ಕನ್ನಡಪ್ರಭ ವಾರ್ತೆ ಕುಂದಾಪುರ
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ವಿಶಿಷ್ಟವಾದದ್ದು, ಅವರ ಚಿಂತನೆಗಳು ದೇಶದ ಹಿತಕ್ಕೆ ಪೂರಕವಾಗಿದ್ದವು ಎಂದು ಕೋಟ ವಿವೇಕ ವಿದ್ಯಾಸಂಸ್ಥೆಯ ಉಪನ್ಯಾಸಕ ಸಂಜೀವ ಗುಂಡ್ಮಿ ಅಭಿಪ್ರಾಯಪಟ್ಟರು.ಅವರು ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇಂಡಿಕಾ ಕಲಾ ಬಳಗ ಪಡುಕರೆ ಸಹಯೋಗದೊಂದಿಗೆ ಡಾ. ಬಿ. ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಬಡವರ ಹಾಗೂ ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಅವರ ಕಣ್ಣಿರೊರೆಸುವ ಮಹತ್ಕಾರ್ಯಕ್ಕೆ ಆಗಿನ ಕಾಲದಲ್ಲಿ ಸಂವಿಧಾನದ ಮೂಲಕ ಚಾಲನೆ ನೀಡಿದ ಮಹಾನ್ ವ್ಯಕ್ತಿ ಅಂಬೇಡ್ಕರ್. ಅವರ ಸಂವಿಧಾನದಲ್ಲಿ ಮೀಸಲಾತಿ ಎಲ್ಲಾ ವರ್ಗದವರಿಗೂ ನೀಡಿದ್ದಾರೆ. ಬರೆ ಪರಿಶಿಷ್ಟ ಜಾತಿ ಪಂಗಡಕ್ಕೆ ಸೀಮಿತವಾಗಿಲ್ಲ. ಅವರೊಬ್ಬ ನಿಜವಾದ ವಿಶ್ವ ನಾಯಕ, ಆದರೇ ನೋವಿನ ಸಂಗತಿ ಎಂದರೆ ಅವರಿಗೆ ನಮ್ಮ ದೇಶದಲ್ಲಿ ಸಂವಿಧಾನ ಶಿಲ್ಪಿ ಎಂಬ ಪಟ್ಟ ಸಿಕ್ಕಿತ್ತು, ವಿನಹ ಪಂಡಿತರೆಂಬ ಗೌರವ ಸಿಕ್ಕಿರಲಿಲ್ಲ, ಇದೇ ಬೇಸರದ ಸಂಗತಿ ಎಂದರು.ಜಿಲ್ಲಾ ದಲಿತ ಸಮಿತಿಯ ಮುಖಂಡ ನ್ಯಾಯವಾದಿ ಟಿ.ಮಂಜುನಾಥ ಗಿಳಿಯಾರ್ ಮಾತನಾಡಿ, ಅಂಬೇಡ್ಕರ್ ಸಿದ್ಧಾಂತ ಅವರ ಬದುಕಿನ ಅವಧಿಯಲ್ಲಿ ಉಂಡ ನೋವುಗಳನ್ನು ಮುಂದಿನ ತಲೆಮಾರು ಅನುಭವಿಸದಂತೆ ತಮ್ಮ ಸಂವಿಧಾನದ ಮೂಲಕ ನ್ಯಾಯ ಕಲ್ಪಿಸಿದ್ದಾರೆ. ಅಂತಹ ಮಹಾನ್ ದಾರ್ಶನಿಕನಿಗೆ ಪ್ರತಿ ಗಲ್ಲಿಗಲ್ಲಿಗಳಲ್ಲಿ ಜಯಂತೋತ್ಸವ ನಡೆಸಬೇಕು ಎಂದರು.
ಸಭೆಯಲ್ಲಿ ಗಣ್ಯರೆಲ್ಲರೂ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪಂಚವರ್ಣದ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು, ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಇಂಡಿಕಾ ಕಲಾ ಬಳಗದ ಅಧ್ಯಕ್ಷ ಜಯರಾಮ ಶೆಟ್ಟಿ ಮಣೂರು ಉಪಸ್ಥಿತರಿದ್ದರು.ಇಂಡಿಕಾ ಕಲಾ ಬಳಗದ ಪ್ರಭಾಕರ್ ಮಣೂರು ಪ್ರಾಸ್ತಾವನೆ ಸಲ್ಲಿಸಿದರು. ಪಂಚವರ್ಣದ ಸದಸ್ಯ ಮಹೇಶ್ ಬೆಳಗಾವಿ ಸ್ವಾಗತಿಸಿದರು. ಇಂಡಿಕಾ ಕಲಾ ಬಳಗದ ಸಂಚಾಲಕ ಸಂತೋಷ್ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಪಂಚವರ್ಣದ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು.