ನವಭಾರತದ ನಿರ್ಮಾತೃ ಅಂಬೇಡ್ಕರ್‌: ಮೇ.ಪ್ರೊ.ರಾಘವ ಬಿ.

KannadaprabhaNewsNetwork | Published : Apr 16, 2024 1:05 AM

ಸಾರಾಂಶ

ಅಂಬೇಡ್ಕರ್‌ ಅವರು ನವಭಾರತದ ನಿರ್ಮಾತೃ. ಅವರ ಚಿಂತನೆಗಳು ಆಧುನಿಕ ಭಾರತವನ್ನು ರೂಪಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಂಬೇಡ್ಕರ್ ಅವರು ನವ ಭಾರತದ ನಿರ್ಮಾತೃ. ಅವರ ಚಿಂತನೆಗಳು ಆಧುನಿಕ ಭಾರತವನ್ನು ರೂಪಿಸಿದೆ. ಅವರಿಲ್ಲದೆ ಹೋಗಿದ್ದರೆ ಸಮಾನತೆಯ ಭಾರತದ ಕಲ್ಪನೆ ಸಾಧಿತಗೊಳ್ಳುತ್ತಿರಲಿಲ್ಲ. ಅವರ ಚಿಂತನೆಗಳು ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ಅರ್ಥಿಕ ವಲಯಗಳ ಸಮಷ್ಟಿ ಕ್ರಾಂತಿಗೆ ಕಾರಣವಾಗಿದೆ. ಅವರಂತೆ ಶಿಕ್ಷಣವನ್ನು ಹುಲಿಯ ಹಾಲಿನ ಮೇವಾಗಿಸಿಕೊಂಡು ಘನತೆಯ ಬದುಕನ್ನು ಕಟ್ಟಿಕೊಳ್ಳುವ ಕಡೆಗೆ ನಾವೆಲ್ಲರೂ ಮುನ್ನೆಡೆಯ ಬೇಕಾಗಿದೆ ಎಂದು ಪ್ರಾಂಶುಪಾಲ ಮೇಜರ್ ಪ್ರೊ. ರಾಘವ ಬಿ. ಅಭಿಪ್ರಾಯಪಟ್ಟಿದ್ದಾರೆ.

ನಗರದ ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜಿನಲ್ಲಿ ಜರುಗಿದ ಭಾರತ ರತ್ನ ಡಾ.ಬಿ. ಆರ್. ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಜರ್ ಪ್ರೊ. ರಾಘವ ಅವರು, ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಆದ್ದರಿಂದ ಶಿಕ್ಷಣವನ್ನು ಪಡೆದುಕೊಳ್ಳುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉತ್ಸುಕತೆ ತೋರಬೇಕಾಗಿದೆ ಎಂದರು.

ಮುಖ್ಯ ಭಾಷಣಕಾರರಾಗಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ತಿಪ್ಪೇಸ್ವಾಮಿ ಮಾತನಾಡಿ, ಸಾಮಾಜಿಕ ಗುಲಾಮಗಿರಿಯಿಂದ ಬರಲು ಅಂಬೇಡ್ಕರ್ ಅವರ ಚಿಂತನಾ ಧಾರೆ ಅವಕಾಶ ಕಲ್ಪಿಸಿತು. ಸಮಾನತೆಯ, ಸಾಮಾಜಿಕ ನ್ಯಾಯದ ಬದುಕಿಗೆ ಅಂಬೇಡ್ಕರ್ ಅವರು ಆದರ್ಶಪ್ರಾಯರು. ಮಹಿಳೆಯರು, ಕಾರ್ಮಿಕರು, ಮಕ್ಕಳು, ತುಳಿತಕ್ಕೆ ಒಳಗಾದವರಿಗೆ ಅಂಬೇಡ್ಕರ್ ಅವರು ಆಶಾಕಿರಣವಾಗಿ ಬದುಕನ್ನು ಬೆಳಗಿದರು. ಗೌರವಯುತ ಬದುಕಿಗೆ ಅಂಬೇಡ್ಕರ್ ಅವರು, ಅವರ ಚಿಂತನೆಗಳೇ ನಮಗೆ ಮಾದರಿಯಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ನಾತಕೋತ್ತರ ಕೊಡವ ಭಾಷಾ ವಿಭಾಗದ ಸಂಯೋಜಕ ಹಾಗೂ ಕಾಲೇಜಿನ ಗಣಕವಿಜ್ಞಾನ ವಿಭಾಗದ ಹಿರಿಯ ಪ್ರಾಧ್ಯಾಪಕ ರವಿಶಂಕರ್ ಮಾತನಾಡಿ, ಅಂಬೇಡ್ಕರ್ ಚಿಂತನೆ ಸಾರ್ವಕಾಲಿಕವಾದದ್ದು ಎಂದರು.

ಸಂವಿಧಾನದ ಪ್ರಾಮುಖ್ಯತೆ ಮಹತ್ವದ ಕುರಿತು ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ, ವಿಜ್ಞಾನಿ ಡಾ. ಜೆ. ಜಿ ಮಂಜುನಾಥ್ ತಿಳಿಸಿಕೊಟ್ಟರು.

ಕನ್ನಡ ವಿಭಾಗದ ಅತಿಥಿ ಉಪನ್ಯಾಸಕ ಎಚ್.ಡಿ. ಮುಖೇಶ್ ನಿರೂಪಿಸಿದರು. ಕಾಲೇಜಿನ ಐಕ್ಯೂಎಸಿಯ ಸಂಯೋಜಕ, ಗಣಿತ ವಿಭಾಗದ ಮುಖ್ಯಸ್ಥ ಡಾ. ರಾಜೇಂದ್ರ ಆರ್. ಸ್ವಾಗತಿಸಿದರು. ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ. ರೇಣು ಶ್ರೀ ವಂದಿಸಿದರು. ದ್ವಿತೀಯ ಬಿಸಿಎ ವಿದ್ಯಾರ್ಥಿನಿ ವೈಷ್ಣವಿ ಪ್ರಾರ್ಥಿಸಿದರು.

Share this article