ಕನ್ನಡಪ್ರಭ ವಾರ್ತೆ ಹಿರಿಯೂರು:
ದೇಶದಲ್ಲಿ ಜೂ.4 ಐತಿಹಾಸಿಕ ದಿನವಾಗಿ ಹೊರ ಹೊಮ್ಮಲಿದ್ದು, ಭಗವಂತ ಅವಕಾಶ ಕಲ್ಪಿಸಿದರೆ ಜಿಲ್ಲೆಯ ಜನರ ಸೇವೆ ಸಲ್ಲಿಸಲು ನಾನು ಸದಾ ಸಿದ್ಧನಿದ್ದೇನೆ ಎಂದು ಎನ್‌ಡಿಎ ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದರು.ತಾಲೂಕಿನ ವೇಣುಕಲ್ಲುಗುಡ್ಡ ಗ್ರಾಮದ ಯುವ ಮುಖಂಡ ಅಭಿನಂದನ ರವರ ನಿವಾಸದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿ ಅವರು ಮಾತನಾಡಿದರು.
ಪಕ್ಷದ ವರಿಷ್ಠರು ತೀರ್ಮಾನ ಮಾಡಿ ನೀವು ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ನಿಲ್ಲಬೇಕು ಎಂದು ಒತ್ತಾಯ ಮಾಡಿದ್ದರಿಂದ ಕ್ಷೇತ್ರಕ್ಕೆ ಬರಬೇಕಾಯಿತು. ಕ್ಷೇತ್ರ ಹೆಚ್ಚಾಗಿ ಪರಿಚಯ ಇಲ್ಲದಿದ್ದರೂ ಕೂಡ ಪಕ್ಷದ ಆದೇಶವನ್ನು ಪಾಲಿಸಿ ದೂರದಿಂದ ಬಂದು ಸ್ಪರ್ಧೆ ಮಾಡಬೇಕಾಯಿತು. ಆದರೆ ಇಲ್ಲಿನ ಜನರು ಪ್ರೀತಿ, ವಿಶ್ವಾಸದಿಂದ ಓಡಾಡಿ ನನ್ನನ್ನು ಗೆಲ್ಲಿಸಲು ಹಗಲಿರುಳು ತಮ್ಮ ಶಕ್ತಿ ಹಾಗೂ ಶ್ರಮವನ್ನು ಹಾಕಿ ಕೆಲಸ ಮಾಡಿದ್ದಾರೆ .ಅದಕ್ಕಾಗಿ ಎಲ್ಲರಿಗೂ ಅಭಿನಂದನೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.ಈಗಾಗಲೇ ಕಾಂಗ್ರೆಸ್ ಮತ್ತು ಮಾಧ್ಯಮಗಳು ಬಹಳ ಉತ್ಸಾಹದಿಂದ ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದು ಹೇಳುತ್ತಿದ್ದಾರೆ. ನನಗೆ ಜನರ ಮೇಲೆ ವಿಶ್ವಾಸವಿದೆ, ಜಿಲ್ಲೆಯ ಮತದಾರರ ಮೇಲೆ ನಂಬಿಕೆ ಇದೆ. ಹಾಗಾಗಿ ಗೆಲುವು ನನಗೆ ಒಲಿಯಲಿದೆ. ದೇಶದ ಜನತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ವಿಶ್ವಾಸವಿಟ್ಟು ಮತದಾನದ ಮೂಲಕ ಮೂರನೇ ಬಾರಿಗೆ ಮೋದಿ ಯವರನ್ನು ಪ್ರಧಾನಿಯಾಗಿ ಮಾಡಲಿದ್ದಾರೆ. ಆದರೆ ಕಾಂಗ್ರೆಸ್ ಸರ್ಕಾರದ ಖಜಾನೆಯಲ್ಲಿನ ಹಣ ತೆಗೆದು ಹಂಚಿ ಓಟು ಹಾಕಿಸಿಕೊಂಡು ಗೆಲ್ಲುತ್ತೇವೆ ಎಂಬ ಭ್ರಮೆಯಲ್ಲಿದ್ದು ಜನರು ಅದನ್ನು ಸುಳ್ಳು ಮಾಡಲಿದ್ದಾರೆ ಎಂದರು.
ಜೆಡಿಎಸ್ ಮುಖಂಡ ಎಂ. ರವೀಂದ್ರಪ್ಪ ಮಾತನಾಡಿ, ಮೈತ್ರಿ ಅಭ್ಯರ್ಥಿ ಗೋವಿಂದ ಕಾರಜೋಳರವರು ಉತ್ತಮ ರಾಜಕಾರಣಿಯಾಗಿದ್ದು ಅಭಿವೃದ್ಧಿ ಕೆಲಸ ಮಾಡುವ ಮನಸು ಹೊಂದಿದ್ದಾರೆ. ಮುಧೋಳ ಕ್ಷೇತ್ರದಲ್ಲಿ ಅಭಿವೃದ್ಧಿಯ ಹೊಳೆಯನ್ನೇ ಹರಿಸಿರುವ ಅವರಿಗೆ ನಮ್ಮ ಕ್ಷೇತ್ರದಲ್ಲಿ ಮುನ್ನಡೆ ಸಿಗುವುದು ಖಚಿತ. ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಕಾರಜೋಳ ಅವರು ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಜೂ.4 ರ ನಂತರದ ದಿನಗಳಲ್ಲಿ ಗೋವಿಂದ ಕಾರಜೋಳರವರು ಧರ್ಮಪುರ ಸೇರಿದಂತೆ ಈ ಭಾಗದ ಕೆರೆಗಳಿಗೆ ಹೆಚ್ಚು ನೀರು ಹರಿಸುವ ಜೊತೆಗೆ ಜವನಗೊಂಡನಹಳ್ಳಿ ಭಾಗದ ನೀರಿನ ಸಮಸ್ಯೆ ಬಗೆಹರಿಸುವ ಸಂಕಲ್ಪ ಹೊಂದಿದ್ದಾರೆ. ಮತದಾರರು ಮೈತ್ರಿ ಅಭ್ಯರ್ಥಿಗೆ ಒಲವು ತೋರಿದ್ದು ಕೆಲವೇ ದಿನಗಳಲ್ಲಿ ಜಿಲ್ಲೆಯ ಚಿತ್ರಣ ಬದಲಾಗಲಿದೆ ಎಂದರು.ಈ ವೇಳೆ ಜೀವದಾತೆ ಫೌಂಡೇಶನ್ ಅಧ್ಯಕ್ಷ ಕೆ. ಅಭಿನಂದನ್ ಮಾತನಾಡಿದರು. ಸಭೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವಿ.ವಿಶ್ವನಾಥ್, ಸಿರಿಯಪ್ಪ, ಹನುಮಂತರಾಯಪ್ಪ, ಜಗದೀಶ್, ರಾಕೇಶ್, ಗೋವಿಂದಪ್ಪ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಆಪ್ತ ಸಹಾಯಕ ಉಮೇಶ್ ಸೇರಿ ಹಲವರಿದ್ದರು.