ಅಂಧಕಾರದಲ್ಲಿ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ ಕಾರ್ಯಾಲಯ!

KannadaprabhaNewsNetwork | Published : Mar 3, 2025 1:49 AM

ಸಾರಾಂಶ

ಮಡಿಕೇರಿಯಲ್ಲಿರುವ ಡಾ. ಬಿ. ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ ಸರ್ಕಾರದ ನಿರ್ಲಕ್ಷ್ಯದಿಂದ ಹಲವು ಸಮಸ್ಯೆ ಎದುರಿಸುವಂತಾಗಿದೆ.

ಮೋಹನ್ ರಾಜ್

ಕನ್ನಡಪ್ರಭ ವಾರ್ತೆ ಮಡಿಕೇರಿ

ದಲಿತ ಸಮುದಾಯಗಳ ಅಭಿವೃದ್ದಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಾಗಿರುವ ಮಡಿಕೇರಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಾರ್ಯಾಲಯ ಸರ್ಕಾರದ ನಿರ್ಲಕ್ಷ್ಯದಿಂದ ಮೂಲಭೂತ ಸೌಕರ್ಯ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ವಿದ್ಯುತ್‌ ಪೂರೈಕೆ ಕಡಿತವಾಗಿ ಕಚೇರಿ ಅಕ್ಷರಶಃ ಕತ್ತಲಿನಲ್ಲಿದೆ!

ನಿಗಮದ ಜಿಲ್ಲಾ ವ್ಯವಸ್ಥಾಪಕರು ಹಾಗೂ ಆರು ಮಂದಿ ಸಿಬ್ಬಂ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರ‍್ಯಾರಿಗೂ ಕಳೆದ ಆರು ತಿಂಗಳುಗಳಿನಿಂದ ವೇತನ ದೊರೆತ್ತಿಲ್ಲ. ಇದರಿಂದಾಗಿ ಜಿಲ್ಲಾ ವ್ಯವಸ್ಥಾಪಕರು ಸೇರಿದಂತೆ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸಂಕಷ್ಟ ಅನುಭವಿಸುವಂತಾಗಿದೆ.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಸಂಬಂದಿಸಿದಂತೆ ಎರಡು ಬಾಡಿಗೆ ಕಟ್ಟಡದಲ್ಲಿ ಕಚೇರಿ ನಿರ್ವಹಿಸುತ್ತಿದ್ದು, ಎರಡೂ ಕಟ್ಟಡಗಳಿಗೆ ಕಳೆದ ಆರು ತಿಂಗಳಿನಿಂದ ಸರ್ಕಾರದಿಂದ ಬಾಡಿಗೆ ಪಾವತಿಯಾಗಿಲ್ಲ ಎನ್ನಲಾಗಿದೆ. ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಕಚೇರಿಯ ದೂರವಾಣಿ ಸ್ತಬ್ಧಗೊಂಡಿದ್ದು, ಚೆಸ್ಕಾಂ ಇಲಾಖೆಗೆ ಸುಮಾರು 2 ಲಕ್ಷದ 42 ಸಾವಿರ ರು.ಗಳ ವಿದ್ಯುತ್ ಬಿಲ್ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಕಚೇರಿಯ ವಿದ್ಯುತ್ ಸಂಪರ್ಕವನ್ನು ಚೆಸ್ಕಾಂ ಇಲಾಖೆ ಕಡಿತಗೊಳಿಸಿದೆ. ವಿದ್ಯುತ್ ಕಡಿತಗೊಳಿಸಿರುವ ಹಿನ್ನೆಲೆ ಬೆಳಕಿಲ್ಲದೇ ಕಚೇರಿಯ ಸಿಬ್ಬಂದಿ ಕತ್ತಲಲ್ಲಿ ಕಾರ್ಯನಿರ್ವಹಿಸಬೇಕಾದ ಸ್ಥಿತಿ ಬಂದೊದಗಿದೆ. ಇನ್ನು ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಸಿಗುವ ಸವಲತ್ತು ದೂರದ ಮಾತಾಗಿದೆ. ಸರ್ಕಾರದ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಚೇರಿಯ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ದಲಿತ ಸಂಘರ್ಷ ಸಮಿತಿ ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಳ್ಳುವಂತೆ ಆಗ್ರಹಿಸಿದೆ.

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಇಲಾಖಾಧಿಕಾರಿ ಹಾಗೂ ಗುತ್ತಿಗೆ ನೌಕರರಿಗೆ ವೇತನ ಸಿಗುತ್ತಿಲ್ಲ. ಅಲ್ಲದೇ ಫಲಾನುಭವಿಗಳಿಗೆ ಸರಿಯಾದ ಸವಲತ್ತು ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೂಡಲೇ ಸಂಬಂಧಿಸಿದ ಸಚಿವರು ಈ ಬಗ್ಗೆ ಗಮನ ಹರಿಸಿ, ಕೂಡಲೇ ಸಿಬ್ಬಂದಿಗೆ ವೇತನ, ಕಚೇರಿ ಕಟ್ಟಡದ ಬಾಡಿಗೆ ಪಾವತಿಸುವುದು ಸೇರಿದಂತೆ ಕಚೇರಿಯ ಅವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ.

। ಪಾಲಾಕ್ಷ, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಯೋಜಕ ಹಾಗೂ ದಲಿತ ಒಕ್ಕೂಟದ ಅಧ್ಯಕ್ಷ

ಕಚೇರಿ ನಿರ್ವಹಣೆ ಹಾಗೂ ಫಲಾನುಭವಿಗಳಿಗೆ ಸವಲತ್ತು ಸೇರಿದಂತೆ ಕಳೆದ ಜೂನ್ ತಿಂಗಳಿನಿಂದ ಕೇಂದ್ರ ಕಚೇರಿಯಿಂದ ಸರ್ಕಾರಿ ಖಜಾನೆಯ ಮೂಲಕ ಬಿಲ್ ಪಾವತಿಸಬೇಕೆಂಬ ನಿರ್ದೇಶನವಿದೆ. ಆದರೆ ವೇತನ, ಕಟ್ಟಡ ಬಾಡಿಗೆ ಯಾವುದು ಈ ವರೆಗೆ ಪಾವತಿಯಾಗಿಲ್ಲ. ತಾಂತ್ರಿಕ ಕಾರಣಗಳಿಂದಾಗಿ ಸಮಸ್ಯೆಯಾಗಿರಬಹುದು.

। ಚಂದ್ರಪ್ಪ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ.

Share this article