ಗದಗ: ತಾಲೂಕಿನ ತಿಮ್ಮಾಪುರ ಗ್ರಾಮದ ಮಹಿಳೆಯರು ತಮ್ಮ ಕೈಗೆ ಬಂದ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಅರ್ಧಕ್ಕೆ ನಿಂತ ಊರಿನ ಮಂದಿರ ನಿರ್ಮಾಣಕ್ಕೆ ಸಮರ್ಪಿಸುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾರೆ.
850 ಗೃಹಲಕ್ಷ್ಮಿಯರು
ಈ ಗ್ರಾಮದಲ್ಲಿ ಒಟ್ಟು 850 ಗೃಹಲಕ್ಷ್ಮಿ ಫಲಾನುಭವಿಗಳಿದ್ದು ಅವರೆಲ್ಲರೂ ಸೇರಿ ಒಗ್ಗಟ್ಟಿನಿಂದ ತಮಗೆ ಬರುವ ಹಣವನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸುತ್ತಿದ್ದಾರೆ. ಒಟ್ಟು ₹16 ಲಕ್ಷ ಸಂಗ್ರಹವಾಗುವ ಸಾಧ್ಯತೆ ಇದೆ. ಈಗಾಗಲೇ ₹2.50 ಲಕ್ಷ ದೇಣಿಗೆಯಾಗಿ ನೀಡಿದ್ದಾರೆ. ಇದು ಗ್ರಾಮದ ಮಹಿಳೆಯರ ಧಾರ್ಮಿಕ ಶ್ರದ್ಧೆ ಮತ್ತು ಸಾಮಾಜಿಕ ಕಳಕಳಿಗೆ ಕನ್ನಡಿಯಾಗಿದೆ. ಗೃಹಲಕ್ಷ್ಮೀಯರ ಈ ನಿರ್ಧಾರಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸಂಸತ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.ಮಂದಿರಕ್ಕಾಗಿ ತಮ್ಮ ಗೃಹಲಕ್ಷ್ಮಿ ಹಣ ತ್ಯಾಗ ಮಾಡಿರುವ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಗ್ರಾಮಕ್ಕೆ ಬರಮಾಡಿಕೊಳ್ಳುವ ಯೋಜನೆಯನ್ನು ರೇಣುಕಾ ಯಲ್ಲಮ್ಮ ದೇವಿ ಟ್ರಸ್ಟ್ ಕಮಿಟಿಯವರ ನಿರ್ಧರಿಸಿದೆ ಎಂದು ಗ್ರಾಮದ ಹಿರಿಯರಾದ ಯಲ್ಲಪ್ಪ ಬಾಬರಿ ಅಭಿಮಾನದಿಂದ ಹೇಳಿದರು.
ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ 850ಕ್ಕೂ ಹೆಚ್ಚು ಮಹಿಳೆಯರು ತಮ್ಮ ಗೃಹಲಕ್ಷ್ಮಿ ಯೋಜನೆಯ ಮಾಸಿಕ ಹಣ ಕೂಡಿಟ್ಟು ಗ್ರಾಮದ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ನಿರ್ಮಾಣಕ್ಕೆ ದೇಣಿಗೆ ನೀಡಿರುವುದು ನಿಜಕ್ಕೂ ಮಾದರಿ ಕೆಲಸ. ಆರ್ಥಿಕ ಸ್ವಾವಲಂಬನೆಯ ಜೊತೆಗೆ ಇಂತಹ ಸತ್ಕಾರ್ಯಗಳಲ್ಲಿ ನಮ್ಮ ಮಹಿಳೆಯರು ತೋರುತ್ತಿರುವ ಉತ್ಸಾಹ ನನಗೆ ಹೆಮ್ಮೆ ತಂದಿದೆ. ಮಹಿಳೆಯರ ಕೈಬಲಪಡಿಸುವುದು ಎಂದರೆ ಇಡೀ ಸಮಾಜವನ್ನು ಬಲಪಡಿಸುವುದು ಎಂದರ್ಥ, ಅವರ ಈ ನಿಸ್ವಾರ್ಥ ಸೇವೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ.ತಿಮ್ಮಾಪುರ ಗ್ರಾಮದ ದೇವಸ್ಥಾನ ಕಾಮಗಾರಿ ಹಣಕಾಸಿನ ತೊಂದರೆಯದ ಸ್ಥಗಿತಗೊಂಡಿತ್ತು. ಅದನ್ನು ಮನಗಂಡು ಗ್ರಾಮದ ಮಹಿಳೆಯರು ಸೇರಿಕೊಂಡು ದೇವಸ್ಥಾನ ಪೂರ್ಣಗೊಳಿಸಲು ಸರ್ಕಾರದಿಂದ ನಮಗೆ ಬರುವ ಗೃಹಲಕ್ಷ್ಮಿಯ ಒಂದು ತಿಂಗಳ ₹2 ಸಾವಿರ ದೇಣಿಗೆ ರೂಪದಲ್ಲಿ ನೀಡಿದ್ದೇವೆ. ದೇವಸ್ಥಾನ ನಿರ್ಮಾಣ ಪೂರ್ಣಗೊಂಡರೆ ನಮ್ಮೆಲ್ಲರ ಪ್ರಯತ್ನ ಸಾರ್ಥಕವಾಗುತ್ತದೆ ಎಂದು ಫಲಾನುಭನಿಗಳಾದ ಭೀಮವ್ಬ ಭಾನಾಪೂರ, ಶಾಂತವ್ಬ ಹಂಚಿನಾಳ, ಸೀತಾ ಜೋಗೀನ ಹೇಳಿದರು.
ಗ್ರಾಮದ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಸರ್ಕಾರದ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ದೇವಸ್ಥಾನ ನಿರ್ಮಾಣಕ್ಕೆ ದೇಣಿಗೆ ರೂಪದಲ್ಲಿ ನೀಡಿದ್ದು ಅತ್ಯಂತ ಸಂತೋಷದ ಸಂಗತಿಯಾಗಿದೆ ಎಂದು ತಿಮ್ಮಾಪುರ ಗ್ರಾಮದ ರೇಣುಕಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ರಾಮನಗೌಡ ದೇಸಾಯಿ ತಿಳಿಸಿದರು.