ಹೊಸಪೇಟೆ: ಪ್ರಸ್ತುತ ಸಮಾಜದಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲದೇ ಸಾಮಾಜಿಕ ಮತ್ತು ಶೈಕ್ಷಣಿಕ ಹೀಗೆ ಎಲ್ಲ ಹಂತದಲ್ಲಿಯೂ ಪ್ರತಿಯೊಬ್ಬರಿಗೂ ಸಮಾನತೆ ಸಿಗಬೇಕಾದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಬೃಹತ್ ಸಂವಿಧಾನವೇ ಕಾರಣ ಎಂದು ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗಣ್ಣ ಕಿಲಾರಿ ಅಭಿಪ್ರಾಯ ವ್ಯಕ್ತಪಡಿಸಿದರು.ನಗರದ ಶಂಕರ್ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ, ಕಾಲೇಜು ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಸೊಮವಾರ ನಡೆದ ಭೀಮಾ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯಪ್ಪ ಮಾತನಾಡಿ, ಸಮಾಜದ ಪ್ರಮುಖ ಸುಧಾರಕರಾದ ಡಾ. ಬಿ.ಆರ್. ಅಂಬೇಡ್ಕರ್, ಬುದ್ಧ ಮತ್ತು ಬಸವಣ್ಣನವರ ವಿಚಾರಧಾರೆಗಳನ್ನು ಸಂಗೀತದ ಮೂಲಕ ಜನರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ಕಾರ್ಯಕ್ರಮ ರಾಜ್ಯದಲ್ಲಿ 12 ಆಯ್ದ ಜಿಲ್ಲೆಗಳಲ್ಲಿ ಮಾತ್ರ ನಡೆಯುತ್ತಿದ್ದು, ಅದರಲ್ಲಿ ಜಿಲ್ಲೆಯ ಶಂಕರ್ ಆನಂದಸಿಂಗ್ ಕಾಲೇಜು ಕೂಡ ಒಂದಾಗಿದೆ. ಈ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಹೋರಾಟ ಮತ್ತು ಇತರ ಸುಧಾರಕರ ತತ್ವಗಳನ್ನರಿತು ತಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಕಾಲೇಜಿನ ಪ್ರಾಧ್ಯಾಪಕರಾದ ಸಿ.ದೇವಣ್ಣ, ದ್ವಾರಕಸ್ವಾಮಿ, ಗುರುರಾಜ್ ಉಪಸ್ಥಿತರಿದ್ದರು. ಮೈಸೂರಿನ ’ಅಮ್ಮ ವಸುಂಧರ’ ತಂಡದವರು ಭೀಮನ ತತ್ವಾದರ್ಶಗಳನ್ನು ಸ್ವರಗಳಲ್ಲಿ ಪ್ರಸ್ತುತಪಡಿಸಿದರು. ಆಕಾಶವಾಣಿ ಡಾ.ನವೀನ್ ಮಸ್ಕಲ್ ಕಾರ್ಯಕ್ರಮ ನಿರೂಪಿಸಿದರು.