ಶಿರಹಟ್ಟಿ: ಕಲಿಕಾ ಹಬ್ಬ ಕಲಿಕಾ ನ್ಯೂನತೆ ಇರುವ ಮಕ್ಕಳಿಗೆ ಆಶಾದೀಪವಾಗಿದೆ. ಪ್ರತಿಭೆಯನ್ನು ಹೊರತರುವ ಹಲವಾರು ಶೈಕ್ಷಣಿಕ ಚಟುವಟಿಕೆ ಒಳಗೊಂಡಿರುವ ಈ ಹಬ್ಬ ಮಕ್ಕಳಲ್ಲಿ ಕಲಿಕೆಯ ಪ್ರೇರಣೆ ಮತ್ತು ಬಲವರ್ಧನೆಗೆ ಉತ್ತಮ ವೇದಿಕೆಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್. ನಾಣಕಿನಾಯ್ಕ ಹೇಳಿದರು.
ಜಿಲ್ಲಾ ಉಪ ನಿರ್ದೇಶಕ (ಅಭಿವೃದ್ಧಿ) ಜಿ.ಎಂ. ಮುಂದಿನಮನಿ ಮಾತನಾಡಿ, ಕಲಿಕಾ ಹಬ್ಬ ಮಕ್ಕಳಲ್ಲಿ ಸಂತಸದಾಯಕ ಕಲಿಕೆಯನ್ನು ಉತ್ತೇಜಿಸುವ ಜೊತೆಗೆ ಅವರಲ್ಲಿ ಅಡಗಿದ ಪ್ರತಿಭೆಯನ್ನು ಅನಾವರಣಗೊಳಿಸುತ್ತದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸರ್ಕಾರ ಎಫ್‌ಎಲ್‌ಎನ್ ಕಲಿಕಾ ಹಬ್ಬ ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದಿದೆ ಎಂದು ತಿಳಿಸಿದರು.
ಡಯಟ್ ಉಪನ್ಯಾಸಕ ಎಚ್.ಬಿ. ರಡ್ಡೇರ ಮಾತನಾಡಿ, ಪ್ರತಿಯೊಂದು ಮಗುವಿನಲ್ಲಿಯೂ ಕಲಿಕೆಯಲ್ಲಿ ವೈಯಕ್ತಿಕ ಭಿನ್ನತೆಗಳಿರುತ್ತವೆ. ಹಿಂದುಳಿದ ಮಕ್ಕಳಿಗೆ ಸಂತಸದಾಯಕ ಹಾಗೂ ಸೃಜನಾತ್ಮಕ ಚಟುವಟಿಕೆ ಮೂಲಕ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ಪರಿಕಲ್ಪನೆ ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ ಎಂದರು.ಸಿಆರ್‌ಪಿ ಗೀತಾ ಸರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಸ್. ಭಜಂತ್ರಿ, ಇಸಿಒ ಆರ್.ಬಿ. ಪವಾರ, ಎಸ್‌ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ ಲಮಾಣಿ, ಸದಸ್ಯರಾದ ರೂಪಾ ಲಮಾಣಿ, ಶೇಖಪ್ಪ ಲಮಾಣಿ, ದೀಪಕ್ ಲಮಾಣಿ, ಲಕ್ಷ್ಮಣ ಲಮಾಣಿ, ತಿಪ್ಪಣ್ಣ ಲಮಾಣಿ, ಮೋಹನ ಮಾಂಡ್ರೆ, ಬಿಆರ್‌ಪಿ ಬಿ.ಎಂ.ಯರಗುಪ್ಪಿ, ಛಬ್ಬಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಗೀತಾ ಸರವಿ, ಆರ್. ಮಹಾಂತೇಶ, ಮುತ್ತು ಸಾವಿರಕುರಿ, ಉಮೇಶ್ ನೇಕಾರ, ಗಿರೀಶ ನೇಕಾರ, ಎನ್.ಎ. ಮುಲ್ಲಾ, ಕೆ.ಪಿ. ಕಂಬಳಿ, ಉಪ ಪ್ರಾ. ಅರವಟಗಿ ಸೇರಿದಂತೆ ಶಾಲಾ ಮಕ್ಕಳು ಹಾಗೂ ಶಿಕ್ಷಕರು ಇದ್ದರು. ಕಲಿಕಾ ಹಬ್ಬದಲ್ಲಿ ವಿವಿಧ ಶೈಕ್ಷಣಿಕ ಸ್ಪರ್ಧೆಗಳು, ಸೃಜನಾತ್ಮಕ ಚಟುವಟಿಕೆ ಮತ್ತು ಕಲಿಕಾ ಪ್ರದರ್ಶನ ನಡೆಯಿತು.