ಮೂಡಿಗೆರೆವೇದಗಳು, ಉಪನಿಷತ್ತುಗಳು, ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಎಲ್ಲಿಯೂ ಜಾತೀಯತೆ ಅಥವಾ ಅಸ್ಪೃಶ್ಯತೆ ಪ್ರತಿಪಾದಿಸಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಹೇಳಿದರು.
ಸಾಹಿತ್ಯದ ಎಲ್ಲಿಯೂ ಜಾತೀಯತೆ ಅಥವಾ ಅಸ್ಪೃಶ್ಯತೆ ಪ್ರತಿಪಾದಿಸಿಲ್ಲ
ಕನ್ನಡಪ್ರಭ ವಾರ್ತೆ ಮೂಡಿಗೆರೆ
ವೇದಗಳು, ಉಪನಿಷತ್ತುಗಳು, ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ಎಲ್ಲಿಯೂ ಜಾತೀಯತೆ ಅಥವಾ ಅಸ್ಪೃಶ್ಯತೆ ಪ್ರತಿಪಾದಿಸಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ.ರವಿ ಹೇಳಿದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಘಟಕದಿಂದ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತ್ಯುತ್ಸವದಲ್ಲಿ ಮಾತನಾಡಿ, ಸೃಷ್ಟಿಯ ಪ್ರತಿಯೊಂದು ಜೀವಿಯಲ್ಲೂ ಒಂದೇ ಚೈತನ್ಯವಿದೆ ಎಂದು ನಮ್ಮ ಸಂಸ್ಕೃತಿ ಸಾರಿದೆ. ಮನುಷ್ಯ-ಮನುಷ್ಯರ ನಡುವೆ ಭೇದಭಾವ ಸಲ್ಲದು ಎಂಬ ಸಂದೇಶ ಭಾರತೀಯ ತತ್ವಶಾಸ್ತ್ರ ನಿರಂತರವಾಗಿದೆ. ಡಾ. ಅಂಬೇಡ್ಕರ್, ಬಸವಣ್ಣ, ಕನಕದಾಸ, ಕುವೆಂಪು ಹಾಗೂ ಇತರ ಮಹನೀಯರನ್ನು ಜಾತಿ ಚೌಕಟ್ಟಿನಲ್ಲಿ ಬಂಧಿಸುವುದು ಅವರ ವ್ಯಕ್ತಿತ್ವಕ್ಕೆ ಮಾಡುವ ಅಪಮಾನ ಎಂದು ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಯಾವುದೇ ಒಂದು ಸಮುದಾಯ ಅಥವಾ ಜಾತಿಗೆ ಸೀಮಿತ ನಾಯಕರಲ್ಲ. ಅವರು ಇಡೀ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿದ ರಾಷ್ಟ್ರಪುರುಷರು. ಅವರ ಕನಸಿನ ಸಮ-ಸಮಾಜ ನಿರ್ಮಾಣಕ್ಕೆ ಅಸ್ಪೃಶ್ಯತೆ ಮತ್ತು ಜಾತೀಯತೆಯನ್ನು ಬೇರುಸಹಿತ ಕಿತ್ತುಹಾಕುವ ಸಂಕಲ್ಪವನ್ನು ಸಮಾಜ ಮಾಡಬೇಕಿದೆ ಎಂದರು.
ಅಂಬೇಡ್ಕರ್ ವಿಚಾರಗಳು ಹಾಗೂ ಬದುಕಿನ ಹೋರಾಟ ಇಂದಿಗೂ ಸಮಾಜಕ್ಕೆ ಪ್ರೇರಣೆಯಾಗಿವೆ. ಏ. 14ರಂದು ಅಂಬೇಡ್ಕರ್ ಜಯಂತಿ ಆಚರಿಸಿದರೂ ಅವರ ಚಿಂತನೆ ಮತ್ತು ಆದರ್ಶ ಒಂದು ದಿನಕ್ಕೆ ಸೀಮಿತವಾಗುವಂತದ್ದಲ್ಲ. ಸಮಾಜದಲ್ಲಿ ನಿರಂತರವಾಗಿ ಅವರ ವಿಚಾರಗಳ ಪ್ರೇರಣೆ ದೊರಕಬೇಕು ಎಂಬ ಕಾರಣಕ್ಕೆ ಒಂದೂವರೆ ತಿಂಗಳ ಬಳಿಕವೂ ಜಯಂತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ಸಾರ್ವಜನಿಕವಾಗಿ ಅಸ್ಪೃಶ್ಯತೆ ಆಚರಿಸುವುದು ಅಪರಾಧ. ಆದರೆ ಕಾನೂನು ಸುಧಾರಣೆ ಜೊತೆಗೆ ಸಮಾಜದ ಮನಸ್ಸಿನಲ್ಲಿರುವ ಅಸ್ಪೃಶ್ಯತೆಯೂ ದೂರಾಗಬೇಕಿದೆ. ಸಾರ್ವಜನಿಕ ಸ್ವರೂಪದ ಅಸ್ಪೃಶ್ಯತೆ ಬಹುತೇಕ ಕಡಿಮೆಯಾಗಿದೆ. ಆದರೆ ಮಾನಸಿಕ ಅಸ್ಪೃಶ್ಯತೆ ಸಂಪೂರ್ಣ ದೂರವಾಗಿಲ್ಲ. ಕೆಲ ಮನೆಗಳಲ್ಲಿ ಬದಲಾವಣೆ ಆಗಿದ್ದರೂ ಇನ್ನೂ ಕೆಲವು ಕಡೆಗಳಲ್ಲಿ ಜಾತೀಯ ಮನೋಭಾವ ಉಳಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಿಂದುತ್ವ ಮತ್ತು ಜಾತೀಯತೆ ಒಂದೇ ವೇಳೆ ಜೊತೆಯಾಗಿರಲು ಸಾಧ್ಯವಿಲ್ಲ. ನಿಜವಾದ ಹಿಂದುತ್ವವಾದಿ ಜಾತಿವಾದಿಯಾಗಲು ಸಾಧ್ಯವಿಲ್ಲ. ಜಾತೀಯತೆ ಬೇಲಿ ಕಿತ್ತೊಗೆಯುವ ವ್ಯಕ್ತಿಯೇ ನಿಜವಾದ ಹಿಂದುತ್ವ ವಾದಿ. ಅಸ್ಪೃಶ್ಯತೆ ಮತ್ತು ಜಾತೀಯತೆ ರಾಷ್ಟ್ರ ದುರ್ಬಲಗೊಳಿಸುತ್ತವೆ. ರಾಷ್ಟ್ರ ಬಲಿಷ್ಠವಾಗಬೇಕಾದರೆ ಜಾತೀಯತೆ ನಿರ್ಮೂಲನೆ ಅಗತ್ಯ ಎಂದು ಪ್ರತಿಪಾದಿಸಿದರು.ಸಮಾರಂಭದಲ್ಲಿ ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ಕುರುವಂಗಿ ವೆಂಕ ಟೇಶ್, ವಾಗ್ಮಿಗಳಾದ ಶ್ರೀಕಾಂತ್ ಶೆಟ್ಟಿ, ಮೂಡಿಗೆರೆ ಬಿಜೆಪಿ ಅಧ್ಯಕ್ಷ ಗಜೇಂದ್ರ ಕೊಟ್ಟಿಗೆಹಾರ, ಆಲ್ದೂರು ಮಂಡಲ ಅಧ್ಯಕ್ಷ ರವಿ ಬಸರವಳ್ಳಿ, ಹಿರಿಯ ಮುಖಂಡರಾದ ದೀಪಕ್ ದೊಡ್ಡಯ್ಯ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವರುಂದ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.