ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ನಗರ ಸಭೆ ಸಹಯೋಗದಲ್ಲಿ ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ನೀರಾವರಿ ಕ್ಷೇತ್ರಕ್ಕೆ ಮುನ್ನೋಟ ಒದಗಿಸಿದ್ದ ಅಂಬೇಡ್ಕರ್, ನದಿ ಜೋಡಣೆಯ ಪರಿಕಲ್ಪನೆಯನ್ನು ಮೊಟ್ಟಮೊದಲ ಬಾರಿಗೆ ಪ್ರತಿಪಾದಿಸಿದ್ದರೆಂದರು.
ಅಂಬೇಡ್ಕರ್ ಎಂದರೆ ಕೇವಲ ಒಬ್ಬ ವ್ಯಕ್ತಿಯಲ್ಲ, ಅವರೊಬ್ಬ ಕ್ರಾಂತಿ ಮತ್ತು ಚಳುವಳಿಯ ಶಕ್ತಿಯಾಗಿದ್ದಾರೆ. ಅಂಬೇಡ್ಕರ್ ಶಿಕ್ಷಣವನ್ನು ಪ್ರಮುಖ ಅಸ್ತ್ರವೆಂದು ನಂಬಿದ್ದರು. ಶಿಕ್ಷಣ ಪುರುಷರಿಗೆ ಸೀಮಿತವಾಗದೆ, ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೂ ಸಮಾನವಾಗಿ ಸಿಗಬೇಕು ಎಂಬುದು ಅವರ ಆಶಯವಾಗಿತ್ತು. ಅಸ್ಪೃಶ್ಯತೆ ಎಂಬ ಅಸಮಾನತೆಯನ್ನು ಹೋಗಲಾಡಿಸಲು ಅವರು ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅವರು ದೇಶದ ಪ್ರತಿಯೊಬ್ಬರಿಗೂ ಮತ್ತು ಎಲ್ಲಾ ಸಮುದಾಯಗಳಿಗೂ ಸೇರಿದ ನಾಯಕರಾಗಿದ್ದಾರೆ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಮಾತನಾಡಿ, ಶತಮಾನಗಳಿಂದ ಶಿಕ್ಷಣದಿಂದ ವಂಚಿತರಾಗಿದ್ದ ಮಹಿಳೆಯರು ಇಂದು ಉದ್ಯೋಗ, ದೇಶ ಸೇವೆ ಮತ್ತು ರಕ್ಷಣಾ ವಲಯಗಳಲ್ಲಿ ಪುರುಷರಿಗೆ ಸಮಾನವಾಗಿ ನಿಲ್ಲಲು ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನವೇ ಕಾರಣ. ಸಂವಿಧಾನದ ಪೀಠಿಕೆಯನ್ನು ಪ್ರತಿಯೊಬ್ಬರೂ ಪಾಲಿಸುವ ಮೂಲಕ ದೇಶದ ಏಕತೆ ಮತ್ತು ಒಗ್ಗಟ್ಟನ್ನು ಕಾಪಾಡಬೇಕು. ಸೂರ್ಯ-ಚಂದ್ರರಿರುವವರೆಗೂ ಸಂವಿಧಾನ ಅಜರಾಮರವಾಗಿರುತ್ತದೆ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳ ಜನರಿಗಾಗಿ ಶ್ರಮಿಸಿರುವ ಸಾಧಕರಿಗೆ ಜಿಲ್ಲಾಮಟ್ಟದ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ್ ರಾಮ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.