ಕುಷ್ಟಗಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ ಸಂವಿಧಾನ ರಚಿಸುವ ಮೂಲಕ ಜನರ ಬಾಳಿಗೆ ಬೆಳಕಾಗಿರುವ ಅವರು ವ್ಯಕ್ತಿಯಲ್ಲ ಜಗತ್ತಿನ ಶಕ್ತಿಯಾಗಿದ್ದಾರೆ. ಮತದಾನದ ಹಕ್ಕನ್ನು ನೀಡಿರುವ ಮಹಾನ್ ಚೇತನ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಅಂಬೇಡ್ಕರ ಬರೆದ ಸಂವಿಧಾನ ಇಲ್ಲದಿದ್ದರೆ ಇಂದು ನಾವು ಸುಖದಾಯಕ ಬದುಕು, ಸಮಾನತೆ ಕಾಣಲು ಸಾಧ್ಯವಾಗುತ್ತಿರಲಿಲ್ಲ ಅವರ ಆದರ್ಶ ಆಶಯ ಅಳವಡಿಸಿಕೊಂಡಾಗ ಸುಂದರ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದ ಅವರು, ಶಿಕ್ಷಣವೇ ಬದಲಾವಣೆಯ ಮೂಲವಾಗಿದ್ದು ಪ್ರತಿಯೊಬ್ಬರೂ ಶಿಕ್ಷಣ ಪಡೆದು ಸಮಾನತೆ ಪರಿಕಲ್ಪನೆ ಬದುಕಿನುದ್ದಕ್ಕೂ ಅಳವಡಿಸಿಕೊಂಡು ಶಿಕ್ಷಣವಂತರಾಗಬೇಕು ಎಂದರು.
ಶೈಕ್ಷಣಿಕ ಚಿಂತಕ ಶರಣು ತೆಮ್ಮಿನಾಳ ವಿಶೇಷ ಉಪನ್ಯಾಸ ನೀಡಿ, ಡಾ.ಬಿ.ಆರ್.ಅಂಬೇಡ್ಕರ್ ಕೇವಲ ಒಂದು ಜಾತಿಗೆ ಸೀಮಿತವಲ್ಲ, ದಲಿತ ಸಮುದಾಯಕ್ಕೆ ಮಾತ್ರ ಸೂರ್ಯವಾಗಿಲ್ಲ ಅವರು ಜಗತ್ತನ್ನು ಬೆಳಗಿದ ಮಹಾನ್ ಚೇತನವಾಗಿದ್ದಾರೆ ಅವರು ನಾವು ಸಮಾನತೆಯೊಂದಿಗೆ ಸುಂದರ ಜೀವನ ಕಟ್ಟಿಕೊಳ್ಳಲು ಭಾರತದ ಸಂವಿಧಾನ ಎಂಬ ದೈವ ಗ್ರಂಥ ಕೊಟ್ಟಿದ್ದಾರೆ.ಡಾ. ಬಿ.ಆರ್.ಅಂಬೇಡ್ಕರ್ ಜಯಂತಿ ಜಾತಿ ಧರ್ಮ ಎನ್ನದೆ ಎಲ್ಲರೊಂದಾಗಿ ಆಚರಿಸುವಂತಾಗಬೇಕು ಎಂದ ಅವರು, ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಸಬೇಕಿದೆ ಹೊಸ ಬದುಕಿನ ದಾರಿ ಹೇಳಿಕೊಡಬೇಕಿದೆ ಜಗತ್ತು ಬಹಳಷ್ಟು ಮುಂದುವರಿದಿದ್ದು ಜಗತ್ತಿನ ಜತೆಗೆ ನಾವು ಅಭಿವೃದ್ಧಿಯಾಗಬೇಕಿದೆ ಎಂದರು.ಪುರಸಭೆ ಮಾಜಿ ಸದಸ್ಯ ವಸಂತಕುಮಾರ ಮೇಲಿನಮನಿ ಮಾತನಾಡಿ, ನಾವು ಅಂಬೇಡ್ಕರ್ ಅವರನ್ನು ಮೂರ್ತಿ ರೂಪದಲ್ಲಿ ಕಾಣುವದಕ್ಕಿಂತ ಪುಸ್ತಕ ಪೆನ್ನುಗಳನ್ನು ಬಳಸಿಕೊಂಡು ಉತ್ತಮ ಶಿಕ್ಷಣ ಪಡೆಯುವ ಮೂಲಕ ಉನ್ನತ ಹುದ್ದೆ ಅಲಂಕರಿಸುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಮಾಜಿ ಜಿಪಂ ಸದಸ್ಯ ಕೆ.ಮಹೇಶ, ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಸೇರಿದಂತೆ ಅನೇಕರು ಮಾತನಾಡಿದರು.
ಅದ್ದೂರಿ ಮೆರವಣಿಗೆ: ಕುಷ್ಟಗಿ ಪಟ್ಟಣದ ತಾವರಗೇರಾ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರುವ ಮೂರ್ತಿಗೆ ಮಾಲಾರ್ಪಣೆಗೈದು ಭಾವಚಿತ್ರವನ್ನು ಪೊಲೀಸಠಾಣೆ, ಬಸವೇಶ್ವರ ವೃತ್ತ, ಮಹರ್ಷಿ ವಾಲ್ಮೀಕಿ ವೃತ್ತದ ಮೂಲಕ ಸಾಗಿ ಬಂದು ತಹಸೀಲ್ದಾರ ಕಾರ್ಯಾಲಯ ಸಮೀಪ ಇರುವ ಅಂಬೇಡ್ಕರ ಮೂರ್ತಿಗೆ ಮಾಲಾರ್ಪಣೆಗೈದು ವೇದಿಕೆಯವರೆಗೂ ಅದ್ಧೂರಿಯಾಗಿ ಮೆರವಣಿಗೆ ಮಾಡಿಕೊಂಡು ಬರಲಾಯಿತು. ಮೆರವಣಿಗೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ, ಕಾಡಾ ನಿಗಮ ಅಧ್ಯಕ್ಷ ಹಸನಸಾಬ್ ದೋಟಿಹಾಳ ಸೇರಿದಂತೆ ಅನೇಕರು ಇದ್ದರು.