ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಮಹಾನಗರ ಪಾಲಿಕೆ ಆವರಣ ಟೌನ್ ಹಾಲ್ ಐತಿಹಾಸಿಕ ಕಟ್ಟಡದ ಮುಂಭಾಗ ಏಪ್ರಿಲ್ 14 ರಂದು ಡಾ. ಬಿ.ಆರ್. ಅಂಬೇಡ್ಕರ್ ರವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದೆಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಮ್ ಜಯಂತಿ ಕುರಿತು ಅಧಿಕಾರಿ ಹಾಗೂ ದಲಿತ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದರು.
ಡಾ. ಬಿ.ಆರ್. ಅಂಬೇಡ್ಕರ್ ದಿನಾಚರಣೆಯಂದು ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು. ಅಂಬೇಡ್ಕರ್ ಪ್ರತಿಮೆ ಸ್ಥಾಪನೆಯಿಂದ ಸುಮಾರು 60 ವರ್ಷಗಳ ದಲಿತ ಸಮುದಾಯದವರ ಬೇಡಿಕೆ ಈಡೇರಿದಂತಾಗುತ್ತದೆ. ಪ್ರತಿಮೆಯು 12 ಅಡಿ ಎತ್ತರ, 1 ಸಾವಿರ ಕೆ.ಜಿ ತೂಕ ಹೊಂದಿದ್ದು, ತಯಾರಿಕೆಗೆ 39 ಲಕ್ಷ ರು. ವೆಚ್ಚವಾಗಿದೆ. ಪ್ರತಿಮೆಯನ್ನು ಸಿದ್ಧಾರ್ಥ ಸಂಸ್ಥೆಯಿಂದ ಕೊಡುಗೆಯಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.ಚುನಾವಣೆ ನೀತಿ ಸಂಹಿತೆಯಿಂದ ಕಳೆದ ಮೂರ‍್ನಾಲ್ಕು ವರ್ಷಗಳಿಂದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ ರಾಮ್ ಅವರ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಾಧ್ಯವಾಗಿಲ್ಲ. ಈ ಬಾರಿ ದಸರಾ ಹಬ್ಬದ ಮಾದರಿಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ವಿಚಾರಗೋಷ್ಠಿಗಳನ್ನೊಳಗೊಂಡಂತೆ ಜಿಲ್ಲೆಯ ಶಕ್ತಿಯ ಸಂಕೇತವಾಗಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ. ದಸರಾ ಉತ್ಸವದಲ್ಲಿ ಪಾಲ್ಗೊಂಡಂತೆ ಅದೇ ಭಾವನೆ, ಉತ್ಸಾಹ, ಸಂಭ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮ ಕೂಡ ಜರುಗಬೇಕು. ಇದು ಕೇವಲ ಕಾರ್ಯಕ್ರಮವಲ್ಲ, ಸಮಾಜಕ್ಕೆ ಅಂಬೇಡ್ಕರ್ ಅವರ ಚಿಂತನೆ ಮತ್ತು ಸಂವಿಧಾನಾತ್ಮಕ ಆದರ್ಶಗಳನ್ನು ನೆನಪಿಸುವ ಮಹತ್ವದ ಕ್ಷಣವಾಗಬೇಕು ಎಂದು ತಿಳಿಸಿದರು.
ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆ ಸ್ಥಾಪಿಸಲು ಸಚಿವ ಸಂಪುಟದ ಅನುಮೋದನೆ ಪಡೆದುಕೊಳ್ಳಲಾಗಿದೆ. ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಅಂಬೇಡ್ಕರ್ ಪುತ್ಥಳಿಗಳನ್ನು ಸ್ಥಾಪಿಸಲಾಗಿದೆ. ಆದರೆ ತುಮಕೂರಿನಲ್ಲಿ ಕೈಗೂಡಿರಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಪ್ರತಿಮೆ ಹಾಗೂ ಬಾಬು ಜಗಜೀವನ್ ರಾಮ್ ಪ್ರತಿಮೆ ಇಡಲು ಮುಂದಾದಾಗ ಕಾನೂನಾತ್ಮಕವಾಗಿ ಅನೇಕ ಅಡಚಣೆಗಳು ಬಂದಿವೆ. ಆದರೆ ಈಗ ಸಚಿವ ಸಂಪುಟದಿಂದ ಅನುಮೋದನೆ ದೊರೆತಿರುವುದರಿಂದ ಯಾರ ವಿರೋಧವೂ ಬರುವುದಿಲ್ಲವೆಂದು ತಿಳಿಸಿದರು.ನೆನೆಗುದಿಗೆ ಬಿದ್ದಿರುವ ಬಾಬು ಜಗಜೀವನ್ ರಾಮ್ ಅವರ ಭವನ ನಿರ್ಮಾಣದ ಸಮಸ್ಯೆಯನ್ನು ಬಗೆಹರಿಸಲಾಗುವುದು. ಈ ಬಗ್ಗೆ ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು. ಬಾಬು ಜಗಜೀವನ್ ರಾಮ್ ಪ್ರತಿಮೆಯನ್ನೂ ಸಹ ಸಿದ್ಧಾರ್ಥ ಸಂಸ್ಥೆ ವತಿಯಿಂದಲೇ ನಿರ್ಮಿಸಿಕೊಡಲಾಗುವುದೆಂದು ತಿಳಿಸಿದರು. ಜೊತೆಗೆ ಮುಂದಿನ ದಿನಗಳಲ್ಲಿ ೩ ತಿಂಗಳಿಗೊಮ್ಮೆ ಪರಿಶಿಷ್ಟ ಸಮುದಾಯಗಳೊಂದಿಗೆ ಕುಂದು- ಕೊರತೆ ಸಭೆಯನ್ನು ನಾನೇ ಖುದ್ದಾಗಿ ನಡೆಸುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ದಲಿತ ಸಂಘಟನೆಯ ವಿವಿಧ ಮುಖಂಡರು ಸಭೆಯಲ್ಲಿ ಹಾಜರಿದ್ದರು.