ಕನ್ನಡಪ್ರಭ ವಾರ್ತೆ ಮೈಸೂರು
ಶನಿವಾರ ಸುದ್ದಿಗೋಷ್ಠಿ ನಡೆಸಿದ ಮುಖಂಡರು, ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಅನ್ನು ಇಬ್ಭಾಗ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮಾಜಿ ಅಧ್ಯಕ್ಷ ಕೋಟೆಹುಂಡಿ ಮಹದೇವಸ್ವಾಮಿ ಮಾತನಾಡಿ, ಮಾದೇಗೌಡ ಸೇರ್ಪಡೆಯ ಬಗ್ಗೆ ಚಾಮುಂಡೇಶ್ವರಿ ಕ್ಷೇತ್ರದ ಯಾವ ಕಾರ್ಯಕರ್ತರು ಅಥವಾ ಮುಖಂಡರಿಗೂ ಮಾಹಿತಿ ಇಲ್ಲ. ಸ್ವತಃ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದಿದ್ದಾರೆ. ಹೀಗಿದ್ದರೂ ಮಾಜಿ ಸಚಿವ ಸಾ.ರಾ. ಮಹೇಶ್ ಅವರು ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಸಿದ್ದಾರೆ. ಇದರ ಹಿಂದಿನ ಉದ್ದೇಶವೇನು? ಕ್ಷೇತ್ರದಲ್ಲಿ ಚೆನ್ನಾಗಿರುವ ಸಂಘಟನೆಯಲ್ಲಿ ಒಡಕು ಮೂಡಿಸುವುದು ನಿಮ್ಮ ಉದ್ದೇಶವೇ ಎಂದು ಪ್ರಶ್ನಿಸಿದರು.ಮುಖಂಡ ಉದ್ಬೂರು ಮಹದೇವಸ್ವಾಮಿ ಮಾತನಾಡಿ, ಚಾಮುಂಡೇಶ್ವರಿ ಕ್ಷೇತ್ರಕ್ಕೂ ಸಾ.ರಾ. ಮಹೇಶ್ ಅವರಿಗೂ ಏನು ಸಂಬಂಧ? ಯಾರ ಅನುಮತಿ ಪಡೆದು ಚಾಮುಂಡೇಶ್ವರಿ ಕ್ಷೇತ್ರದ ವಿಚಾರಕ್ಕೆ ಹಸ್ತಕ್ಷೇಪ ಮಾಡುತ್ತಿದ್ದೀರಿ ? ನಾವೆಲ್ಲರೂ ದಶಕಗಳಿಂದ ನಿರಂತರವಾಗಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೇವೆ. ನಿಮಗೆ ಬೇಕಾದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಗುಂಪುಗಾರಿಕೆ ಮಾಡಲು ಬರಬೇಡಿ ಎಂದು ಸಲಹೆ ನೀಡಿದರು.
ನಮ್ಮ ಪಾಲಿಗೆ ಎಚ್.ಡಿ. ಕುಮಾರಸ್ವಾಮಿ ಅವರೇ ರಾಜ್ಯದ ನಾಯಕರು. ಅವರ ಮಾತಿಗೆ ಎಲ್ಲರೂ ಬದ್ಧರಾಗಿದ್ದೇವೆ. ಸಾ.ರಾ. ಮಹೇಶ್ ಅವರು ಕೆ.ಆರ್. ನಗರ ಕ್ಷೇತ್ರಕ್ಕೆ ಸೀಮಿತವಾಗಿದ್ದರೆ ಒಳ್ಳೆಯದು, ಮಾದೇಗೌಡ ಅವರ ಸೇರ್ಪಡೆ ಪಕ್ಷ ಸಂಘಟನೆ ಮಾಡುವ ಬದಲು ಪಕ್ಷದಲ್ಲಿ ಆಂತರಿಕವಾಗಿ ಗೊಂದಲ ಸೃಷ್ಟಿಸುವ ನಡೆಯಾಗಿದೆ. ಈ ಬಗ್ಗೆ ವರಿಷ್ಠರಾದ ಎಚ್.ಡಿ. ಕುಮಾರಸ್ವಾಮಿ ಅವರಿಗೆ ದೂರು ಸಲ್ಲಿಸುತ್ತೇವೆ ಎಂದು ಮುಖಂಡ ಗೆಜ್ಜಗಳ್ಳಿ ಲೋಕೇಶ್ ಹೇಳಿದರು.