ಕನ್ನಡಪ್ರಭ ವಾರ್ತೆ ಮೈಸೂರು
ಮಾನಸಗಂಗೋತ್ರಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗವು ಜರ್ನೋತ್ರಿ ಸಭಾಂಗಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತಿ ಅಂಗವಾಗಿ ಗುರುವಾರ ಆಯೋಜಿಸಿದ್ದ ಅಂಬೇಡ್ಕರ್ ಮತ್ತು ಪತ್ರಿಕೋದ್ಯಮ ಕುರಿತ ವಿಚಾರ ಸಂಕಿರಣವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ದನಿ ಇಲ್ಲದವರಿಗೆ ದನಿಯಾಗಲು ಸಂಕೋಚಪಡುವುದಿಲ್ಲ ಮತ್ತು ಹಿಂಜರಿಯುವುದಿಲ್ಲ ಎಂದು ಡಾ. ಅಂಬೇಡ್ಕರ್ 100 ವರ್ಷಗಳ ಹಿಂದೆ ಹೇಳಿದ್ದರು. ಅವರ ಮಾತುಗಳೇ ನಮಗೆ ಪ್ರೇರಣೆ. ಪತ್ರಿಕೋದ್ಯಮದಲ್ಲೂ ಎಲ್ಲಾ ವರ್ಗಗಳ ಜನರ ಪ್ರಾತಿನಿಧ್ಯ ಇರಬೇಕು. ಎಲ್ಲಾ ಅನುಭವ ಲೋಕಗಳು ಬರಬೇಕು. ಇಲ್ಲದಿದ್ದರೆ ಪತ್ರಿಕೋದ್ಯಮ ವಿಕಲಾಂಗವಾಗುತ್ತದೆ ಎಂದು ಅವರು ಹೇಳಿದರು.ಮಾಧ್ಯಮ ಸಮೀಕ್ಷೆಯೊಂದರಲ್ಲಿ ಮಾಧ್ಯಮ ಕಚೇರಿಗಳಲ್ಲಿ ಯಾವ ಜಾತಿಯವರು ಬಹುತೇಕ ಜನರಿದ್ದಾರೆ, ದಲಿತರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ ಎಂಬುದು ಬಹಿರಂಗಗೊಂಡಿತು. ತಳ ಸಮುದಾಯಗಳ ಶೋಷಿತರಿಲ್ಲದ ಮಾಧ್ಯಮಗಳು ನಮ್ಮದು ಅನ್ನಿಸುತ್ತದೆಯೇ ಎಂದು ಅವರು ಪ್ರಶ್ನಿಸಿದರು.
ರಾಷ್ಟ್ರೀಯ ಅಪರಾಧ ದಾಖಲೆ ಪ್ರಕಾರ ನಿಮಿಷಕ್ಕೆ 14 ದಲಿತರ ಮೇಲೆ ದೌರ್ಜನ್ಯ, ದಿನಕ್ಕೆ ನಾಲ್ವರು ದಲಿತ ಮಹಿಳೆಯರ ಮೇಲೆ ದೌರ್ಜನ್ಯ, ವಾರಕ್ಕೆ 13 ಕೊಲೆ ಪ್ರಕರಣಗಳು ದಾಖಲಾಗುತ್ತಿವೆ. ನಮ್ಮ ಅಭಿವೃದ್ಧಿಯ ಕಣ್ಕಟ್ಟಿನಲ್ಲಿ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಕುರುಪವಾಗಿದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿರುವ ಮಾಧ್ಯಮ ಶಾಶ್ವತ ವಿರೋಧ ಪಕ್ಷ. ಪ್ರಸ್ತುತ ಮಾಧ್ಯಮ ಆಡಳಿತ ಪಕ್ಷವಾಗಿ ಕೆಲಸ ಮಾಡುತ್ತಿದೆ. ಕರ್ನಾಟಕದಲ್ಲಿ ಮಾತ್ರ ವಿರೋಧ ಪಕ್ಷವಾಗಿದೆ. ಆಡಳಿತ ಪಕ್ಷಕ್ಕೆ ಕೇಳಬೇಕಾದ ಪ್ರಶ್ನೆಯನ್ನು ವಿರೋಧ ಪಕ್ಷಕ್ಕೆ ಕೇಳಲಾಗುತ್ತಿದೆ. ಪತ್ರಿಕೆಗೆ ಓದುಗ ಒಡೆಯನಾಗಿರಬೇಕು. ಈಗ ಜಾಹೀರಾತು ಒಡೆಯನಾಗಿದೆ. ಪತ್ರಕರ್ತನ ಬದಲಿಗೆ ತಂತ್ರಜ್ಞಾನ ಇದೆ. ಬೆರಳ ತುದಿಯಲ್ಲಿ ಜ್ಞಾನ ಇದೆ. ಸುದ್ದಿಯ ಬದಲಿಗೆ ಜಾಹೀರಾತು ಮುಖ್ಯವಾಗಿದೆ ಎಂದು ಅವರು ವಿಷಾದಿಸಿದರು.ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ದೀಪಕ್, ಮೈಸೂರು ವಿವಿ ಸಿಂಡಿಕೇಟ್ ಸದಸ್ಯ ಡಾ. ನಟರಾಜ್ ಶಿವಣ್ಣ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಅಧ್ಯಯನ ವಿಭಾಗದ ಅಧ್ಯಕ್ಷೆ ಪ್ರೊ.ಎನ್. ಮಮತಾ, ಪ್ರಾಧ್ಯಾಪಕರಾದ ಪ್ರೊ.ಸಿ.ಕೆ. ಪುಟ್ಟಸ್ವಾಮಿ, ಪ್ರೊ.ಎಂ.ಎಸ್. ಸಪ್ನಾ ಮೊದಲಾದವರು ಇದ್ದರು.
‘ಪತ್ರಿಕೋದ್ಯಮದಲ್ಲಿ ಭವಿಷ್ಯ ಇಲ್ಲ. ಪತ್ರಕರ್ತರಾಗಲು ತರಬೇತಿ ಪಡೆಯಬೇಕಾದ ಅಗತ್ಯವೂ ಇಲ್ಲ. ಪರೀಕ್ಷೆಯೂ ಬರೆಯಬೇಕಿಲ್ಲ. ಆಸಕ್ತಿ ಇದ್ದವರು ಪತ್ರಕರ್ತರಾಗಬಹುದು. ಸಾಮಾಜಿಕ ಮಾಧ್ಯಮಗಳನ್ನು ಬಳಿಸಿಕೊಳ್ಳುವುದರ ಜೊತೆಗೆ ಪರ್ಯಾಯ ಮಾಧ್ಯಮವನ್ನು ಯುವಕರು ಶೋಧಿಸಬೇಕು.’- ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತ