ಸುಗ್ಗಿಯ ಸಮೃದ್ಧಿ ಸಂಕೇತ ಎಳ್ಳ ಅಮಾವಾಸ್ಯೆ

KannadaprabhaNewsNetwork |  
Published : Jan 11, 2024, 01:30 AM IST
ಎಳ್ಳ ಅಮಾವಾಸ್ಯೆ ಹಬ್ಬದ ನಿಮಿತ್ತ ರೈತಾಪಿ ವರ್ಗದವರು ಕುಟುಂಬ ಸಮೇತವಾಗಿ ಎತ್ತಿನ ಬಂಡೆಯಲ್ಲಿ ಜಮೀನುಗಳಿಗೆ ತೆರಳುತ್ತಿರುವ ದೃಶ್ಯ. (ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಎಳ್ಳ ಅಮಾವಾಸ್ಯೆ ಚರಗ ಚೆಲ್ಲಿ, ಭೂಮಿ ತಾಯಿ ಪೂಜಿಸಿ ಆರಾಧಿಸುವ ರೈತರ ಹಬ್ಬ.

ಮಲ್ಲಯ್ಯ ಪೋಲಂಪಲ್ಲಿ

ಕನ್ನಡಪ್ರಭ ವಾರ್ತೆ ಶಹಾಪುರ

ಎಳ್ಳ ಅಮಾವಾಸ್ಯೆ ಹಬ್ಬ ರೈತರ ಹಬ್ಬವಾಗಿದ್ದು, ಜಾತಿ, ಮತ ಭೇದವಿಲ್ಲ. ಒಕ್ಕಲುತನ ಅವಲಂಬಿಸಿರುವ ಮುಸ್ಲಿಂ ಕುಟುಂಬಗಳೂ ಎಳ್ಳು ಅಮಾವಾಸ್ಯೆಯೆಂದು ಹೊಲಕ್ಕೆ ಹೋಗಿ ಚೆರಗ ಚೆಲ್ಲುವುದು ಈ ಭಾಗದಲ್ಲಿ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ.

ರೈತ ಮಹಿಳೆಯರು ಬಗೆ ಬಗೆಯ ಖಾದ್ಯ ಮಾಡಿಕೊಂಡು ಭೂತಾಯಿಗೆ ಪೂಜಿಸಿ, ಸಹಭೋಜನ ಮಾಡಿ ಸಂಭ್ರಮಿಸುತ್ತಾರೆ.

ಎಳ್ಳು ಅಮಾವಾಸ್ಯೆ ದಿನ ರೈತರು, ರೈತ ಮಹಿಳೆಯರು ಹಾಗೂ ಮಕ್ಕಳು ಸೇರಿ ಮನೆ ಮಂದಿ ಚಕ್ಕಡಿ, ಟ್ರ್ಯಾಕ್ಟರ್​ನಲ್ಲಿ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗುತ್ತಾರೆ. ಎಳ್ಳು ಹಚ್ಚಿದ ಸಜ್ಜೆರೊಟ್ಟಿ, ಬರ್ತಾ, ಎಳ್ಳು ಕಡುಬು, ಕರಿಗಡಬು, ಎಣ್ಣೆ ಬದನೆಕಾಯಿ ಪಲ್ಲೆ, ಹಪ್ಪಳ, ಸೆಂಡಿಗೆ ವಿವಿಧ ಖಾದ್ಯಗಳನ್ನು ತಯಾರಿಸಿ ಕಟ್ಟಿಕೊಂಡು ಹೊಲಕ್ಕೆ ಹೋಗಿ, ಬೆಳೆದು ನಿಂತಿರೋ ಜೋಳ, ಕಡಲೆ ಸೇರಿ ಹಿಂಗಾರು ಬೆಳೆಯಲ್ಲಿ 5 ಕಲ್ಲಿನಿಂದ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ‘ಹುಲ್ಲು ಹುಲ್ಲಿಗೋ ಚೆಲ್ಲ ಚೆಲ್ಲಂಬರಿಗೋ’ ಎಂದು ಹೇಳುತ್ತಾ ಹೊಲದಲ್ಲಿನ ಬೆಳೆಗಳಿಗೆ ಚರಗ ಚೆಲ್ಲುತ್ತಾರೆ. ಬಳಿಕ ಹೊಲದಲ್ಲಿ ಎಲ್ಲರೂ ಸೇರಿ ಸಹಭೋಜನ ಮಾಡುತ್ತಾರೆ.

ವೈಜ್ಞಾನಿಕ ಕಾರಣ: ಎಳ್ಳ ಅಮಾವಾಸ್ಯೆಯ ಸಮಯದಲ್ಲಿ ಹಿಂಗಾರು ಬೆಳೆಗಳು ಬೆಳೆದಿರುತ್ತವೆ. ಉತ್ತರ ಕರ್ನಾಟಕದಲ್ಲಿ ಹೆಚ್ಚಾಗಿ ಜೋಳ ಮತ್ತು ಕಡಲೆಯನ್ನು ಬೆಳೆಯುತ್ತಾರೆ. ಹಾಗಾಗಿ ಜೋಳದ ಮಧ್ಯೆ ಕಡಲೆ ಬೆಳೆಗೆ ಕಾಯಿಕೊರಕ ಹುಳುವು ಬಿದ್ದು, ಬೆಳೆಯ ನಾಶಕ್ಕೆ ಕಾರಣವಾಗುತ್ತದೆ. ಆದ್ದರಿಂದ ನಾನಾ ಬಗೆಯ ಖಾದ್ಯಗಳನ್ನು ಚರಗ ಚೆಲ್ಲಿದಾಗ ಅವುಗಳನ್ನು ತಿನ್ನುವ ಸಲುವಾಗಿ ಹಕ್ಕಿಗಳು ಹೊಲಕ್ಕೆ ಬಂದಾಗ ಈ ಹುಳಗಳನ್ನು ಕಂಡು ಅವುಗಳನ್ನು ತಿನ್ನುತ್ತವೆ. ಇದರಿಂದ ಕಾಯಿಕೊರಕದ ಹುಳುಗಳ ನಿಯಂತ್ರಣವಾಗುತ್ತದೆ. ಈ ಕಾರಣಕ್ಕಾಗಿ ಚರಗ ಚೆಲ್ಲುವ ಹಬ್ಬವನ್ನು ಆಚರಿಸುತ್ತಾರೆ.

ಎಳ್ಳ ಅಮಾವಾಸ್ಯೆ ಮೂರು, ನಾಲ್ಕು ದಿನವಿರುವಾಗಲೇ ರೈತರ ಮನೆಗಳಲ್ಲಿ ಸಂಭ್ರಮ ಶುರುವಾಗುತ್ತದೆ. ಎಳ್ಳು ಹಾಗೂ ಶೇಂಗಾ ಹೋಳಿಗೆ, ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ, ಚಟ್ನಿ, ಕಾಳು, ಎಣ್ಣೆಗಾಯಿ, ಚಿಕ್ಕಿ, ಬರ್ತಾ, (ಹಸಿ ಉಳ್ಳಾಗಡ್ಡಿ ತಪ್ಪಲ, ಪಾಲಕ್ ಮೆಂತ್ಯೆ, ಉಪಯೋಗಿಸಿ ತಯಾರಿಸುವ ಪಲ್ಲೆ), ಮೆಂತೆ ಕಡಬು, ಭಜ್ಜಿ ಸೇರಿದಂತೆ ನಾನಾ ಬಗೆಯ ಖಾದ್ಯವನ್ನು ತಯಾರಿಸಿ ನಂತರ ರೈತಾಪಿ ವರ್ಗದವರು ಕುಟುಂಬ ಸಮೇತರಾಗಿ ತಮ್ಮ ಹೊಲಗಳಿಗೆ ಹೋಗಿ ಚರಗ ಚೆಲ್ಲಿ ಪೂಜೆ ಮಾಡಿದ ನಂತರ ಬಂಧು-ಮಿತ್ರರ ಸಮೇತ ಸಹಭೋಜನ ಸವಿದು ಸಂಭ್ರಮಿಸುತ್ತಾರೆ.

ಶ್ರಾದ್ಧ ಕಾರ್ಯ: ಈ ದಿನ ಮಹಾಭಾರತದಲ್ಲಿ ಪಾಂಡವರು ಕುರುಕ್ಷೇತ್ರ ಯುದ್ಧದಲ್ಲಿ ಮಡಿದ ಅವರ ಬಂಧಗಳಿಗೆ ತರ್ಪಣ ಬಿಟ್ಟಿರುವ ದಿನ. ಹಾಗಾಗಿ ಈ ದಿನ ಶ್ರದ್ಧಾ ಕಾರ್ಯಗಳನ್ನು ಮಾಡಲು ಸೂಕ್ತವಾದ ದಿನವಾಗಿದೆ. ಈ ದಿನ ತರ್ಪಣ ಬಿಟ್ಟು, ಬಡವರಿಗೆ ಊಟ ಹಾಕಿ, ದಾನ ನೀಡಿ ಶ್ರದ್ಧಾ ಕಾರ್ಯಗಳನ್ನು ಮಾಡುವುದರಿಂದ ಬದುಕಿನಲ್ಲಿ ಶಾಂತಿ, ನೆಮ್ಮದಿ ಇರುತ್ತದೆಯೆಂಬ ನಂಬಿಕೆಯಿದೆ. ವಿಶೇಷವಾಗಿ ಎಳ್ಳನ್ನು ದಾನ ಮಾಡುತ್ತಾರೆ. ಎಳ್ಳಿಗೆ ಪಾಪ ನಾಶಮಾಡುವ ಶಕ್ತಿಯಿದೆ ಎನ್ನುವ ನಂಬಿಕೆ ಜನರಲ್ಲಿದೆ. ಒಳ್ಳೆಯ ಫಲ, ಒಳ್ಳೆಯ ಮಳೆ, ಒಳ್ಳೆಯ ಬಿಸಿಲು, ಒಳ್ಳೆಯ ನೀರು ಇವೆಲ್ಲವೂ ಈ ಭೂಮಿ ತಾಯಿಯ ವರ. ಭೂತಾಯಿ ಚೆನ್ನಾಗಿದ್ದರೆ ಸಕಲ ಜೀವಗಳು ಬದುಕಿ ಉಳಿಯುತ್ತವೆ. ಎಳ್ಳ ಅಮಾವಾಸ್ಯೆ ದಿನ ಭೂತಾಯಿಯನ್ನು ಪೂಜಿಸಿ ಗೌರವಿಸಿ ಸಂಭ್ರಮಿಸುವ ದಿನ.

- ಬಸಪ್ಪ ಪೂಜಾರಿ, ದೋರನಹಳ್ಳಿ ಗ್ರಾಮದ ರೈತ.ಎಳ್ಳು ಹಾಗೂ ಶೇಂಗಾ ಹೋಳಿಗೆ, ಎಳ್ಳು ಹಚ್ಚಿದ ಸಜ್ಜೆ, ಜೋಳದ ರೊಟ್ಟಿ, ಚಟ್ನಿ, ಕಾಳು, ಎಣ್ಣೆಗಾಯಿ, ಚಿಕ್ಕಿ, ಬರ್ತಾ, (ಹಸಿ ಉಳ್ಳಾಗಡ್ಡಿ ತಪ್ಪಲ, ಪಾಲಕ್ ಮೆಂತ್ಯೆ, ಉಪಯೋಗಿಸಿ ತಯಾರಿಸುವ ಪಲ್ಲೆ), ಮೆಂತೆ ಕಡಬು, ಭಜ್ಜಿ ಹಬ್ಬದ ದಿನ ಮಡಿಯಲ್ಲಿ ಅಡಿಗೆ ಮಾಡಿಕೊಂಡು ಹೊಲಕ್ಕೆ ಹೋಗಿ ಚರಗ ಚೆಲ್ಲುವ ಸಂಪ್ರದಾಯ ನಮ್ಮ ಹಿರಿಯರಿಂದಲೂ ಮಾಡಿಕೊಂಡು ಬರುತ್ತಿದ್ದೇವೆ.

- ಅನ್ನಪೂರ್ಣ ಸಗರ ಗ್ರಾಮದ ರೈತ ಮಹಿಳೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ