ಅಂಬೇಡ್ಕರ್‌ ಆಧುನಿಕ ಭಾರತದ ನಿರ್ಮಾತೃ: ಎಚ್‌.ಡಿ. ತಮ್ಮಯ್ಯ

KannadaprabhaNewsNetwork |  
Published : Dec 07, 2024, 12:31 AM IST
ಚಿಕ್ಕಮಗಳೂರಿನ ಜಿಪಂ ಆವರಣದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಶಾಸಕ ಎಚ್‌.ಡಿ. ತಮ್ಮಯ್ಯ, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ಡಿಸಿ ಮೀನಾ ನಾಗರಾಜ್‌, ಜಿಪಂ ಸಿಇಓ ಕೀರ್ತನಾ, ಎಸ್ಪಿ ಡಾ. ವಿಕ್ರಂ ಅಮಟೆ, ಸಿಡಿಎ ಅಧ್ಯಕ್ಷ ನಯಾಜ್‌ ಅಹಮ್ಮದ್‌ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು, ಭಾರತದ ಬೆಳಕು, ಆಧುನಿಕ ಭಾರತದ ನಿರ್ಮಾತೃ ಡಾ. ಬಿ.ಆರ್ ಅಂಬೇಡ್ಕರ್ ಅವರ ಆರ್ಥಿಕ, ಸಾಮಾಜಿಕ, ರಾಜಕೀಯ ಚಿಂತನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಜಿಪಂ ಆವರಣದಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭಾರತದ ಬೆಳಕು, ಆಧುನಿಕ ಭಾರತದ ನಿರ್ಮಾತೃ ಡಾ. ಬಿ.ಆರ್ ಅಂಬೇಡ್ಕರ್ ಅವರ ಆರ್ಥಿಕ, ಸಾಮಾಜಿಕ, ರಾಜಕೀಯ ಚಿಂತನೆಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಡಾ. ಬಿ.ಆರ್ ಅಂಬೇಡ್ಕರ್ ಅವರ 68ನೇ ಪರಿನಿರ್ವಾಣ ದಿನದ ಅಂಗವಾಗಿ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಪ್ರಪಂಚ ಕಂಡ ಅತ್ಯಂತ ಪ್ರಬುದ್ಧ ಮಾನವತಾವಾದಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್. ಸಮಾಜ ಸುಧಾರಕರು, ನ್ಯಾಯ ಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ಬಹುಭಾಷಾ ವಾಗ್ಮಿ ಹಾಗೂ ಸಾಮಾಜಿಕ ಚಿಂತಕ ಬಹು ಪ್ರತಿಭೆಯುಳ್ಳ ಬಾಬಾ ಸಾಹೇಬರು ಸಮಾಜದಲ್ಲಿನ ಅಸ್ಪೃಶ್ಯತೆ, ಜಾತಿವಾದ, ಅಸಮಾನತೆಯಂತಹ ಸಾಮಾಜಿಕ ಪಿಡುಗುಗಳ ಕತ್ತಲನ್ನು ಹೋಗಲಾಡಿಸಿ ಸಮಾನತೆ, ಸಹಿಷ್ಣುತೆ, ಸಹೋದರತ್ವ, ಸಾರ್ವಭೌಮತ್ವದ ದೀಪ ಹಚ್ಚಿ ಭಾರತದ ಸಂವಿಧಾನ ರಚಿಸಿ ದೇಶದ ಬೆಳಕಾಗಿ ನಿಂತವರು. ಅವರ ವಿಚಾರ ಧಾರೆಗಳು ಸದಾ ಜೀವಂತವಾದುದು ಎಂದರು.

ಸಮಾಜದ ಶೋಷಿತ ವರ್ಗದವರ ಧ್ವನಿಯಾಗಿ ಅವರ ಬದುಕನ್ನು ಸುಧಾರಿಸಲು ಮತ್ತು ಸಮಾನತೆ, ಸ್ವಾತಂತ್ರ್ಯದಿಂದ ಜೀವಿಸುವ ಹಕ್ಕನ್ನು ನೀಡಲು ಹಲವಾರು ಹೋರಾಟ ಮಾಡಿ ನೊಂದ ಜೀವಗಳ ಪರ ನಿಂತ ಅವರು, ಮಹಿಳೆಯರಿಗೆ ಮತದಾನದ ಹಕ್ಕು ನೀಡುವುದರೊಂದಿಗೆ ಲಿಂಗ ತಾರತಮ್ಯ ಹೋಗಲಾಡಿಸಿದರು. ಬಡತನದಲ್ಲಿದ್ದರು ಶಿಕ್ಷಣದ ಮೂಲಕ ಪ್ರಪಂಚದ ಹಲವಾರು ಸಂವಿಧಾನಗಳನ್ನು ಓದಿ ಭಾರತದ ಸಂವಿಧಾನ ಶಿಲ್ಪಿಯಾದರು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಭಾರತದ ಸುಭದ್ರತೆ ಕಾಪಾಡಲು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಅಂಬೇಡ್ಕರ್‌ ಸಮಾನತೆ ನೀಡಿದರು. ಚಿಂತನೆಗಳ ಮೂಲಕ ಭಾರತದ ಜ್ಯೋತಿಯಾಗಿ ಸದಾ ಅಭಿವೃದ್ಧಿ ಕಾರ್ಯಗಳಿಗೆ ಬೆಳಕಾಗಿದ್ದಾರೆ. ಅಂಬೇಡ್ಕರ್ ಅವರ ಬೌದ್ಧಿಕ ಸಾಮರ್ಥ್ಯ ಅಸಾಧಾರಣ. ದೀನ ದಲಿತರ ರಾಜಕೀಯ ಹಕ್ಕು ಗಳು ಮತ್ತು ಸಾಮಾಜಿಕ ಸ್ವಾತಂತ್ರ್ಯಕ್ಕೆ ದಣಿವಿನ ಅರಿವಿಲ್ಲದೆ ಶ್ರಮಿಸಿದರು. ಅವರ ಜೀವನ ಮತ್ತು ಸಾಧನೆ, ತತ್ವ ಸಿದ್ಧಾಂತ ಗಳಿಗೆ ವಿಶ್ವವೇ ಮೆಚ್ಚಿ ತಲೆಬಾಗುತ್ತದೆ ಎಂದರು.

ಪ್ರಬುದ್ಧ ಅರ್ಥಶಾಸ್ತ್ರಜ್ಞರಾದ ಡಾ. ಬಿ.ಆರ್. ಅಂಬೇಡ್ಕರ್ ಅನೇಕ ವಿದ್ವತ್ಪೂರ್ಣ ಕೃತಿಗಳನ್ನು ರಚಿಸಿದ್ದಾರೆ. ಅರ್ಥಶಾಸ್ತ್ರದ ಕುರಿತಾದ ಅವರ ಗ್ರಂಥಗಳು ಭಾರತ ಆರ್ಥಿಕ ಅಭಿವೃದ್ಧಿಯಲ್ಲಿ ವಿಶ್ವ ಗುರುವಾಗಲು ಸಹಕಾರಿಯಾಗಿದೆ. ಸರ್ಕಾರ ಅವರ ಬದುಕಿನ ಸಾಧನೆಗಳನ್ನು ಸ್ಮಾರಕಗಳು, ಗ್ರಂಥಾಲಯಗಳನ್ನು ನಿರ್ಮಿಸುವ ಮೂಲಕ ಯುವ ಜನರಿಗೆ ಪರಿಚಯಿಸುವ ಕಾರ್ಯ ನಿರ್ವಹಿಸುತ್ತಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಅಂಬೇಡ್ಕರ್ ಪ್ರಪಂಚದಾದ್ಯಂತ ಲಕ್ಷಾಂತರ ಭಾರತೀಯರ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪ್ರತಿಪಾದಕರಿಗೆ ಸ್ಪೂರ್ತಿಯಾಗಿದ್ದಾರೆ. ಅವರು ರಚಿಸಿದ ಸಂವಿಧಾನವನ್ನು ಪ್ರತಿಯೊಬ್ಬರು ಓದಿ ತಿಳಿದುಕೊಂಡು ತಮ್ಮ ಹಕ್ಕಗಳನ್ನು ಧೈರ್ಯದಿಂದ ಪಡೆದುಕೊಳ್ಳುವ ಮೂಲಕ ಗೌರವ ನಮನ ಸಲ್ಲಿಸಬೇಕು. ಅವರ ಜೀವನ ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ದೇಶದ ಅಭಿವೃದ್ಧಿಗೆ ಸಹಕರಿಸಿ ಎಂದರು.ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಂ ಅಮಟೆ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕ ರಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಾಲತಿ, ಭದ್ರಾ ಕಾಡಾ ಅಧ್ಯಕ್ಷ ಡಾ. ಅಂಶುಮಂತ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ನಯಾಜ್ ಅಹಮ್ಮದ್, ನಗರಸಭೆ ಅಧ್ಯಕ್ಷೆ ಸುಜಾತಾ ಶಿವಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ದಲಿತ ಸಂಘಟನೆಗಳ ಮುಖಂಡರು ಸಾರ್ವಜನಿಕರು ಉಪಸ್ಥಿತರಿದ್ದರು.ಪೋಟೋ ಫೈಲ್‌ ನೇಮ್‌ 6 ಕೆಸಿಕೆಎಂ 3ಚಿಕ್ಕಮಗಳೂರಿನ ಜಿಪಂ ಆವರಣದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಶಾಸಕ ಎಚ್‌.ಡಿ. ತಮ್ಮಯ್ಯ, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ, ಡಿಸಿ ಮೀನಾ ನಾಗರಾಜ್‌, ಜಿಪಂ ಸಿಇಓ ಕೀರ್ತನಾ, ಎಸ್ಪಿ ಡಾ. ವಿಕ್ರಂ ಅಮಟೆ, ಸಿಡಿಎ ಅಧ್ಯಕ್ಷ ನಯಾಜ್‌ ಅಹಮ್ಮದ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌