ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಸಮೀಪದ ಮಣಿಗೆರೆ ಗ್ರಾಮದಲ್ಲಿ ಜೈಭೀಮ್ ಬಾಯ್ಸ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ್ ರವರ 135 ನೇ ಜಯಂತಿ ಉದ್ಘಾಟಿಸಿ ಮಾತನಾಡಿ, ದೇಶದ ಮಹಾನ್ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜ್ಞಾನದಿಂದ ನೀಡಿದ ದೇಶದ ಸರ್ವ ಶ್ರೇಷ್ಠ ಗ್ರಂಥ ಭಾರತ ಸಂವಿಧಾನದಡಿ ಎಲ್ಲಾ ಭಾರತೀಯರಿಗೆ ಸ್ವಾತಂತ್ರ್ಯ, ಸಮಾನತೆ ಮತ್ತು ಭಾತೃತ್ವವನ್ನು ಒದಗಿಸಿ ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದರು.
ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಶೋಷಿತರ ಮತ್ತು ಅಸ್ಪೃಶ್ಯರ ದನಿಯಾಗಿ ಅವರಿಗೆ ಸ್ವಾಭಿಮಾನದ ಬದುಕಿನ ದಾರಿ ತೋರಿದ ಧೀಮಂತ ನಾಯಕರು. ದಮನಿತರ ನಡುವೆ ಸಾಮಾನ್ಯ ವ್ಯಕ್ತಿಯಾಗಿ ಹುಟ್ಟಿ, ತಮ್ಮ ಅಸಾಮಾನ್ಯ ಪ್ರತಿಭೆ, ಅಧ್ಯಯನಶೀಲತೆ ಮತ್ತು ದೂರದೃಷ್ಟಿತ್ವದಿಂದ ಮಹಾನ್ ಶಕ್ತಿಯಾಗಿ ಬೆಳೆದರು ಎಂದರು.ಮೈಸೂರಿನ ಉರಿಲಿಂಗಿಪೆದ್ದಿ ಮಠದ ಪೀಠಾಧ್ಯಕ್ಷ ಶ್ರೀಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ದೇಶಕ್ಕೆ ಸಂವಿಧಾನ ಮೂಲಕ ಭದ್ರ ಬುನಾದಿ ಹಾಕಿಕೊಟ್ಟ ವಿಶ್ವದ ಜ್ಞಾನಸೂರ್ಯ ಡಾ.ಬಿ.ಆರ್. ಅಂಬೇಡ್ಕರ್ ತೋರಿದ ಮಾರ್ಗದಲ್ಲಿ ಸಾಗಿ, ಉತ್ತಮ ಶಿಕ್ಷಣ ಪಡೆದು ಅನ್ಯಾಯದ ವಿರುದ್ಧ ಹೋರಾಟ ನಡೆಸಿ ವೆಲ್ಲರೂ ಸಂಘಟಿತರಾಗಿ ಜೀವನ ಸಾಗಿಸೋಣ ಎಂದರು.
ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಸನ್ಮಾನಿಸಿ ಹಾಗೂ ವಿವಿಧ ಕ್ರೀಡೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.