ಸಮಸಮಾಜ ನಿರ್ಮಾಣಕ್ಕೆ ಅಂಬೇಡ್ಕರ್‌ ಕೊಡುಗೆ ಅಪಾರ: ಶಾಸಕ ಲಕ್ಷ್ಮಣ ಸವದಿ

KannadaprabhaNewsNetwork |  
Published : Apr 16, 2024, 01:03 AM IST
ಅಥಣಿ ತಾಲೂಕು ಆಡಳಿತದ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬಾಬಾಸಾಹೇಬ್ ಅಂಬೇಡ್ಕರ್‌ ಅವರ 133ನೇ ಜಯಂತಿ ಆಚರಣೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವಿಶ್ವಕ್ಕೆ ಶ್ರೇಷ್ಠವಾದ ಸಂವಿಧಾನ ನೀಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಒಂದು ಸಮುದಾಯಕ್ಕೆ ಸೀಮಿತವಾಗದೆ, ಎಲ್ಲ ವರ್ಗದ ಜನರ ಸಹಭಾಗಿತ್ವದಲ್ಲಿ ಆಚರಿಸಿದಾಗ ಜನ್ಮದಿನಾಚರಣೆಗೆ ಅರ್ಥ ಬರುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಥಣಿ

ದೇಶದ ಹಲವು ಧರ್ಮ, ಜಾತಿಗಳ ಜನತೆಗೆ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಧ್ಯೇಯದೊಂದಿಗೆ ವಿಶ್ವಕ್ಕೆ ಶ್ರೇಷ್ಠವಾದ ಸಂವಿಧಾನ ನೀಡಿದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮ ಒಂದು ಸಮುದಾಯಕ್ಕೆ ಸೀಮಿತವಾಗದೆ, ಎಲ್ಲ ವರ್ಗದ ಜನರ ಸಹಭಾಗಿತ್ವದಲ್ಲಿ ಆಚರಿಸಿದಾಗ ಜನ್ಮದಿನಾಚರಣೆಗೆ ಅರ್ಥ ಬರುತ್ತದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಪಟ್ಟಣದ ಅಂಬೇಡಕರ್ ವೃತ್ತದಲ್ಲಿ ಡಾ. ಬಿ.ಆರ್‌.ಅಂಬೇಡ್ಕರ್‌ ಪುತ್ಥಳಿಗೆ ಭಾನುವಾರ ಮಾಲಾರ್ಪಣೆ ಮಾಡಿ ಮಾತನಾಡಿ, ಡಾ. ಅಂಬೇಡ್ಕರ್ ಅವರು ವಿಶ್ವಕ್ಕೆ ಮಾದರಿಯಾಗಿರುವ ಸಂವಿಧಾನ ನೀಡಿದ್ದಾರೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರೂ ಪಾಲಿಸಿದಾಗ ದೇಶದ ಪ್ರಗತಿಗೆ ಪೂರಕವಾಗಲಿದೆ ಎಂದು ಹೇಳಿದರು.

ನಂತರ ಪಟ್ಟಣದ ತೋಟಗಾರಿಕೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಡಾ ಬಾಬಾಸಾಹೇಬ ಅಂಬೇಡ್ಕರ್ ಅವರ 133ನೇ ಜಯಂತಿಯನ್ನು ಸಂಭ್ರದಿoದ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಅಂಬೇಡ್ಕರ್‌ ಸಮುದಾಯಗಳ ಪ್ರಗತಿ ಸಂಸ್ಥೆ ಧಾರವಾಡ ಉಪನ್ಯಾಸಕ ಲಕ್ಷ್ಮಣ ಬಕಾಯಿ ಮಾತನಾಡಿ, ಭಾರತದಲ್ಲಿ ಸಮಾನತೆ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ಅಂಬೇಡ್ಕರ್ ಅವರು ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತ, ಅರ್ಥಶಾಸ್ತ್ರಜ್ಞ, ಕಾನೂನು ತಜ್ಞ, ರಾಜಕಾರಣಿ ಮತ್ತು ಸಮಾಜ ಸುಧಾರಕರಾಗಿದ್ದರು. ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದಂತಹ ಸಾಮಾಜಿಕ ಅನಿಷ್ಠಗಳ ವಿರುದ್ಧ ದಲಿತರು ಮತ್ತು ಕೆಳಜಾತಿಗಳ ಹಕ್ಕುಗಳಿಗಾಗಿ ಹೋರಾಡಿದ ಮಹಾ ನಾಯಕರಾಗಿದ್ದಾರೆ. ಅವರು ಬರೆದಿರುವ ಸಂವಿಧಾನ ಇಂದಿಗೂ ವಿಶ್ವಕ್ಕೆ ಮಾದರಿ ಮಹಾ ಗ್ರಂಥವಾಗಿದೆ. ತಮ್ಮ ಜೀವನದುದ್ದಕ್ಕೂ ಹಿಂದುಳಿದವರನ್ನು ಮುಖ್ಯವಾಹಿನಿಗೆ ತರಲು ಮತ್ತು ಸಮಾಜದಲ್ಲಿ ಹಾಗೂ ಇತರ ಕ್ಷೇತ್ರಗಳಲ್ಲಿ ಸಮಾನ ಸ್ಥಾನಮಾನಕ್ಕಾಗಿ ಹೋರಾಡಿದರು ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ತಾಲೂಕು ಆಡಳಿತದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ವಾಣಿ ಯು ಮಾತನಾಡಿದರು. ಸಮಾಜ ಕಲ್ಯಾಣ ಅಧಿಕಾರಿ ಬಸವರಾಜ ಯಾದವಾಡ, ತಾಪಂ ಇಒ ಶಿವಾನಂದ ಕಲ್ಲಾಪೂರ, ಡಿವೈಎಸ್ಪಿ ಶ್ರೀಪಾದ ಜಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ತಾಲೂಕು ವೈದ್ಯಾಧಿಕಾರಿ ಡಾ, ಬಸನಗೌಡ ಕಾಗೆ, ಪುರಸಭೆ ಮುಖ್ಯಾಧಿಕಾರಿ ನಾಗಣ್ಣ ಪರೀಟ್, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಶ್ರೀಕಾಂತ ಮಾಕಾಣಿ, ಮುಖಂಡರಾದ ಚಿದಾನಂದ ಸವದಿ, ರಾಮ ಮರಳೆ, ಸಿದ್ದಲಿಂಗ ಮಡ್ಡಿ, ಪ್ರಕಾಶ ಪಟ್ಟಣ, ಸಿದ್ದಾರ್ಥ ಸಿಂಗೆ, ಬಸವರಾಜ ಕಾಂಬಳೆ, ಮಿತೇಶ್ ಪಟ್ಟಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ