ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಡಾ.ಬಿ.ಆರ್.ಅಂಬೇಡ್ಕರ್ ದೇಶದ ಪ್ರತಿಯೊಬ್ಬರಿಗೂ ಸಂವಿಧಾನದ ಮೂಲಕ ಸಮಾನ ಹಕ್ಕು ಮತ್ತು ಅವಕಾಶ ನೀಡಿದ್ದಾರೆ. ಹಾಗಾಗಿ ಎಲ್ಲರೂ ಅಂಬೇಡ್ಕರ್ ಅವರನ್ನು ಸ್ಮರಿಸಬೇಕು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಪಟ್ಟಣದ ಪುರಸಭೆ ಬಯಲು ರಂಗ ಮಂದಿರದಲ್ಲಿ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಯೋಜಿಸಿದ್ದ ಡಾ.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಬೇಡ್ಕರ್ ಜಯಂತಿಯನ್ನು ದಲಿತರು ಮಾತ್ರ ಸ್ಮರಿಸುವ ದಿನವಾಗಬಾರದು ಎಂದರು.
ಅಂಬೇಡ್ಕರ್ ದೇಶದ ಜನರಿಗೆ ದೊಡ್ಡ ಶಕ್ತಿಯಾಗಿದ್ದಾರೆ. ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಒಂದು ವರ್ಗಕ್ಕೆ ಕಾನೂನು ಮಾಡಿಲ್ಲ. ದೇಶದ ಜನ ನೆಮ್ಮದಿಯಿಂದಿರಲು ಸಂವಿಧಾನ ಹಾಗೂ ಅಂಬೇಡ್ಕರ್ ಕಾರಣ ಎಂದು ಪ್ರತಿಪಾದಿಸಿದರು. ಅಂಬೇಡ್ಕರ್ ಸ್ಮರಣೆ ಏ.14 ಕ್ಕೆ ಸೀಮಿತವಾಗಬಾರದು. ಪ್ರತಿ ನಿತ್ಯ ಅಂಬೇಡ್ಕರ್ ಹಾಗೂ ಸಂವಿಧಾನ ನೆನಪು ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರ ಶಾಲೆಗಳಲ್ಲಿ ಪ್ರತಿ ನಿತ್ಯ ಸಂವಿಧಾನ ಪೀಠಿಕೆ ಓದಲು ಆದೇಶ ನೀಡಿದೆ ಎಂದರು.ಅಂಬೇಡ್ಕರ್‌ರನ್ನು ಗೌರವಿಸಬೇಕು. ಜೊತೆಗೆ ಅವರ ಹಾದಿಯಲ್ಲಿ ನಡೆಯಬೇಕು. ಮೀಸಲಾತಿ ಬೇಕು-ಬೇಡ ಎಂಬ ವಿಷಯ ಚರ್ಚೆಯಲ್ಲಿದೆ ಆದರೆ ಮೀಸಲಿಗಿಂತ ನಮ್ಮ ಶಕ್ತಿಯ ಮೇಲೆ ಸ್ಥಾನ ಪಡೆದುಕೊಳ್ಳಬೇಕು ಎಂದರು. ಸಂಸದರಾಗಿದ್ದ ವಿ.ಶ್ರೀನಿವಾಸ್ ಪ್ರಸಾದ್, ಆರ್.ಧ್ರುವನಾರಾಯಣ, ರಾಜ್ಯಪಾಲರಾಗಿದ್ದ ಬಿ.ರಾಚಯ್ಯ ಜಿಲ್ಲೆಗೆ ಹಾಗೂ ಸಮುದಾಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು. ಪುರಸಭೆ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ ಮಾತನಾಡಿದರು.
ಸಮಾರಂಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸೇವೆಗೈದ ಗಣ್ಯರನ್ನು ಶಾಸಕರು ಸನ್ಮಾನಿಸಿ ಅಭಿನಂದಿಸಿದರು.ಅದ್ಧೂರಿ ಮೆರವಣಿಗೆ:ಪುರಸಭೆ ಕಚೇರಿಯಿಂದ ಬೆಳ್ಳಿ ರಥದಲ್ಲಿ ಡಾ.ಅಂಬೇಡ್ಕರ್ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ನೂರಾರು ಮಂದಿ ಮೆರವಣಿಗೆಯಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಜಿ.ಎಸ್.ಮಧಸೂದನ್, ತಹಸೀಲ್ದಾರ್ ಟಿ.ರಮೇಶ್ ಬಾಬು, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಎ.ಷಣ್ಮುಗಂ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಪೊಲೀಸ್ ಇನ್ಸ್‌ಪೆಕ್ಟರ್ ಎನ್.ಜಯಕುಮಾರ್, ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್.ಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಚ್.ಅಲಿಂ ಪಾಶ, ಸಿಡಿಪಿಒ ಎಂ.ಹೇಮಾವತಿ, ಪುರಸಭೆ ಸದಸ್ಯರಾದ ಎನ್.ಕುಮಾರ್, ಶ್ರೀನಿವಾಸ್(ಕಣ್ಣಪ್ಪ,ರಾಜಗೋಪಾಲ್, ಎಲ್.ನಿರ್ಮಲ, ಎಡಿಎಲ್‌ಆರ್ ಮಹೇಶ್, ದಲಿತ ಮುಖಂಡ ಸುಭಾಷ್ ಮಾಡ್ರಹಳ್ಳಿ ಸೇರಿದಂತೆ ಹಲವರಿದ್ದರು.
ಸಚಿವ, ಎಂಎಲ್ಸಿ ಗೈರು!ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನಾಚರಣೆಗೆ ಜಿಲ್ಲಾ ಕಾರ್ಯಕ್ರಮ ಇರುವ ಕಾರಣ ಪಶು ಸಂಗೋಪನೆ ಮತ್ತು ರೇಷ್ಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಗೈರಾಗಿದ್ದರು. ನಿರೀಕ್ಷೆಯಂತೆ ಸಂಸದ ಸುನೀಲ್ ಬೋಸ್, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ ಮಾದೇಗೌಡ, ಕೆ.ವಿವೇಕಾನಂದ, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಗೈರಾಗಿದ್ದರು.ಅಂಬೇಡ್ಕರ್ ಭಾರತದ ಭಾಗ್ಯ ವಿಧಾತ: ಚಮರಂ
ಡಾ.ಬಿ.ಆರ್.ಅಂಬೇಡ್ಕರರನ್ನು ವಿದೇಶಗಳಲ್ಲಿ ಜ್ಞಾನದ ಸೂರ್ಯ ಎನ್ನುತ್ತಿದ್ದಾರೆ. ದುರಂತ ಎಂದರೆ ದೇಶದಲ್ಲಿ ಅಂಬೇಡ್ಕರ್ ದಲಿತ ನಾಯಕರಾಗಿದ್ದಾರೆ. ಆದರೆ ಅಂಬೇಡ್ಕರ್ ದಲಿತ ನಾಯಕನಲ್ಲ, ಅವರು ಭಾರತದ ಭಾಗ್ಯ ವಿಧಾತ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕೃಷ್ಣಮೂರ್ತಿ ಚಮರಂ ಹೇಳಿದರು.ಮುಖ್ಯ ಭಾಷಣದಲ್ಲಿ ಮಾತನಾಡಿ, ಅಂಬೇಡ್ಕರರನ್ನು ದೇಶದಲ್ಲಿ ಇನ್ನೂ ದಲಿತ ನಾಯಕರನ್ನಾಗಿ ಇರಿಸಿದ್ದಾರೆ. ಅವರನನ್ನು ಜಾತಿಯಿಂದ ನೋಡೋರು ಕುಬ್ಜರು ಎಂದರು. ಅವರ ಜ್ಞಾನ, ವಿದ್ವತ್ ವಿದೇಶಗಳಲ್ಲಿ ಪಸರಿಸುತ್ತಿವೆ. ಅಂಬೇಡ್ಕರರ 125 ನೇ ಜನ್ಮ ದಿನಾಚರಣೆ ಬಳಿಕ ಅವರ ಶಕ್ತಿ ಏನಂಬುದು ದೇಶದ ಜನರಿಗೆ ಗೊತ್ತಾಗಿದೆ ಎಂದರು.
ದೇಶದ ಜನರು ಮತಕ್ಕಾಗಿ ಎಂದೂ ಪ್ರತಿಭಟಿಸಲಿಲ್ಲ. ಮಹಿಳೆಯರು ಸಮಾನ ಹಕ್ಕು ಕೇಳಿರಲಿಲ್ಲ. ಆದರೂ ಅಂಬೇಡ್ಕರ್ ಜನ ಕೇಳದ ಮತದ ಹಕ್ಕು ಕೊಡಿಸಲು ಕಾರಣರಾದರು. ಅಂಬೇಡ್ಕರ್ ಜಾತಿ, ಧರ್ಮ ಮೀರಿ ದೇಶ ಕಟ್ಟಲು ಹೊರಟರು ಎಂದರು. ನಾವುಗಳು ಜಾತಿ, ಧರ್ಮ ಮೀರಿದ ದೇಶ ಕಟ್ಟಲು ಅಂಬೇಡ್ಕರ್ ಆಶಯದಂತೆ ಹೋಗಬೇಕು. ಜೊತೆಗೆ ದೇಶ ಕಾಪಾಡಲು ಅಣಿಯಾಗಬೇಕು. ಅಂಬೇಡ್ಕರ್ ಕನಸು ನನಸು ಮಾಡಲು ಮುಂದಾಗೋಣ ಎಂದರು.