್ಯೋಗವನ್ನು ಕಲ್ಪಿಸಿಕೊಟ್ಟಿದೆ ಎನ್ನುತ್ತಾರೆ.
ಯಶಸ್ಸಿಗೆ ಆಳ್ವಾಸ್ ಬೆಂಬಲ: ದಾವಣಗೆರೆಯ ಪದವೀಧರ ಶರಣ ಬಣಕಾರ್ ಪ್ರತಿಷ್ಠಿತ ಕಂಪನಿಯಾದ ಇನ್ಫರ್ಮ್ಯಾಟಿಕಾ ಕಂಪನಿಯಲ್ಲಿ ವಾರ್ಷಿಕ ೪.೨ ಲಕ್ಷದ ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ತನ್ನ ಸಂತೋಷವನ್ನು ವ್ಯಕ್ತಪಡಿಸಿ ಮಾತನಾಡಿದ ಅವರು, ಇಂತಹ ಅದ್ಭುತ ಅವಕಾಶವನ್ನು ಒದಗಿಸಿದ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ. ಸಂಸ್ಥೆಯ ಬೆಂಬಲ ಮತ್ತು ಮಾರ್ಗದರ್ಶನ ನನ್ನ ಯಶಸ್ಸಿಗೆ ಸಹಕಾರಿಯಾಗಿದೆ ಎಂದರು. ಉದ್ಯೋಗದ ಆಕಾಂಕ್ಷಿಗಳಿಗೆ ಸೂಕ್ತ ವೇದಿಕೆಮಂಗಳೂರಿನ ಎಜೆಐಇಟಿಯಲ್ಲಿ ತಮ್ಮ ಬಿ.ಇ ಪದವಿ ಪಡೆದ ನಾನು ಕಳೆದ ನಾಲ್ಕು ತಿಂಗಳಿಂದ ಉದ್ಯೋಗದ ಕೊರತೆಯನ್ನು ಎದುರಿಸುತ್ತಿದ್ದೆ, ಇಂತಹ ದೊಡ್ಡ ಉದ್ಯೋಗಾವಕಾಶವನ್ನು ಆಯೋಜಿಸಲು ಮತ್ತು ಉದ್ಯೋಗದ ಅಗತ್ಯವಿರುವ ಅನೇಕ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆಯನ್ನು ನೀಡಿದ ಆಳ್ವಾಸ್ ತಂಡಕ್ಕೆ ಕೃತಜ್ಞಳಾಗಿದ್ದೇನೆ ಎಂದು ಮಂಗಳೂರಿನ ತಸ್ಮಿಯಾ ಝುಲೆಕಾ. ಕಳೆದ ಬಾರಿ ಪ್ರಗತಿಯ ಅದ್ಭುತ ಅನುಭವದ ಮೇರೆಗೆ ಈ ವರ್ಷವೂ ನಮ್ಮ ಫ್ಯಾಕ್ಟ್ಸೆಟ್ ಕಂಪನಿಯ ತಂಡ ಭೇಟಿ ನೀಡಿದ್ದೇವೆ. ಒಟ್ಟಾರೆ ಈ ಬಾರಿ ೧೫ ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಕಂಪನಿಗೆ ಸೇರ್ಪಡೆಯಾಗುತ್ತಾರೆ ಎಂದು ಫ್ಯಾಕ್ಟ್ಸೆಟ್ ಸಂಸ್ಥೆಯ ಟ್ಯಾಲೆಂಟ್ ಅಕ್ವಿಸಿಷನ್ ಸ್ಪೆಷಲಿಸ್ಟ್ ವೆಂಕಟ ಸತ್ಯಕೃಷ್ಣ ಹೇಳಿದರು. ಕಂಪನಿಗಳ ಸದಸ್ಯರಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಅತ್ಯುನ್ನತ ರೀತಿಯ ಅತಿಥಿ ಸತ್ಕಾರವನ್ನು ನೀಡಿ, ಉದ್ಯೋಗಾಕಾಂಕ್ಷಿಗಳಿಗೆ ಪ್ರತಿಷ್ಠಿತ ಕಂಪೆನಿಗಳಲ್ಲಿ ಉದ್ಯೋಗ ನೀಡಿದ ಕೆಲಸ ನಿಜಕ್ಕೂ ಶ್ಲಾಘನೀಯ ಎಂದು ಫ್ಯಾಕ್ಟ್ಸೆಟ್‌ನ ಅಸೋಸಿಯೇಟ್ ಆಪರೇಷನಲ್ ಮ್ಯಾನೇಜರ್ ಸತ್ಯನಾರಾಯಣ ದುರ್ಹಾಸ್ ಅಭಿಪ್ರಾಯ ಹಂಚಿಕೊಂಡರು.
ಫ್ಯಾಕ್ಟ್ಸೆಟ್ ಕಂಪನಿಯು ೩.೪ ಲಕ್ಷ ವಾರ್ಷಿಕ ಪ್ಯಾಕೇಜ್‌ನೊಂದಿಗೆ ೨೦ ರಿಸರ್ಚ್ ಅನಾಲಿಸ್ಟ್ ಹುದ್ದೆಗೆ ಆಯ್ಕೆ ಮಾಡಿದ್ದು, ೧೩ ಅಭ್ಯರ್ಥಿಗಳನ್ನು ೭.೨ ವಾರ್ಷಿಕ ವೇತನಂದೊಂದಿಗೆ ಶಾರ್ಟ್‌ಲಿಸ್ಟ್ ಮಾಡಿಕೊಂಡಿದೆ.
ಮೈನಿ ಪ್ರೆಸಿಶನ್ ಪ್ರಾಡಕ್ಟ್ಸ್ ಲಿಮಿಟೆಡ್ ಕಂಪನಿಯು ಗ್ರಾಜುಯೇಟ್ ಎಂಜಿನಿಯರ್ ಟ್ರೈನಿ ಹುದ್ದೆಗಳಿಗೆ ೫೧ ಅಭ್ಯರ್ಥಿಗಳನ್ನು ೩.೨ ವಾರ್ಷಿಕ ವೇತನಕ್ಕೆ ಆಯ್ಕೆ ಮಾಡಿದೆ.
ಟೊಯೋಟಾ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈ. ಲಿ., ಗ್ರಾಜುಯೇಟ್ ಇಂಜಿನಿಯರ್ ಅಪ್ರೆಂಟಿಸ್‌ಶಿಪ್ ಟ್ರೈನಿ ಹುದ್ದೆಗೆ ೧೨ ಅಭ್ಯರ್ಥಿಗಳನ್ನು ೪ ಲಕ್ಷ ವಾರ್ಷಿಕ ವೇತನಕ್ಕೆ ಆಯ್ಕೆ ಮಾಡಿದೆ.