ಕನ್ನಡಪ್ರಭ ವಾರ್ತೆ, ಶಿಕಾರಿಪುರ
ಭಾನುವಾರ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಆಡಳಿತ, ತಾ.ಪಂ. ಪುರಸಭೆ, ತಾಲೂಕು ಗಂಗಾಮತಸ್ಥರ ಸಮಾಜ ವತಿಯಿಂದ ನಡೆದ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಸಮಾಜದಲ್ಲಿ ಅಸಮಾನತೆ, ಶೋಷಣೆ, ಮೇಲುಕೀಳು, ಕಂದಾಚಾರ, ಮೂಢನಂಬಿಕೆ ಉತ್ತುಂಗದ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ ಬಸವೇಶ್ವರರು ಜಾತಿ ಅಸಮಾನತೆ ಹೋಗಲಾಡಿಸಿ ಸಮಸಮಾಜ ನಿರ್ಮಾಣಕ್ಕಾಗಿ ಬದುಕನ್ನು ಮುಡಿಪಾಗಿಟ್ಟು ಶ್ರಮಿಸಿದ್ದರು. ಅವರೊಂದಿಗೆ ಸಮಸಮಾಜಕ್ಕಾಗಿ ಶ್ರಮಿಸಿದ ಶರಣರಲ್ಲಿ ಅಂಬಿಗರ ಚೌಡಯ್ಯ ಪ್ರಮುಖರಾಗಿದ್ದರು ಎಂದು ತಿಳಿಸಿದರು.ನೇರ ನಡೆ-ನುಡಿಯ, ಹರಿತ ಮಾತಿನ, ನಿಷ್ಠುರ ನಿಲುವಿನ ಕ್ರಾಂತಿಕಾರಿ ನಿಜಶರಣ ಅಂಬಿಗರ ಚೌಡಯ್ಯ ತುಂಗಭದ್ರಾ ನದಿಯ ಚೌಡದಾನಪುರದಲ್ಲಿ ಹರಿಗೋಲಿನ ಸಹಾಯದಿಂದ ತೆಪ್ಪ ನಡೆಸುವ ಕಾಯಕವನ್ನು ಭಕ್ತಿ ಮತ್ತು ನಿಷ್ಠೆಯಿಂದ ನಿರ್ವಹಿಸುವ ಮೂಲಕ ವೃತ್ತಿಗೊಂದು ಘನತೆ ತಂದುಕೊಟ್ಟರು ಎಂದು ತಿಳಿಸಿದರು.
ಅಂಬಿಗರ ಸಮುದಾಯದಲ್ಲಿ ಕೋಳಿ- ಕಬ್ಬಲಿಗ-ಬೆಸ್ತ- ಬೋವಿ- ಮೊಗವೀರ- ಗಂಗಾಮತ ಮುಂತಾದ 39 ಪರ್ಯಾಯ ಹೆಸರುಗಳಿಂದ ಕರೆಯುವ ಉಪ ಪಂಗಡಗಳಿವೆ. ವಿದ್ವಾಂಸರ ಪ್ರಕಾರ ಅಂಬಿಗರು ಈ ದೇಶದ ಮೂಲ ನಿವಾಸಿಗಳು ಮತ್ತು ಆದಿವಾಸಿಗಳಾಗಿದ್ದು, ವಿಶಿಷ್ಟ ಸಂಸ್ಕೃತಿ ಹೊಂದಿದ್ದಾರೆ. ಈ ಸಮುದಾಯವು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೌಲಭ್ಯಗಳಿಂದ ವಂಚಿತರಾಗಿದ್ದು ಹಿಂದುಳಿದಿದ್ದಾರೆ. ಸಮುದಾಯದ ಕುಲಗುರು, ಸಾಂಸ್ಕೃತಿಕ ನಾಯಕ ಅಂಬಿಗರ ಚೌಡಯ್ಯನ ಜಯಂತಿ ಆಚರಣೆ ಮೂಲಕ ಒಗ್ಗೂಡಿ ಸಮಾಜ ಅಭಿವೃದ್ಧಿ ಹೊಂದಬೇಕಾಗಿದೆ. ಮಕ್ಕಳು ಕಡ್ಡಾಯವಾಗಿ ಉನ್ನತ ಶಿಕ್ಷಣ ಪಡೆದಾಗ ಸಮಾಜ ಸಹಜವಾಗಿ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಲಿದೆ ಎಂದು ತಿಳಿಸಿದರು.
ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಮಾಜಿ ನಿರ್ದೇಶಕ, ತಾಲೂಕು ಗಂಗಾಮತಸ್ಥ ಸಮಾಜ ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಶರಣರನ್ನು ಕೇವಲ ಜಾತಿಗೆ ಸೀಮಿತಗೊಳಿಸದೇ ವಿಶಾಲ ದೃಷ್ಟಿಕೋನದಿಂದ ಸ್ವೀಕರಿಸಬೇಕು. ಅವರ ತತ್ವ -ಸಿದ್ಧಾಂತವನ್ನು ಬದುಕಿನಲ್ಲಿ ಕನಿಷ್ಠ ಅಳವಡಿಸಿಕೊಂಡು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು ಎಂದರು.
ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ್, ಸಮಾಜದ ಮುಖಂಡ ರಾಮಪ್ಪ ಗಾಮ, ಬಗನಕಟ್ಟೆ ಶಿವಪ್ಪ, ಕೃಷ್ಣಪ್ಪ ಕಿಟ್ಟದಹಳ್ಳಿ, ಮುಗುಳಗೆರೆ ರಾಮಚಂದ್ರಪ್ಪ, ನಾಗರಾಜ, ಸಂತೋಷ, ವಿನಯ್ ಮತ್ತಿತರರು ಹಾಜರಿದ್ದರು.
ಶಿಕಾರಿಪುರದ ತಾ.ಪಂ. ಸಭಾಂಗಣದಲ್ಲಿ ಭಾನುವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮ ನಡೆಯಿತು.