ಕನ್ನಡಪ್ರಭ ವಾರ್ತೆ ಬೆಂಗಳೂರು
ನಿತ್ಯ ನೂರಾರು ಮಂದಿ ಬಸ್ ಪ್ರಯಾಣಿಕರು ಬಳಸುವ ಮೂಡಲಪಾಳ್ಯ ರಸ್ತೆಯಲ್ಲಿನ ಅಮರ ಜ್ಯೋತಿ ನಗರ ಬಸ್ ನಿಲುಗಡೆ ತಾಣ ಸಂಪೂರ್ಣ ಕಿತ್ತು ಹೋಗಿದ್ದು, ಜನರು ಉರಿಬಿಸಿಲಲ್ಲಿ ನಿಂತು ಬಸ್‌ಗಾಗಿ ಕಾಯುವಂತಹ ಪರಿಸ್ಥಿತಿ ಎದುರಾಗಿದೆ.ಬೆಂಗಳೂರಿನಲ್ಲಿ ಬಸ್ ಪ್ರಯಾಣಿಕರಿಗಾಗಿ ಬಿಬಿಎಂಪಿಯಿಂದ ನಗರದಾದ್ಯಂತ 300ಕ್ಕೂ ಹೆಚ್ಚಿನ ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ. ಆ ಪೈಕಿ ಹಲವು ಬಸ್ ಶೆಲ್ಟರ್‌ಗಳು ನಿರ್ವಹಣೆ ಕೊರತೆಯಿಂದಾಗಿ ಕಿತ್ತು ಹೋಗಿ ಪ್ರಯಾಣಿಕರ ಬಳಕೆಗೆ ಬರದಂತಾಗಿದೆ. ಅಮರಜ್ಯೋತಿ ನಗರ ಬಸ್ ನಿಲುಗಡೆ ತಾಣವೂ ಅದೇ ಪರಿಸ್ಥಿತಿಯಲ್ಲಿದೆ. ನಿಲುಗಡೆ ತಾಣವು ಸಂಪೂರ್ಣ ಕಿತ್ತು ಹೋಗಿರುವ ಕಾರಣ ಜನರು ಉರಿಬಿಸಿಲಿನಲ್ಲಿಯೇ ಬಸ್‌ಗಾಗಿ ಕಾಯುವಂತಾಗಿದೆ.
ಬಸ್ ನಿಲುಗಡೆ ತಾಣದಲ್ಲಿನ ಆಸನಗಳು ಮಾಯವಾಗಿದ್ದು, ಮೇಲ್ಛಾವಣಿ ಕಿತ್ತು ಹೋಗಿದೆ. ಅದರ ಪರಿಣಾಮ ಜನರು ಬಿರುಬಿಸಿನಲ್ಲಿ ಬಸ್‌ಗಾಗಿ ಕಾಯುತ್ತಾ ಹೈರಾಣಾಗುತ್ತಿದ್ದಾರೆ. ಬಸ್ ಶೆಲ್ಟರ್ ದುರಸ್ತಿ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಬಸ್ ಪ್ರಯಾಣಿಕರು ಮನವಿ ಮಾಡಿದ್ದರೂ ಆ ಬಗ್ಗೆ ಗಮನಹರಿಸಿಲ್ಲ. ಅಲ್ಲದೆ, ಚುನಾವಣೆ ಸಂದರ್ಭದಲ್ಲಾದರೂ ಬಸ್ ಶೆಲ್ಟರ್ ದುರಸ್ತಿಯಾಗುತ್ತದೆ ಎಂದು ತಿಳಿದಿದ್ದ ಜನರಿಗೆ ನಿರಾಸೆಯಾಗಿದೆ. ಬೇಸಿಗೆ ಮುಗಿದ ನಂತರ ಮಳೆಗಾಲ ಆರಂಭವಾಗಲಿದ್ದು, ಅಷ್ಟರೊಳಗೆ ಬಸ್ ಶೆಲ್ಟರ್ ದುರಸ್ತಿ ಮಾಡುವಂತೆ ಬಸ್ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.ಖಾಸಗಿ ವ್ಯಕ್ತಿಗಳಕೈವಾಡದ ಶಂಕೆ
ಕಳೆದೆರಡು ತಿಂಗಳ ಹಿಂದಿನವರೆಗೆ ಬಸ್ ಶೆಲ್ಟರ್ ಸುಸ್ಥಿತಿಯಲ್ಲಿತ್ತು. ಆದರೆ, ಬಸ್ ಶೆಲ್ಟರ್ ಜಾಗವನ್ನು ಅತಿಕ್ರಮಿಸುವ ಸಲುವಾಗಿ ಖಾಸಗಿ ವ್ಯಕ್ತಿಗಳು ಬಸ್ ನಿಲುಗಡೆ ತಾಣದಲ್ಲಿನ ಕಬ್ಬಿಣದ ವಸ್ತುಗಳನ್ನು ಕಿತ್ತು ಶೆಲ್ಟರ್ ಇದ್ದೂ ಇಲ್ಲದಂತೆ ಮಾಡಿದ್ದಾರೆ. ಈ ಬಗ್ಗೆಯೂ ತನಿಖೆ ನಡೆಸಬೇಕು ಹಾಗೂ ಬಸ್ ಶೆಲ್ಟರ್ ಸುಸ್ಥಿತಿಗೆ ತರಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.