ಕೆರೆ ಒತ್ತುವರಿ ಮಾಡಿ ರಸ್ತೆ ಮಾಡಿದ್ದನ್ನು ಪ್ರಶ್ನೆ ಮಾಡಿದ್ದು ತಪ್ಪಾ?: ಹೇಮಲತಾ ನಾಯಕ

KannadaprabhaNewsNetwork |  
Published : Mar 01, 2026, 02:45 AM IST
ಹೇಮಲತಾ ನಾಯಕ | Kannada Prabha

ಸಾರಾಂಶ

ಅಭಿವೃದ್ಧಿ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಅದು ನಿಯಮಾನುಸಾರ ಇರಬೇಕು. ಕೆರೆಯಂತಹ ಸಂಪತ್ತು ಉಳಿಸಿಕೊಳ್ಳಬೇಕು ಎನ್ನುವುದು ನಮ್ಮ ಕಳಕಳಿ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.

ಕೊಪ್ಪಳ: ನಗರದ ಆಸ್ತಿಯಂತಿರುವ ಹುಲಿಕೆರೆಯನ್ನು ಸಂರಕ್ಷಣೆ ಮಾಡುವ ಅಗತ್ಯವಿದ್ದು, ಅದನ್ನೇ ಒತ್ತುವರಿ ಮಾಡಿ, ರಾತ್ರೋರಾತ್ರಿ ರಸ್ತೆ ನಿರ್ಮಾಣ ಮಾಡಲು ಮುಂದಾದಾಗ ಪ್ರಶ್ನೆ ಮಾಡಿ, ಪ್ರತಿಭಟನೆ ಮಾಡಿದ್ದು ತಪ್ಪಾ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಪ್ರಶ್ನೆ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀವು ಎಲ್ಲಿ ಹೋಗಿದ್ದೀರಿ ಎಂದು ನನ್ನನ್ನು ಪ್ರಶ್ನೆ ಮಾಡುವ ಸಂಸದರು, ತಮಗೆ ಗೊತ್ತಿದ್ದರೂ ಕೆರೆಯಲ್ಲಿಯೇ ರಸ್ತೆ ನಿರ್ಮಾಣ ಮಾಡುವುದಕ್ಕೆ ಯಾಕೆ ಹೇಳಿದಿರಿ? ಎಂದು ಕಿಡಿಕಾರಿದ್ದಾರೆ.

ಹುಲಿಕೆರೆಯಲ್ಲಿಯೇ ದರ್ಗಾಕ್ಕೆ ರಸ್ತೆ ನಿರ್ಮಾಣ ಮಾಡಲು ನಿಮ್ಮ ಬಳಿ ಬಂದಾಗ ನೀವ್ಯಾಕೆ ಅನುಮತಿ ನೀಡಿದಿರಿ? ನಿಮಗೆ ಗೊತ್ತಿದ್ದರೂ ಯಾಕೆ ತಡೆಯಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ಅಭಿವೃದ್ಧಿ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಅದು ನಿಯಮಾನುಸಾರ ಇರಬೇಕು. ಕೆರೆಯಂತಹ ಸಂಪತ್ತು ಉಳಿಸಿಕೊಳ್ಳಬೇಕು ಎನ್ನುವುದು ನಮ್ಮ ಕಳಕಳಿ. ಆದರೆ, ನೀವು ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಕ್ಕಾಗಿ ಓಲೈಕೆ ಮಾಡುವ ಕೆಲಸ ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಅಷ್ಟಕ್ಕೂ ಯಾವ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತದೆ. ಕೆರೆಯಲ್ಲಿಯೇ ರಸ್ತೆ ಮಾಡಲು ಅನುದಾನ ಕೊಟ್ಟಿದ್ದಾದರೂ ಯಾಕೆ? ಇದಕ್ಕಿಂತ ಮಿಗಿಲಾಗಿ ಟೆಂಡರ್ ಸಹ ಕರೆದಿಲ್ಲ. ಹಾಗಾದರೆ ರಸ್ತೆ ಮಾಡಲು ಹಣ ಕೊಟ್ಟಿದ್ದಾದರೂ ಯಾರು? ಎಂದು ಕೇಳಿದ್ದಾರೆ.

ರಾಜಕಾರಣಿಗಳು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ, ಆದರೆ, ಅಧಿಕಾರಿಗಳು ಶಾಮಿಲಾಗಿ ಅದಕ್ಕೆ ಸಾಥ್ ನೀಡುವುದು ಎಷ್ಟು ಸರಿ? ಇಂಥ ಅಧಿಕಾರಿಗಳ ವಿರುದ್ಧವೂ ಕ್ರಮವಾಗಬೇಕು ಎಂದರು.

ಸಂಸದರು ಬಹಳ ಹಗುರವಾಗಿ ಮಾತನಾಡಿದ್ದಾರೆ. ಈ ಹಿಂದೆಯೂ ವಿದೇಶಿ ಮಹಿಳೆ ಮೇಲೆ ಅತ್ಯಾಚಾರ ನಡೆದ ಘಟನೆಯನ್ನು ಒಂದು ಸಣ್ಣ ಘಟನೆ ಎಂದಿದ್ದರು. ಸಂಸದ ರಾಜಶೇಖರ ಹಿಟ್ನಾಳ ಯೋಚನೆ ಮಾಡಿ ಮಾತನಾಡಬೇಕು ಎಂದರು.

ಬಿಜೆಪಿ ಎಂದೂ ಅಭಿವೃದ್ಧಿಯ ವಿರೋಧಿಯಲ್ಲ, ನಾವು ಅಭಿವೃದ್ಧಿ ಸಹಿಸದೇ ಹೀಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದು ಅಲ್ಲದೆ ಎಲ್ಲಿಗೆ ಹೋಗಿದ್ದರು ಎಂದು ಕೇಳಿದ್ದೀರಿ, ನಾನು ಎಲ್ಲಿಯೂ ಹೋಗಿಲ್ಲ. ಅದಕ್ಕಾಗಿಯೇ ಅಕ್ರಮವಾಗಿ ಹುಲಿಕೆರೆಯಲ್ಲಿ ರಸ್ತೆ ಮಾಡಿದ್ದನ್ನು ವಿರೋಧಿಸಿದ್ದೇನೆ ಮತ್ತು ಪ್ರತಿಭಟಸಿದ್ದೇನೆ. ಯಾರೇ ತಪ್ಪು ಮಾಡಿದರೂ ಅದನ್ನು ಪ್ರಶ್ನೆ ಮಾಡುತ್ತೇವೆ. ಆದರೆ, ನೀವು ತಪ್ಪು ಮಾಡುವುದನ್ನು ತಡೆಯದೆ, ತಡೆದವರ ಮೇಲೆಯೇ ಆರೋಪ ಮಾಡುವುದು ಎಷ್ಟರಮಟ್ಟಿಗೆ ಸರಿ ಎಂದರು.

ಹುಲಿಕೆರೆಯ ಒತ್ತುವರಿ ಕುರಿತು ರಾಜ್ಯಪಾಲರಿಗೆ, ರಾಷ್ಟ್ರಪತಿಗೆ ಪತ್ರ ಬರೆಯುವುದಾಗಿ ಹೇಳಿದರು.

ಜಿಲ್ಲೆಯಲ್ಲಿ ಅಲ್ಪಸಂಖ್ಯಾತ ಇಲಾಖೆಯಲ್ಲಿ ವಿದ್ಯಾರ್ಥಿನಿಯರಿಗೆ ವಸತಿ ನಿಲಯಗಳಲ್ಲಿ ರಕ್ಷಣ ಇಲ್ಲದಂತೆ ಆಗಿದೆ. ನಿಮಗೆ ನಿಜವಾಗಿಯೂ ಕಳಕಳಿ ಇದ್ದರೆ ಅಲ್ಪಸಂಖ್ಯಾತ ವಸತಿ ನಿಲಯಗಳಲ್ಲಿ ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ಯಾತನೆಗೆ ಪರಿಹಾರ ನೀಡಿ, ಅಲ್ಲಿ ಅವರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಕೊಡುವಂತೆ ಮಾಡಿ ಎಂದು ಆಗ್ರಹಿಸಿದರು.

ಬಿಜೆಪಿ ಮುಖಂಡರಾದ ನೀಲಕಂಠಯ್ಯ ಹಿರೇಮಠ, ಗಣೇಶ ಹೊರತಟ್ನಾಳ, ಅಮರೇಶ್ ಮರಳಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಮಲಿಂಗ ಕಾಮಣ್ಣನ ಪ್ರತಿಷ್ಠಾಪನೆ: ದರ್ಶನಕ್ಕೆ ಭಕ್ತರ ದಂಡು
ಕಲಿಕಾ ನ್ಯೂನತೆವಿರುವ ಮಕ್ಕಳಿಗೆ ಕಲಿಕಾ ಹಬ್ಬ ಆಶಾದೀಪ: ಎಚ್. ನಾಣಕಿನಾಯ್ಕ