ಡಂಬಳ: ತಾಲೂಕಿನ ಕೆಲ ಗ್ರಾಮದಲ್ಲಿ ಇಂದಿಗೂ ಅಸ್ಪೃಶ್ಯತೆ ಜೀವಂತವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಡಂಬಳದ ಭಾವೈಕ್ಯತೆ ಮತ್ತು ಕೋಮಸೌಹಾರ್ದದ ನೆಲದಲ್ಲಿ ಅಂಬೇಡ್ಕರ್ ಮೂರ್ತಿ ಅನಾವರಣವಾಗಲು ಪ್ರೇರಣೆ ಲಿಂ. ಡಾ. ತೋಂಟದ ಸಿದ್ದಲಿಂಗ ಮಹಾಸ್ವಾಮೀಜಿಗಳು ಎಂದು ಮಾದಿಗ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಮೋಹನ್ ಎಸ್ ಅಲಮೇಲ್ಕರ್ ಹೇಳಿದರು.
ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿಗಳ ತತ್ವ-ಸಿದ್ಧಾಂತ ಹಾಗೂ ವಿಚಾರಗಳು ಜೀವಂತವಾಗಿವೆ. ಇಂದಿಗೂ ಪ್ರತಿಯೊಬ್ಬರಿಗೂ ಪ್ರೇರಣಾ ಶಕ್ತಿಯಾಗಿದ್ದಾರೆ. ಇತರೆ ತಾಲೂಕು ಹಾಗೂ ಜಿಲ್ಲೆಗೆ ಮೂರ್ತಿ ಪ್ರತಿಷ್ಠಾಪನೆ ಮಾದರಿಯಾಗಿದೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಚ್.ಡಿ. ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ, ಡಂಬಳ ಕೋಮಸೌಹಾರ್ದದ ಕೇಂದ್ರಬಿಂದು. ಈ ಗ್ರಾಮದ ಮಣ್ಣಿನ ಸತ್ವದಲ್ಲಿ ಗಟ್ಟಿತನವಿದೆ. ಸೌಹಾರ್ದದ ಅಂಶಗಳಿವೆ. ಇಲ್ಲಿ ಉದಾರತೆ ಮತ್ತು ಮಾನವಿಯ ಮೌಲ್ಯಗಳು ಜೀವಂತವಾಗಿವೆ. ಇಡೀ ದೇಶಕ್ಕೆ ಅಂಬೇಡ್ಕರ್ ಸಂವಿಧಾನವೇ ಪವಿತ್ರ ಗ್ರಂಥವಾಗಿದೆ. ಪ್ರಸ್ತುತ ದಿನಗಳಲ್ಲಿ ಲಿಂ. ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಇದ್ದಿದ್ದರೆ ಅಂಬೇಡ್ಕರ್ ಅವರು ನಮ್ಮೂಂದಿಗೆ ಇದ್ದಾರೆ ಎನ್ನುವ ಭಾವನೆ ಮೂಡುತ್ತಿತ್ತು ಎಂದು ನೆನೆದರು.ಸಮಿತಿ ಗೌರವಾಧ್ಯಕ್ಷ ಗವಿಸಿದ್ದಪ್ಪ ಬಿಸನಳ್ಳಿ ಮಾತನಾಡಿ, ಅಂಬೇಡ್ಕರ್ ಸೇವೆ ಮಾಡುವದು ಎಂದರೆ ಅದು ಅತ್ಯಂತ ಪವಿತ್ರ ಕಾರ್ಯ. ಇಂದಿಗೂ ದಲಿತ, ಶೋಷಿತ, ನೊಂದವರು ಸಮಾಜದಲ್ಲಿ ಗೌರವದಿಂದ ಬದುಕುತ್ತಿದ್ದಾರೆ ಎಂದರೆ ಅದಕ್ಕೆ ಮೂಲ ಕಾರಣ ಅಂಬೇಡ್ಕರ್ ರಚಿಸಿದ ಸಂವಿಧಾನ ಎಂದರು.