ಅಂಬೇಡ್ಕರ್‌ ಸ್ಮರಣೆ ಜಯಂತಿಗೆ ಸೀಮಿತವಾಗದಿರಲಿ

KannadaprabhaNewsNetwork | Published : Apr 13, 2025 2:03 AM

ಸಾರಾಂಶ

ಕೊಳ್ಳೇಗಾಲದಲ್ಲಿ ಡಾ.ಅಂಬೇಡ್ಕರ್ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮಕ್ಕೆ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಟಿ.ಸಿ ಶ್ರೀಕಾಂತ್ ಚಾಲನೆ ನೀಡಿದರು. ಸುನೀತ, ಎಂ.ಎನ್ ನಂದಿನಿ, ಎಂ.ರಂಜಿತ್ ಕುಮಾರ್, ರವಿ, ಮಹೇಶ್ ಕುಮಾರ್ ಇತರರು ಇದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಅವರ ಜಯಂತಿಯಂದು ಮಾತ್ರ ನಾವು ಸ್ಮರಿಸದೆ ದಿನನಿತ್ಯ ಅವರನ್ನು ಸ್ಮರಿಸುವಂತಾಗಬೇಕು ಎಂದು ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಧೀಶ ಟಿ.ಸಿ ಶ್ರೀಕಾಂತ್ ಹೇಳಿದರು.ಪಟ್ಟಣದ ಭೀಮನಗರದ ಮಾತೆ ಸಾವಿತ್ರಿಬಾಯಿ ಫುಲೆ ವೇದಿಕೆಯಲ್ಲಿ ಡಾ.ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿ, ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಇವರ ಸಹಯೋಗದಲ್ಲಿ ಡಾ.ಅಂಬೇಡ್ಕರ್ 134ನೇ ಜಯಂತಿ ಅಂಗವಾಗಿ ಆಯೋಜಿಸಿದ್ದ ಸಂವಿಧಾನ ಮತ್ತು ಮಹಿಳಾ ಹಾಗೂ ಮಕ್ಕಳ ಹಕ್ಕುಗಳ ಕುರಿತು ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅಂಬೇಡ್ಕರ್ ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ನೀಡಿದ್ದಾರೆ. ನಮ್ಮ ರಕ್ಷಣೆಗೆ ಕಾನೂನುಗಳನ್ನು ನೀಡಿದ್ದಾರೆ. ಇವೆಲ್ಲವನ್ನು ನಾವು ಅರಿತುಕೊಳ್ಳಬೇಕಿದೆ. ನಾವು ಪಾಲಿಸಬೇಕಾದ ಮೂಲಭೂತ ಕರ್ತವ್ಯಗಳನ್ನು ಮರೆತಿದ್ದೇವೆ. ಆದ್ದರಿಂದ ನಾಗರಿಕರಾಗಿ ಪ್ರಾಮಾಣಿಕವಾಗಿ ಕಾನೂನುಗಳನ್ನು ಅರಿತು ಗೌರವಿಸಬೇಕು. ಸಂವಿಧಾನ ಆಶಯಗಳು ಹಾಗೂ ಸಾರ್ವಭೌಮತ್ವಕ್ಕೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕು ಎಂದರು.ಸಿವಿಲ್ ನ್ಯಾಯಧೀಶೆ ಸುನೀತ ಮಾತನಾಡಿ, ಹೆಣ್ಣು ಮಕ್ಕಳು ಪ್ರತಿ ನಿತ್ಯವೂ ಶೋಷಣೆಗೆ ಒಳಗಾಗುತ್ತಿದ್ದಾರೆ, ಮನೆಯಲ್ಲಿಯೇ ಮನೆಯವರಿಂದಲೇ ಇಂದು ಶೋಷಣೆ, ಅತ್ಯಾಚಾರ ಅವಮಾನ ನಡೆಯುತ್ತಿದೆ. ಮೊದಲು ನಮ್ಮ ಮನೆಯಿಂದಲೆ ಜಾಗೃತಿ ಆಗಬೇಕು ಮಹಿಳೆಯರಿಗೆ ಅಧಿಕಾರ ಸಿಗಬೇಕು. ಸಮಾನತೆ ಸಿಗಬೇಕು ಎಂದರು.ಪ್ರಧಾನ ಸಿವಿಲ್ ನ್ಯಾಯಧೀಶೆ ನಂದಿನಿ ಮಾತನಾಡಿ, ನಾನು ಎಸ್ಸೆಸ್ಸೆಲ್ಸಿ ಓದುವಾಗಲೇ ಜಾತೀಯತೆ ಕಂಡಿದ್ದೇನೆ. ಈ ಸಂಗತಿಗಳು ನನಗೆ ಚೆನ್ನಾಗಿ ಓದುವ ಛಲವನ್ನು ತುಂಬಿತು. ನನ್ನ ಪಾಲಕರ ಆಸೆಯಂತೆ ನ್ಯಾಯಧೀಶೆ ಆಗಬೇಕು ಸಂಕಲ್ಪ ಮಾಡಿದೆ. ಅಂಬೇಡ್ಕರ್ ಅವರು ಓದುವ ವೇಳೆ ಬಹಳ ಕಷ್ಟ ಪಟ್ಟಿದ್ದಾರೆ. ಇದು ನನಗೆ ಸ್ಪೂರ್ತಿ ಕೊಟ್ಟಿದೆ. ಸ್ವಾಭಿಮಾನ ಬೆಳೆಸಿದೆ. ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಬಾಲ್ಯದಲ್ಲಿ ಅವರಿಗೆ ಸಿಗರೇಟ್, ಮದ್ಯ ಖರೀದಿಸಿ ತರಲು ಹೇಳಬಾರದು. ಅವರ ಮುಂದೆ ಕೆಟ್ಟ ಮಾತುಗಳನ್ನು ಆಡಬಾರದು. ಇವೆಲ್ಲವೂ ಅವರ ಭವಿಷ್ಯದ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಉತ್ತಮ ಶಿಕ್ಷಣ ಕೊಡಿಸಬೇಕು. ನಮಗೆ ಮೀಸಲಾತಿ ಇದೆ. ಆದರೂ ಮಕ್ಕಳು ಮೆರಿಟ್‌ನಲ್ಲಿ ಪಾಸ್ ಆಗುವ ರೀತಿ ತಯಾರು ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಅಪರ ಸಿವಿಲ್ ನ್ಯಾಯಾಧೀಶ ಎಂ.ರಂಜಿತ್ ಕುಮಾರ್, ವಕೀಲ ಸಂಘದ ಅಧ್ಯಕ್ಷ ಸಿ.ರವಿ, ಕಾರ್ಯದರ್ಶಿ ಬಿ.ಆರ್. ಮಹೇಶ್, ಸಿಪಿಐ ಶ್ರೀಕಾಂತ್, ಹಿರಿಯ ವಕೀಲ ಮಲ್ಲಿಕಾರ್ಜುನ್, ಎಸ್.ಚಿನ್ನರಾಜು ಇನ್ನಿತರ ಗಣ್ಯರು ಇದ್ದರು.

Share this article