ದೋಷ ಪೂರಿತ ಟ್ಯಾಬ್‌ ನೀಡಿದ್ದ ಅಮೆಜಾನ್‌ ಹಣ ವಾಪಸ್‌ ನೀಡಲು ನಕಾರ<bha>;</bha> ಗ್ರಾಹಕ ವೇದಿಕೆಯಿಂದ ದಂಡ!

KannadaprabhaNewsNetwork |  
Published : Jan 16, 2024, 01:49 AM IST
ಅಮೆಜಾನ್‌ | Kannada Prabha

ಸಾರಾಂಶ

ಗ್ರಾಹಕನಿಗೆ ಡೆಲಿವರಿ ನೀಡಿದ್ದ ದೋಷಪೂರಿತ ಸ್ಯಾಮ್‌ಸಂಗ್ ಟ್ಯಾಬ್ ವಾಪಸ್ ಪಡೆದು ಹಣವನ್ನು ವಾಪಸ್‌ ನೀಡದ ಅಮೆಜಾನ್‌ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಗ್ರಾಹಕನಿಗೆ ಬಡ್ಡಿ ಸಮೇತ ಟ್ಯಾಬ್ ಮೊತ್ತವನ್ನು ಮರಳಿಸುವಂತೆ ದಂಡ ವಿಧಿಸಿ ಆದೇಶ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರಾಹಕನಿಗೆ ಡೆಲಿವರಿ ನೀಡಿದ್ದ ದೋಷಪೂರಿತ ಸ್ಯಾಮ್‌ಸಂಗ್ ಟ್ಯಾಬ್ ವಾಪಸ್ ಪಡೆದು ಹಣವನ್ನು ವಾಪಸ್‌ ನೀಡದ ಅಮೆಜಾನ್‌ಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಗ್ರಾಹಕನಿಗೆ ಬಡ್ಡಿ ಸಮೇತ ಟ್ಯಾಬ್ ಮೊತ್ತವನ್ನು ಮರಳಿಸುವಂತೆ ದಂಡ ವಿಧಿಸಿ ಆದೇಶ ನೀಡಿದೆ.

ಖರೀದಿದಾರರು ಮತ್ತು ವಸ್ತು ಮಾರಾಟ ಮಾಡುವವರಿಗೆ ನಾವು ಆನ್‌ಲೈನ್ ಪ್ಲಾಟ್‌ಫಾರಂ ಮಾತ್ರ ಒದಗಿಸಿದ್ದೇವೆ ಎಂಬ ಅಮೆಜಾನ್ ವಾದವನ್ನು ತಿರಸ್ಕರಿಸಿರುವ ವೇದಿಕೆ, ರಿಫಂಡ್ ಮಾಡುತ್ತೇವೆ ಎಂದು ಇ ಮೇಲ್ ಮೂಲಕ ಗ್ರಾಹಕನಿಗೆ ನೀಡಿರುವ ಭರವಸೆಯಂತೆ ನಡೆದುಕೊಳ್ಳಲು ಸೂಚಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಪ್ರಕಾಶ್ ಎಂಬುವರು ಆನ್‌ಲೈನ್ ವ್ಯಾಸಂಗಕ್ಕಾಗಿ ಅಮೆಜಾನ್‌ನಿಂದ 19,990 ರು. ಮೌಲ್ಯದ ‘ನವೀಕೃತ’ ಸ್ಯಾಮ್‌ಸಂಗ್ ಟ್ಯಾಬ್ ಅನ್ನು ಇಎಂಐ ಮೂಲಕ ಖರೀದಿಸಿದ್ದರು. ಆದರೆ, ಡೆಲಿವರಿ ನೀಡಿದ ಟ್ಯಾಬ್‌ ಜೊತೆಗೆ ಬೇರೆ ಕಂಪನಿಯ ಚಾರ್ಜರ್ ಇತ್ತು. ತಪ್ಪು ಆರ್ಡರ್ ಡೆಲಿವರಿ ವಿಚಾರವನ್ನು ಅಮೆಜಾನ್‌ಗೆ ತಿಳಿಸಿದ ಪ್ರಕಾಶ್, ಕೂಡಲೇ ಟ್ಯಾಬ್ ಹಾಗೂ ಚಾರ್ಜರ್‌ ಅನ್ನು ವಾಪಸ್ ಮರಳಿಸಿದ್ದರು. ಪೂರ್ತಿ ಹಣವನ್ನು ರಿಫಂಡ್ ಮಾಡುವುದಾಗಿ ಇ ಮೇಲ್ ಮೂಲಕ ತಿಳಿಸಲಾಗಿತ್ತು. ಆದರೆ, ತಿಂಗಳು ಕಳೆದರೂ ಹಣ ಮರಳಿಸದೆ ಬರೀ ನೆಪವನ್ನು ಹೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ನವೀನ್, ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.

ವೇದಿಕೆಯಲ್ಲಿ ತನ್ನ ವಾದ ಮಂಡಿಸಿದ ಅಮೆಜಾನ್ ಪರ ವಕೀಲರು, ಮಾರಾಟಗಾರರು ಮತ್ತು ಖರೀದಿದಾರರಿಗೆ ಅಮೆಜಾನ್ ಆನ್‌ಲೈನ್ ವೇದಿಕೆ ನೀಡುತ್ತದೆ. ಇಂಟರ್ನೆಟ್ ಇರುವ ಎಲ್ಲರೂ ನಮ್ಮ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಪ್ರಕರಣದಲ್ಲಿ ‘ಕಿಜ್ಮೋಸ್ ಐಎನ್‌ಸಿ’ ಎಂಬ ಸ್ವತಂತ್ರ ಥರ್ಡ್‌ ಪಾರ್ಟಿ ಸೆಲ್ಲರ್‌ ಮೂಲಕ ಟ್ಯಾಬ್ ಮಾರಾಟವಾಗಿದೆ. ಹೀಗಾಗಿ, ರಿಫಂಡ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದಿದ್ದರು.

ಆದರೆ, ಗ್ರಾಹಕನಿಂದ ಟ್ಯಾಬ್ ರಿಟರ್ನ್ ಆಗಿರುವ ಬಗ್ಗೆ ಸ್ವೀಕೃತಿ ಮತ್ತು ಪೂರ್ಣ ಮೊತ್ತ ರಿಫಂಡ್ ಮಾಡುವುದಾಗಿ ಇ ಮೇಲ್ ಮೂಲಕ ಸ್ಪಷ್ಟವಾಗಿ ತಿಳಿಸಲಾಗಿದೆ. ಆದರೆ, ವಿಚಾರಣೆ ಸಂದರ್ಭದಲ್ಲಿ ರಿಫಂಡ್ ಮಾಡದಿರಲು ನೀಡಿರುವ ಕಾರಣಗಳನ್ನು ಪರಿಗಣಿಸುವ ಅಗತ್ಯವೇ ಇಲ್ಲ ಎಂದು ವೇದಿಕೆ ಅಭಿಪ್ರಾಯಪಟ್ಟಿದೆ.

ಟ್ಯಾಬ್ ಮೊತ್ತ 19,990 ರುಪಾಯಿ ಜೊತೆಗೆ ಪರಿಹಾರ ರೂಪದಲ್ಲಿ ಶೇ. 8ರಷ್ಟು ಬಡ್ಡಿಯನ್ನು ಹಾಗೂ ಕಾನೂನು ಹೋರಾಟದ ಶುಲ್ಕವಾಗಿ 3 ಸಾವಿರ ರು.ವನ್ನು ದೂರುದಾರರಿಗೆ ನೀಡಬೇಕು ಎಂದು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಮೆಜಾನ್‌ಗೆ ಆದೇಶಿಸಿದೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ