ಅಂಬೇಡ್ಕರ್ ವಿಚಾರಧಾರೆಗಳು ಇಡೀ ಮಾನವ ಕುಲಕ್ಕೆ ದಾರಿದೀಪ-ಶಾಸಕ ಲಮಾಣಿ

KannadaprabhaNewsNetwork | Published : Apr 15, 2025 12:50 AM

ಸಾರಾಂಶ

ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ಅವರು ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ. ಅವರ ವಿಚಾರಧಾರೆಗಳು ಇಡೀ ಮಾನವ ಕುಲಕ್ಕೆ ದಾರಿದೀಪವಾಗಿವೆ ಎಂದುಮ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಶಿರಹಟ್ಟಿ: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ದೇಶಕ್ಕೆ ನೀಡಿದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ. ಅವರು ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ. ಅವರ ವಿಚಾರಧಾರೆಗಳು ಇಡೀ ಮಾನವ ಕುಲಕ್ಕೆ ದಾರಿದೀಪವಾಗಿವೆ ಎಂದುಮ ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ತಾಲೂಕು ಆಡಳಿತ, ತಾಲೂಕು ಪಂಚಾಯತ, ಪಟ್ಟಣ ಪಂಚಾಯತ ಮತ್ತು ಸಮಾಜ ಕಲ್ಯಾಣ ಇಲಾಖೆ ಶಿರಹಟ್ಟಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೪ನೇ ಹಾಗೂ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ ೧೧೮ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಇಂದಿನ ದಿನ ಯುವ ಪೀಳಿಗೆ ಪಾಲಿಸುವುದು ಅವಶ್ಯಕವಾಗಿದೆ ಎಂದರು.ಅಂಬೇಡ್ಕರ್ ಅವರು ಒಬ್ಬ ತತ್ವಜ್ಞಾನಿ, ವಿದ್ವಾಂಸರು, ಸಕಲ ಪಾಂಡಿತ್ಯ ಹೊಂದಿದ್ದರು. ಅವರ ವಿಚಾರಧಾರೆಗಳು ಇಂದು ಪ್ರಪಂಚದಲ್ಲಿ ಪ್ರಚಲಿತವಾಗಿವೆ. ಅವರು ಬರೆದ ಸಂವಿಧಾನವನ್ನು ಪ್ರಪಂಚವೇ ಕೊಂಡಾಡುತ್ತಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸಾಮಾಜಿಕ, ಶೈಕ್ಷಣಿಕವಾಗಿ, ರಾಜಕೀಯವಾಗಿ ಇನ್ನೂ ಮುಂದುವರೆಯಬೇಕಾಗಿದೆ ಎಂದು ಹೇಳಿದರು. ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿ ಹಗಲು ರಾತ್ರಿಯನ್ನದೇ ದುಡಿದು ಈ ದೇಶದ ಸಮಗ್ರ ಜಾತಿಜನಾಂಗದವರು ಪ್ರಜಾಪ್ರಭುತ್ವದ ಅಡಿಯಲ್ಲಿ ಸಮಾನವಾಗಿ ಬದುಕುವಂತಹ ಬೃಹತ್ ಲಿಖಿತ ಸಂವಿಧಾನವನ್ನು ರಚನೆ ಮಾಡುವುದರ ಮೂಲಕ ಭಾರತದಲ್ಲಿ ಜಾತ್ಯತೀತತೆ ಮತ್ತು ಸಮಾನತೆ ತರುವಲ್ಲಿ ಶ್ರಮಿಸಿದರು. ಭಾರತದ ಸಂವಿಧಾನಶಿಲ್ಪಿ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಅವರು ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರ ಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಹಿಂದುಳಿದ ವರ್ಗದವರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತೆ ಮಾಡಿದ ಮಹಾನ್ ಚೇತನ, ಮಹಾಮಾನವತಾವಾದಿ ಎಂದರು.ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಜಾತ ದೊಡ್ಡಮನಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಕೇವಲ ದಲಿತರಿಗೆ ಮಾತ್ರ ಸೀಮಿತವಲ್ಲ. ಅವರು ಮಾನವ ಕುಲದ ಬೆಳಕು. ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಕೋಟ್ಯಂತರ ಜನರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ. ಅಂಬೇಡ್ಕರ್ ಅವರು ಇಲ್ಲದೇ ಇದ್ದರೆ ದೇಶದಲ್ಲಿ ಇಂದಿಗೂ ಸಹಸ್ರಾರು ಜನರು ಕಷ್ಟವನ್ನು ಅನುಭವಿಸುತ್ತಿದ್ದರು ಅನ್ನೋದು ವಾಸ್ತವ ಸತ್ಯ. ಶೋಷಿತ ಸಮುದಾಯಗಳ ಏಳಿಗೆಗೆ ಇಡೀ ಜೀವವನ್ನೇ ತ್ಯಾಗ ಮಾಡಿದ್ದಾರೆ ಎಂದು ತಿಳಿಸಿದರು.

ಹನಮಂತಪ್ಪ ದೊಡ್ಡಮನಿ, ಹುಮಾಯೂನ ಮಾಗಡಿ, ಡಿ.ಕೆ. ಹೊನ್ನಪ್ಪನವರ, ಮೋಹನ್ ಗುತ್ತೆಮ್ಮನವರ, ತಿಮ್ಮರಡ್ಡಿ ಮರಡ್ಡಿ, ಎಂ.ಕೆ. ಲಮಾಣಿ, ಕೆ.ಎ. ಬಳಿಗೇರ ಮಾತನಾಡಿದರು.

ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ತಹಸೀಲ್ದಾರ್ ಅನಿಲ ಬಡಿಗೇರ, ತಾಪಂ ಇಒ ರಾಮಣ್ಣ ದೊಡ್ಡಮನಿ, ಬಿಇಒ ಎಚ್. ನಾಣಕೀ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಗೋಪಾಲ ಲಮಾಣಿ, ಸಿಪಿಐ ನಾಗರಾಜ ಮಾಡಳ್ಳಿ, ಮುತ್ತು ಭಾವಿಮನಿ, ಜಾನು ಲಮಾಣಿ, ರಂಗಪ್ಪ ಗುಡಿಮನಿ, ಮಹಾಂತೇಶ ಗೋಡೆಣ್ಣವರ, ಪ್ರಕಾಸ ಬಡೆಣ್ಣವರ, ಸಂಜೀವ ದೊಡ್ಡಮನಿ, ಹನಮಂತ ವರವಿ, ಮೌನೇಶ ಹರಿಜನ ಇದ್ದರು.

Share this article