ಅಂಬೇಡ್ಕರ್‌ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ: ತಮ್ಮಯ್ಯ

KannadaprabhaNewsNetwork | Updated : Nov 08 2023, 01:01 AM IST

ಸಾರಾಂಶ

ಅಂಬೇಡ್ಕರ್‌ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ: ತಮ್ಮಯ್ಯ

ಚಿಕ್ಕಮಗಳೂರು ನಗರಸಭೆಯಲ್ಲಿ ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಯಾವುದೋ ಒಂದು ಧರ್ಮ ಅಥವಾ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಎಲ್ಲ ಸಮುದಾಯಕ್ಕೂ ಸೇರಿದವರು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ನವೆಂಬರ್ 7 ರಂದು ಶಾಲೆಗೆ ಸೇರಿದ ದಿನದ ಅಂಗವಾಗಿ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಆಶ್ರಯದಲ್ಲಿ ನಗರಸಭೆಯಲ್ಲಿ ಮಂಗಳವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಶಾಲೆಗೆ ಸೇರಿದ ದಿನವಾದ ನ.7 ರಂದು ಪ್ರತಿಭಾ ಪುರಸ್ಕಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಆ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮವನ್ನು ರಾಜ್ಯಾದ್ಯಂತ ನಡೆಸಲಾಗುತ್ತಿದೆ ಎಂದರು. ಅಂಬೇಡ್ಕರ್ ಅವರನ್ನು ಭಾರತ ಮಾತ್ರವಲ್ಲ ಇಡೀ ಪ್ರಪಂಚ ಗೌರವಿಸುತ್ತದೆ. ಅವರು ರಚಿಸಿರುವ ಸಂವಿಧಾನ ಕೇವಲ ಭಾರತಕ್ಕಲ್ಲ, ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಇಡೀ ಪ್ರಪಂಚ ಭಾರತದ ಕಡೆ ತಿರುಗಿ ನೋಡುವ ಹಾಗೆ ಅವರು ಮಾಡಿದ್ದಾರೆ ಎಂದರು. ಬುದ್ಧ, ಬಸವ, ಅಂಬೇಡ್ಕರ್ ಮಹಾನ್ ದಾರ್ಶನಿಕರು. ಅವರ ಸಾಲಿನಲ್ಲಿ ಅಂಬೇಡ್ಕರ್ ಅವರು ನಿಲ್ಲುತ್ತಾರೆ. ಅಂಬೇಡ್ಕರ್ ಅವರು ಹುಟ್ಟದಿದ್ದರೆ ನಾವೆಲ್ಲ ನಗರಸಭೆ ಒಳಗೆ ಕೂರುವುದಿರಲಿ ಕಾಂಪೌಂಡ್ ಒಳಗೆ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ ಎಂದು ತಿಳಿಸಿದರು. ಅಂಬೇಡ್ಕರ್ ಅವರ ಹಾದಿಯಲ್ಲಿ ನಾವು ಸಂಪೂರ್ಣವಾಗಿ ನಡೆಯಲು ಸಾಧ್ಯವಾಗದಿದ್ದರೂ ಅವರ ವಿಚಾರ ಧಾರೆಗಳನ್ನಾದರೂ ಅಳವಡಿಸಿಕೊಂಡರೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದ ಅವರು, ಈ ಕಾರ್ಯಕ್ರಮದಲ್ಲಿ ಪ್ರತಿಭಾ ಪುರಸ್ಕಾರ ಪಡೆದವರು ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಂಡು ಅದನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕು. ಕೆಳ ವರ್ಗದ ಜನರಿಗೆ ಇನ್ನೂ ಸಂಪೂರ್ಣವಾಗಿ ನ್ಯಾಯ ಸಿಕ್ಕಿಲ್ಲ, ಅದನ್ನು ಅವರಿಗೆ ದೊರಕಿಸಿಕೊಟ್ಟಾಗ ಮಾತ್ರ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸಫಾಯಿ ಕಾರ್ಮಿಕರ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಉತ್ತಮ ಕಾರ್ಯ ಎಂದು ಹೇಳಿದರು. ಸಫಾಯಿ ಕರ್ಮಚಾರಿ ಜಾಗೃತ ಸಮಿತಿ ಅಧ್ಯಕ್ಷ ವೆಂಕಟೇಶ್ ಉಪನ್ಯಾಸ ನೀಡಿದರು. ಸದಸ್ಯ ಕೆ.ಟಿ. ರಾಧಾಕೃಷ್ಣ ಮಾತನಾಡಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸೋಮಶೇಖರ್, ನಗರಸಭೆ ಉಪಾಧ್ಯಕ್ಷ ಅಮೃತೇಶ್ ಚೆನ್ನಕೇಶವ, ಶೀಲಾ ಸುರೇಶ್, ನಗರ ಯೋಜನಾಧಿಕಾರಿ ನಾಗರತ್ನ, ನಗರಸಭೆ ಪೌರಾಯುಕ್ತ ಬಸವರಾಜ್ ಉಪಸ್ಥಿತರಿದ್ದರು.

7 ಕೆಸಿಕೆಎಂ 2ಚಿಕ್ಕಮಗಳೂರಿನ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಫಾಯಿ ಕಾರ್ಮಿಕರ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

Share this article