ನಿಗಮ ಮಂಡಳಿ ವಿಳಂಬಕ್ಕೆ ಶಾಸಕರ ಅಸಮಾಧಾನ

KannadaprabhaNewsNetwork |  
Published : Jan 22, 2024, 02:18 AM ISTUpdated : Jan 22, 2024, 11:57 AM IST
Congress

ಸಾರಾಂಶ

ನಿಗಮ ಮಂಡಳಿ ನೇಮಕಾತಿಗೆ ಕಾರ್ಯಕರ್ತರ ಪಟ್ಟಿ ಅಂತಿಮಗೊಳಿಸಲು ಉಂಟಾಗಿರುವ ಗೊಂದಲದಿಂದ, ಅಖೈರುಗೊಂಡಿರುವ ಶಾಸಕರ ಹೆಸರುಗಳನ್ನೂ ಪ್ರಕಟಿಸದೆ ಹಿಡಿದಿಟ್ಟುಕೊಂಡಿರುವುದಕ್ಕೆ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ.

 ಕನ್ನಡಪ್ರಭ ವಾರ್ತೆ ಬೆಂಗಳೂರು

ನಿಗಮ ಮಂಡಳಿ ನೇಮಕಾತಿಗೆ ಕಾರ್ಯಕರ್ತರ ಪಟ್ಟಿ ಅಂತಿಮಗೊಳಿಸಲು ಉಂಟಾಗಿರುವ ಗೊಂದಲದಿಂದ, ಅಖೈರುಗೊಂಡಿರುವ ಶಾಸಕರ ಹೆಸರುಗಳನ್ನೂ ಪ್ರಕಟಿಸದೆ ಹಿಡಿದಿಟ್ಟುಕೊಂಡಿರುವುದಕ್ಕೆ ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ. 

ಅಲ್ಲದೆ, ಕಾರ್ಯಕರ್ತರ ಪಟ್ಟಿಯನ್ನು ಅಂತಿಮಗೊಳಿಸಿದ ಬಳಿಕ ಪ್ರಕಟಿಸಿ. ಸದ್ಯಕ್ಕೆ ರಾಜ್ಯ ಹಾಗೂ ಹೈಕಮಾಂಡ್‌ ಎರಡೂ ಮಟ್ಟದಲ್ಲಿ ಅಂತಿಮಗೊಂಡಿರುವ ನಮ್ಮ ಪಟ್ಟಿಯನ್ನು ಕೂಡಲೇ ಪ್ರಕಟಿಸಿ ಎಂದು ಹೈಕಮಾಂಡ್‌ ಮತ್ತು ರಾಜ್ಯ ನಾಯಕರಿಬ್ಬರ ಮೇಲೆ ಒತ್ತಡ ಹಾಕಲಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ. 

ಈಗಾಗಲೇ ಪಕ್ಷ ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆಯುತ್ತಿದೆ. ಈಗ ನಿಗಮ ಮಂಡಳಿ ನೇಮಕಾತಿಗೆ ಮುಂದಾಗಿದ್ದೀರಿ. ನೇಮಕಾತಿ ಪಟ್ಟಿ ಅಂತಿಮಗೊಳಿಸಲು ರಾಜ್ಯ ಹಾಗೂ ದೆಹಲಿ ಮಟ್ಟದಲ್ಲಿ ಬಹುದಿನಗಳಿಂದ ಸರ್ಕಸ್‌ ನಡೆಯುತ್ತಲೇ ಇದೆ. 

ಕೆಪಿಸಿಸಿ ಅಧ್ಯಕ್ಷರು ಎರಡು ಮೂರು ಬಾರಿ ಎಲ್ಲಾ ಅಂತಿಮಗೊಂಡಿದೆ. ಯಾವುದೇ ಕ್ಷಣದಲ್ಲಿ ಪಟ್ಟಿ ಪ್ರಕಟವಾಗುತ್ತದೆ ಎಂದು ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ ಪಟ್ಟಿ ಮಾತ್ರ ಪ್ರಕಟವಾಗುತ್ತಿಲ್ಲ ಎಂದು ನಾಯಕರ ಬಳಿಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಈಗ ಕಾರ್ಯಕರ್ತರ ಪಟ್ಟಿ ಅಂತಿಮಗೊಳಿಸುವಲ್ಲಿ ಗೊಂದಲ ಶುರುವಾಗಿದೆ ಎಂದು ಮುಂದೂಡಿದ್ದೀರಿ. ಹೀಗೆ ಮುಂದೂಡಿಕೊಂಡು ಹೋಗುತ್ತಿದ್ದರೆ ಮುಂದಿನ ತಿಂಗಳು ಬಜೆಟ್‌ ಅಧಿವೇಶನ ಬರುತ್ತದೆ. ಅಧಿವೇಶನದ ಬಳಿಕ ಪಟ್ಟಿ ಪ್ರಕಟಿಸುತ್ತೇವೆ ಎನ್ನಬಹುದು. 

ಅಷ್ಟೊತ್ತಿಗೆ ಲೋಕಸಭಾ ಚುನಾವಣೆ ಏನಾದರೂ ಘೋಷಣೆಯಾದರೆ ಮುಗಿಯಿತು. ನೀತಿ ಸಂಹಿತೆ ಹೆಸರಲ್ಲಿ ಯಾವ ಪಟ್ಟಿಯೂ ಪ್ರಕಟವಾಗುವುದಿಲ್ಲ. 

ಹೀಗೆ ನಮಗೆ ಅಧಿಕಾರ ಇಲ್ಲದೆ ಹೋದರೆ ನಾವು ಚುನಾವಣೆಯಲ್ಲಿ ಕೆಲಸ ಮಾಡುವುದು ಹೇಗೆ? ಹಾಗಾಗಿ ಮೊದಲು ಅಖೈರುಗೊಂಡಿರುವ ಶಾಸಕರ ಪಟ್ಟಿಯನ್ನು ಪ್ರಕಟಿಸಿ, ನಂತರ ಕಾರ್ಯಕರ್ತರ ಪಟ್ಟಿ ಪ್ರಕಟಿಸಿ ಎಂದು ರಾಜ್ಯ ನಾಯರಕ ಮೇಲೆ ಒತ್ತಡ ಹಾಕಲಾರಂಭಿಸಿದ್ದಾರೆ. 

ವಿಳಂಬ ನೀತಿ ಹೀಗೇ ಮುಂದುವರೆದರೆ ಸಭೆ ಸೇರಿ ದೆಹಲಿಗೂ ದೂರು ಒಯ್ಯುವ ಚಿಂತನೆಯಲ್ಲಿರುವುದಾಗಿ ನಿಗಮ ಮಂಡಳಿ ಆಕಾಂಕ್ಷಿ ಶಾಸಕರುಗಳು ತಿಳಿಸಿದ್ದಾರೆ. 

ನಿಗಮ ಮಂಡಳಿ ಬದಲಾವಣೆಗೂ ಒತ್ತಡ: ಇನ್ನು, ನಿಗಮ ಮಂಡಳಿ ನೇಮಕಾತಿಗೆ ಹೆಸರು ಅಂತಿಮಗೊಳಿಸಿರುವ ಶಾಸಕರ ಪಟ್ಟಿ ಹಾಗೂ ಅವರಿಗೆ ನಿಗದಿಯಾಗಿರುವ ನಿಗಮ, ಮಂಡಳಿಗಳ ಹೆಸರನ್ನು ‘ಕನ್ನಡಪ್ರಭ’ ಪ್ರಕಟಿಸಿದೆ. 

ಇದನ್ನು ಗಮನಿಸಿರುವ ಶಾಸಕರು ತಮಗೆ ನಿಗದಿಯಾಗಿರುವ ನಿಗಮ ಮಂಡಳಿಯಲ್ಲಿ ಸಮಧಾನ ಇಲ್ಲದವರು ಬದಲಾವಣೆಗೂ ನಾಯಕರ ಮೇಲೆ ಒತ್ತಡ ಹಾಕಲು ಆರಂಭಿಸಿದ್ದಾರೆ. 35 ಶಾಸಕರ ಪಟ್ಟಿ ಮತ್ತು ಅವರಿಗೆ ನಿಗದಿಪಡಿಸಿರುವ ನಿಗಮ ಮಂಡಳಿಗಳ ಮಾಹಿತಿಯನ್ನು ‘ಕನ್ನಡಪ್ರಭ’ ಸಂಪೂರ್ಣ ವರದಿ ಮಾಡಿದೆ. 

ಆ ಪ್ರಕಾರ ಪ್ರಮುಖವಾಗಿ ಶಾಸಕರಾದ ಎನ್‌.ಎ.ಹ್ಯಾರಿಸ್‌- ಬಿಡಿಎ, ಪಿ.ಎಂ.ನರೇಂದ್ರ ಸ್ವಾಮಿ- ಮಾಲಿನ್ಯ ನಿಯಂತ್ರಣ ಮಂಡಳಿ, ಕೆ.ಎಂ.ಶಿವಲಿಂಗೇಗೌಡ - ಗೃಹ ಮಂಡಳಿ, ಕಂಪ್ಲಿ ಗಣೇಶ್‌ - ಖಾದಿ ಮತ್ತು ಗ್ರಾಮೋದ್ಯೋಗ, ಸಿ. ಪುಟ್ಟರಂಗಶೆಟ್ಟಿ - ಎಂಎಸ್‌ಐಎಲ್‌, ಪ್ರಸಾದ್‌ ಅಬ್ಬಯ್ಯ- ಕೊಳಗೇರಿ ಅಭಿವೃದ್ಧಿ ಮಂಡಳಿ, ಟಿ.ರಘುಮೂರ್ತಿ- ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ.

ಎಂ.ನಾರಾಯಣಸ್ವಾಮಿ- ಕೆಎಸ್‌ಎಫ್‌ಸಿ, ಬಿ.ಶಿವಣ್ಣ - ಬಿಎಂಟಿಸಿ, ಎಸ್‌.ಆರ್‌.ಶ್ರೀನಿವಾಸ - ಕೆಎಸ್ಆರ್‌ಟಿಸಿ, ಖನೀಜ್‌ ಫಾತಿಮಾ - ಪ್ರವಾಸೋಧ್ಯಮ ಅಭಿವೃದ್ಧಿ ನಿಗಮ ಸೇರಿದಂತೆ ಪಟ್ಟಿಯಲ್ಲಿರುವ ಎಲ್ಲ ಶಾಸಕರಿಗೂ ನಿಗದಿಪಡಿಸಿರುವ ನಿಗಮ ಮಂಡಳಿಗಳ ವರದಿ ಮಾಡಲಾಗಿದೆ. ಈ ಪೈಕಿ ತಮಗೆ ನಿಗದಿಯಾಗಿರುವ ಹುದ್ದೆ ಬಗ್ಗೆ ಸಮಾಧಾನ ಇಲ್ಲದವರು ಬದಲಾವಣೆಗೆ ಒತ್ತಡ ಹಾಕುತ್ತಿದ್ದಾರೆ ಎಂದು ಗೊತ್ತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ