ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಕಂದಾಯ ಭವನದಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಶ್ರೀ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಹಾವೇರಿ ಜಿಲ್ಲೆ, ರಾಣಿಬೆನ್ನೂರು ತಾಲೂಕು ಚೌಡದಾನಪುರ ಗ್ರಾಮದಲ್ಲಿ ವಿರುಪಾಕ್ಷ ಹಾಗೂ ಪಂಪಾದೇವಿಯವರ ದಂಪತಿಗಳಿಗೆ ಜನಿಸಿದ ಅಂಬಿಗರ ಚೌಡಯ್ಯ ಕಾಯಕ ಮೀನು ಹಿಡಿಯುವುದು, ದೋಣಿ ನಡೆಸುವುದಾಗಿತ್ತು. ಇದರಿಂದ ಬಂದಂತಹ ಹಣದಲ್ಲಿ ಸಮಾಜ ಸೇವೆ ಮಾಡುತ್ತಿದ್ದರು ಎಂದರು.ಅಂಬಿಗರ ಚೌಡಯ್ಯ ಕಾಯಕದಲ್ಲೇ ಕೈಲಾಸ ಕಂಡ ಏಕೈಕ ವ್ಯಕ್ತಿಯಾಗಿದ್ದಾರೆ. ಇವರು ಅಂದಿನ ಪವಾಡ ಪುರುಷರಾಗಿದ್ದರು. ಅಚಿದರೆ ಭಯಾನಕವಾದಂತಹ ಕ್ಷಯ, ಹಾವು ಕಚ್ಚುವುದಕ್ಕೆ ಪರಿಹಾರ ಮಾಡುವಂತಹ ಪವಾಡ ಪುರುಷ ಎಂದು ಪ್ರಸಿದ್ಧಿಯಾಗಿದ್ದರು ಎಂದು ಹೇಳಿದರು.ಚೌಡದಾನಪುರ ಎಂಬ ಹೆಸರು ಬರಲು ಉತ್ತರ ಎಂಬ ಅರಸನು ಮಂತ್ರಿಯವರೊಂದಿಗೆ ಕಾಡಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆ ಮಂತ್ರಿಗೆ ಘಟ ಸರ್ಪ ಕಚ್ಚುತ್ತದೆ. ಆ ಸಂದರ್ಭದಲ್ಲಿ ಮಂತ್ರಿಗಳನ್ನು ಬದುಕಿಸಿದ್ದೇ ಆದಲ್ಲಿ ಸೂಕ್ತ ಪರಿಹಾರ ನೀಡಲಾಗುವುದು ಎಂದು ರಾಜಾಜ್ಞೆಯಾಗುತ್ತದೆ. ಆ ಸಂದರ್ಭದಲ್ಲಿ ಸೈನಿಕನು ತುಂಗಭದ್ರ ನದಿ ದಡದಲ್ಲಿ ಅಂಬಿಗರ ಚೌಡಯ್ಯ ಎಂಬ ಪವಾಡ ಪುರುಷರಿದ್ದಾರೆ. ಅವರನ್ನು ಕರೆಸಿದರೆ ಮಂತ್ರಿಗಳನ್ನು ಬದುಕಿಸಬಹುದು ಎಂದು ಹೇಳುತ್ತಾನೆ. ಅಂಬಿಗರ ಚೌಡಯ್ಯರನ್ನು ಕರೆಸುತ್ತಾರೆ. ಆಗ ವಿಭೂತಿಯ ಮಂತ್ರಪಠನೆಯಲ್ಲಿ ಅಂಬಿಗರ ಚೌಡಯ್ಯ ಮಂತ್ರಿಯನ್ನು ಬದುಕಿಸುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಭೂದಾನ ಮಾಡುತ್ತಾರೆ. ಆದ್ದರಿಂದ ಆ ಗ್ರಾಮಕ್ಕೆ ಚೌಡದಾನಪುರ ಎಂದು ಹೆಸರು ಬರುತ್ತದೆ ಎಂದು ವಿವರಿಸಿದರು.
ಅಂಬಿಗರ ಚೌಡಯ್ಯಗೆ ವಚನಕಾರ, ಶಿವಭಕ್ತ ನಿಜಶರಣ ಎಂಬ ಬಿರುದುಗಳು ಲಭಿಸಿದೆ. ಇವರು ಸುಮಾರು 279 ವಚನಗಳು ಬರೆದಿದ್ದಾರೆ ಎಂದು ಮನು ಹೇಳಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಇಲಾಖೆಯ ಸಹಾಯಕ ನಿರ್ದೇಶಕ ಸತೀಶ್ ಮಾತನಾಡಿ, ಇಂದಿಗೂ ಸಹ ಅಂಬಿಗರ ಚೌಡಯ್ಯರನ್ನು ನೆನಪಿಸಿಕೊಳ್ಳುತ್ತಿದ್ದೇವೆ ಎಂದರೆ ಅವರ ವಚನಗಳಲ್ಲಿ ಎಷ್ಟು ಗಟ್ಟಿತನವಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ನೆರೆಹೊರೆಯವರಿಗೆ ತಿಳಿಸಿ ಅದರ ಸದುಪಯೋಗ ಪಡಿಸಿಕೊಳ್ಳುವಂತೆ ಮಾಡಬೇಕು ಎಂದು ತಿಳಿಸಿದರು.
ಜಿಲ್ಲಾ ಕಾರ್ಮಿಕಾಧಿಕಾರಿ ನಾಗೇಂದ್ರ, ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತಾ ಉಪಸ್ಥಿತರಿದ್ದರು.