ಸಂವಿಧಾನ ಬದಲಿಸುತ್ತೇವೆಂದಿದ್ದವರು ಅಂಬೇಡ್ಕರ್‌ ಹೆಸರೇಳದೇ ಅಸ್ಥಿತ್ವವಿಲ್ಲ ಎಂಬ ಪರಿಸ್ಥಿತಿಗೆ ಬಂದಿದ್ದಾರೆ: ತಮ್ಮಯ್ಯ

KannadaprabhaNewsNetwork |  
Published : Apr 15, 2026, 01:15 AM IST
ಷ | Kannada Prabha

ಸಾರಾಂಶ

ಚಿಕ್ಕಮಗಳೂರುಒಂದು ಕಾಲದಲ್ಲಿ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದವರಿಂದು ಅಂಬೇಡ್ಕರ್ ಅವರ ಹೆಸರೇಳದೆ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

-

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಒಂದು ಕಾಲದಲ್ಲಿ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದವರಿಂದು ಅಂಬೇಡ್ಕರ್ ಅವರ ಹೆಸರೇಳದೆ ಅಸ್ತಿತ್ವ ಉಳಿಸಿಕೊಳ್ಳಲು ಸಾಧ್ಯವಿಲ್ಲದ ಪರಿಸ್ಥಿತಿಗೆ ಬಂದಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ಕುವೆಂಪು ಕಲಾ ಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ ಸೇರಿದಂತೆ ವಿವಿಧ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಸಮಾರಂಭದಲ್ಲಿ ಮಾತನಾಡಿ 12ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಕಂಡ ಸಮಸಮಾಜದ ಕನಸಿಗೆ, 20ನೇ ಶತಮಾನದಲ್ಲಿ ಸಂವಿಧಾನದ ಮೂಲಕ ಅಧಿಕೃತ ಮುದ್ರೆ ಒತ್ತಿದ ಡಾ.ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಮತ್ತು ಬಸವಣ್ಣನವರ ತತ್ವಗಳು ಈ ಜಗತ್ತು ಇರುವವರೆಗೂ ಜೀವಂತವಾಗಿರುತ್ತವೆ ಎಂದು ಪ್ರತಿಪಾದಿಸಿದರು.

ಅಂಬೇಡ್ಕರ್ ಅವರ ಛಲ ಮತ್ತು ಹೋರಾಟದ ಹಾದಿ ಇಂದಿನ ಯುವ ಪೀಳಿಗೆಗೆ ತಲುಪಬೇಕು ಎಂಬ ಉದ್ದೇಶದಿಂದ ಸರ್ಕಾರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸುತ್ತಿವೆ. ವೈವಿಧ್ಯತೆಯಲ್ಲಿ ಏಕತೆ ಹೊಂದಿದ ಭಾರತ ಎಲ್ಲಾ ಧರ್ಮ ಗಳನ್ನು ಒಳಗೊಂಡ ವಿಶ್ವದ ಏಕೈಕ ಜಾತ್ಯತೀತ ರಾಷ್ಟ್ರ. ಸಂವಿಧಾನ ಈ ರಾಷ್ಟ್ರದ ಅಡಿಪಾಯ ಗಟ್ಟಿಗೊಳಿಸಿದೆ ಎಂದರು.

ಅಂಬೇಡ್ಕರ್ ಸಂವಿಧಾನ ರಚನೆ ಮಾಡದಿದ್ದರೆ ಇಂದು ನಾವ್ಯಾರೂ ಈ ಸ್ಥಾನಗಳಲ್ಲಿ ಕೂರಲು ಸಾಧ್ಯವಾಗುತ್ತಿರಲಿಲ್ಲ. ಶೋಷಿತ ವರ್ಗದಿಂದ ಬಂದ ನಾವೆಲ್ಲರೂ ಇಂದು ಸಮಾಜದ ಮುಖ್ಯವಾಹಿನಿಯಲ್ಲಿ ಕಾಣಿಸಿಕೊಳ್ಳಲು ಬಾಬಾಸಾಹೇಬರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ ಎಂದು ಸ್ಮರಿಸಿದರು.

ಹಿಂದೆ ಮತದಾನದ ಹಕ್ಕು ಕೇವಲ ವಿದ್ಯಾವಂತರು ಮತ್ತು ಜಮೀನ್ದಾರರಿಗೆ ಮಾತ್ರ ಸೀಮಿತವಾಗಿರಬೇಕು ಎಂಬ ವಾದವಿತ್ತು. ಆದರೆ, ಕರಡು ಸಮಿತಿ ಅಧ್ಯಕ್ಷರಾಗಿದ್ದ ಅಂಬೇಡ್ಕರ್ ಎಲ್ಲರ ವಿರೋಧದ ನಡುವೆಯೂ ಶ್ರೀಮಂತ-ಬಡವ, ಸುಶಿಕ್ಷಿತ-ಅಶಿಕ್ಷಿತ, ಪುರುಷ-ಮಹಿಳೆ ಎಂಬ ಭೇದವಿಲ್ಲದೆ ಎಲ್ಲರಿಗೂ ಸಮಾನ ಮತದಾನದ ಹಕ್ಕು ನೀಡಿದರು. ಸಂವಿಧಾನದಲ್ಲಿ ಸರ್ವಧರ್ಮ ಸಮಾನತೆ, ಅಲ್ಪಸಂಖ್ಯಾತರ ಹಕ್ಕುಗಳು, ಸಾಮಾಜಿಕ ನ್ಯಾಯ ಹಾಗೂ ಆರ್ಥಿಕ ಸ್ವಾತಂತ್ರ್ಯದ ಬಗ್ಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಇಂದಿನ ಯುವ ಪೀಳಿಗೆ ಅಂಬೇಡ್ಕರ್ ಸಂವಿಧಾನದ ಪ್ರಸ್ತಾವನೆ ಹಾಗೂ ಬಸವಣ್ಣನ ವಚನಗಳನ್ನು ಓದಿ ಕೊಂಡರೆ ಮಾತ್ರ ಸುಸಂಸ್ಕೃತ ಪ್ರಜೆಗಳಾಗಲು ಸಾಧ್ಯ ಎಂಬ ಉದ್ದೇಶದಿಂದ ಸರ್ಕಾರ ಇಂದು ಎಲ್ಲಾ ಶಾಲೆ ಮತ್ತು ಕಚೇರಿಗಳಲ್ಲಿ ಸಂವಿಧಾನ ಪೀಠಿಕೆ ಪ್ರದರ್ಶಿಸುವ ಕೆಲಸ ಮಾಡಿದೆ ಎಂದು ಅಭಿಪ್ರಾಯಪಟ್ಟರು.ವಿಧಾನ ಪರಿಷತ್ ಶಾಸಕ ಸಿ.ಟಿ.ರವಿ ಮಾತನಾಡಿ, ಯಾರೂ ಕೀಳರಿಮೆಯಿಂದ ಬಳಲಬೇಕಾಗಿಲ್ಲ. ನಾವೆಲ್ಲರೂ ಒಂದೇ ಎನ್ನುವ ಆತ್ಮವಿಶ್ವಾಸ ನಮ್ಮಲ್ಲಿ ಬೆಳೆಯಬೇಕು. ಈ ಆತ್ಮವಿಶ್ವಾಸವನ್ನು ನಮಗೆ ಶಿಕ್ಷಣ ಮಾತ್ರ ನೀಡಲು ಸಾಧ್ಯ ಹೇಳಿದರು.

ಅಂಬೇಡ್ಕರ್ ಅವರ ಪ್ರಸಿದ್ಧ ನುಡಿ “ಶಿಕ್ಷಣ ಎಂಬುದು ಹುಲಿಯ ಹಾಲಿದ್ದಂತೆ, ಅದನ್ನು ಕುಡಿದವನು ಗರ್ಜಿಸಲೇಬೇಕು” ಎಂಬುದನ್ನು ಉಲ್ಲೇಖಿಸಿದ ಅವರು, ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಲ್ಲ. ಮಳೆ ಬಿದ್ದಾಗ ಬೀಜ ಹೇಗೆ ಮೊಳಕೆಯೊಡೆಯುತ್ತದೆಯೋ, ಹಾಗೆಯೇ ಶಿಕ್ಷಣದ ಮೂಲಕ ನಾವು ಸ್ವಾವಲಂಬನೆ ಪಡೆಯಬಹುದು ಎಂದು ತಿಳಿಸಿದರು.ಸಂವಿಧಾನ ರಚನೆ ಸಂದರ್ಭದಲ್ಲಿ ಮಹಿಳೆಯರಿಗೆ ಹಕ್ಕು ನೀಡಬೇಕೆಂದು ಪ್ರತಿಪಾದಿಸಿದ್ದರು. ಅದು ಸಾಧ್ಯವಾಗದಿದ್ದಾಗ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ, ಇಂದು ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ರಷ್ಟು ಮೀಸಲಾತಿ ಕಲ್ಪಿಸುವ ಐತಿಹಾಸಿಕ ಅಧಿವೇಶನಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಈ ಮೂಲಕ ಅವರ ಕನಸು ನನಸಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಜಿಲ್ಲಾಧಿಕಾರಿ ನಾಗರಾಜ್ ಮಾತನಾಡಿ, ಅಂಬೇಡ್ಕರ್ ಅತ್ಯಂತ ಕಷ್ಟಕರವಾದ ಮತ್ತು ಪ್ರತಿಕೂಲ ಪರಿಸ್ಥಿತಿಗಳಲ್ಲಿ ಶಿಕ್ಷಣ ಪಡೆದವರು. ಶಾಲಾ ದಿನಗಳಲ್ಲಿ ಅನುಭವಿಸಿದ ತಾರತಮ್ಯ ಮತ್ತು ಕಷ್ಟಗಳು ನಮಗೆ ಕಲ್ಪಿಸಿಕೊಳ್ಳಲೂ ಅಸಾಧ್ಯ. ಆದರೂ ಎಂದೂ ಶಿಕ್ಷಣದಿಂದ ವಿಮುಖರಾಗಲಿಲ್ಲ. ಅಂದಿನ ಅಡೆತಡೆ, ಇಂದಿನ ಸೌಲಭ್ಯಗಳಿಗೆ ಹೋಲಿಸಿದರೆ, ಇಂದಿನ ವಿದ್ಯಾರ್ಥಿಗಳು ಅಂಬೇಡ್ಕರ್ ಅವರ ಛಲ ಮೈಗೂಡಿಸಿಕೊಳ್ಳಬೇಕಿದೆ ಎಂದು ಹೇಳಿದರು.ಹಿರಿಯ ಸಿವಿಲ್ ನ್ಯಾಯಾಧೀಶ ವಿ.ಹನುಮಂತಪ್ಪ ಉಪನ್ಯಾಸ ನೀಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆಗಳನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ತಮ್ಮ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಸಮಾರಂಭಕ್ಕೂ ಮುನ್ನ ಜಿಪಂ ಆವರಣದಲ್ಲಿರುವ ಡಾ.ಅಂಬೇಡ್ಕರ್ ಅವರ ಪುತ್ಥಳಿಗೆ ಗಣ್ಯರಿಂದ ಮಾಲಾರ್ಪಣೆ ಮಾಡಿದರು. ಅನಂತರ ತಾಲೂಕು ಕಚೇರಿ ಆವರಣದಿಂದ ವಿವಿಧ ಕಲಾತಂಡಗಳೊಂದಿಗೆ ಕುವೆಂಪು ಕಲಾಮಂದಿರದವರೆಗೆ ಡಾ.ಅಂಬೇಡ್ಕರ್‌ ಭಾವಚಿತ್ರದ ಮೆರವಣಿಗೆ ನಡೆಯಿತು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ದಲಿತ ಮುಖಂಡರಾದ ಕೆ.ಟಿ.ರಾಧಾಕೃಷ್ಣ, ರಾಮಚಂದ್ರ, ಮರ್ಲೆ ಅಣ್ಣಯ್ಯ, ಲಕ್ಷ್ಮಣ್, ದಂಟರಮಕ್ಕಿ ಶ್ರೀನಿವಾಸ್, ಅನಿಲ್‌ಕುಮಾರ್, ಹೊನ್ನೇಶ್, ಸಂತೋಷ್, ಬಾಲಕೃಷ್ಣ ಬಿಳೇಕಲ್ಲಳ್ಳಿ, ರಮೇಶ್, ಜವರಯ್ಯ, ಭೀಮಯ್ಯ, ಜಗದೀಶ್ ಕೋಟೆ, ಕೆ.ಪಿ.ವೆಂಕಟೇಶ್, ಪಿ.ರಾಜೇಶ್, ವಸಂತಕುಮಾರ್, ಮೋಹನ್ ಕುಮಾರ್, ಕುರುವಂಗಿ ಕೃಷ್ಣಮೂರ್ತಿ, ಅನಿಲ್‌ಕುಮಾರ್ ಶಂಕರಪುರ, ಮಲ್ಲೇಸ್ವಾಮಿ, ಹರೀಶ್‌ಮಿತ್ರ, ಹಾಲಪ್ಪ ಉದ್ದೇಬೋರನಹಳ್ಳಿ, ನಾಗರಾಜ್, ದಿವಾಕರ್, ಜಗದೀಶ್ ಬ್ಯಾಡರಹಳ್ಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ ಸಮಿತಿ ಅಸ್ತಿತ್ವಕ್ಕೆ: ಪೂರ್ವಭಾವಿ ಸಭೆ
ಸಮಾನತೆಗಾಗಿ ಬದುಕು ಸವೆಸಿದ ಶ್ರೀಗಂಧ ಅಂಬೇಡ್ಕರ್