ಹಾವೇರಿ: ತಾಲೂಕಿನ ಸುಕ್ಷೇತ್ರ ನರಸೀಪುರದ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜ. 14 ಮತ್ತು 15ರಂದು ಅಂಬಿಗರ 7ನೇ ಶರಣ ಸಂಸ್ಕೃತಿ ಉತ್ಸವ, ವಚನ ಗ್ರಂಥ ಮಹಾರಥೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಹೇಳಿದರು.
ಮಧ್ಯಾಹ್ನ 1.30ಕ್ಕೆ ರಾಜ್ಯಮಟ್ಟದ ವಚನ ಕಂಠಪಾಠ ಸ್ಪರ್ಧೆ, ಸಂಜೆ 7ಕ್ಕೆ ಪ್ರಥಮ ಬಾರಿಗೆ ಐತಿಹಾಸಿಕ ಗಂಗಾರತಿ ಕಾರ್ಯಕ್ರಮ ಜರುಗಲಿದೆ. ರಾತ್ರಿ 8ಕ್ಕೆ ಅಂಬಿಗರ ಸಾಂಸ್ಕೃತಿಕ ಹಾಗೂ ಜಾನಪದ ಕಲಾಮಹೋತ್ಸವ ಅಂಗವಾಗಿ ನಿಜಶರಣ ಚೌಡಯ್ಯನವರ ಜೀವನಾಧಾರಿತ ದೃಶ್ಯಾವಳಿ ಪ್ರದರ್ಶನ, ಪವಾಡಗಳ ಅನಾವರಣ ನಡೆಯಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಹಾಗೂ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸುವರು.
ಜ. 15ರಂದು ಬೆಳಗ್ಗೆ 8ಕ್ಕೆ ಧರ್ಮ ಧ್ವಜಾರೋಹಣ, ಬೆಳಗ್ಗೆ 10ಕ್ಕೆ ಧರ್ಮಸಭೆ ನಡೆಯಲಿದೆ. ಬೆಳಗ್ಗೆ 11ಕ್ಕೆ ಅಂಬಿಗರ 7ನೇ ಶರಣ ಸಂಸ್ಕೃತಿ ಉತ್ಸವ ನಿಮಿತ್ತ ನಡೆಯುವ ನಿಜಶರಣ ಅಂಬಿಗರ ಚೌಡಯ್ಯನವರ 905ನೇ ಜಯಂತ್ಯುತ್ಸವ ಹಾಗೂ 9ನೇ ಪೀಠಾರೋಹಣ ವಾರ್ಷಿಕ ಮಹೋತ್ಸವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸುವರು. ಸಂಜೆ 5ಕ್ಕೆ ವಚನಗ್ರಂಥ ಬಿಡುಗಡೆ ಹಾಗೂ ವಚನಗ್ರಂಥ ಮಹಾರಥೋತ್ಸವ ಜರುಗಲಿದೆ. ಆನಂತರ ನಡೆಯುವ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಡಾ. ಬಸವರಾಜ ಸಿದ್ದಾಶ್ರಮ ಅವರಿಗೆ ವೀರಗಣಾಚಾರಿ ನಿಜಶರಣ ಅಂಬಿಗರ ಚೌಡಯ್ಯ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದರು.ಎರಡು ದಿನಗಳ ಕಾಲ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನಾಡಿನ ವಿವಿಧ ಮಠಾಧೀಶರು, ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
4 ಶಾಖಾಪೀಠ: ಅಂಬಿಗರ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಬೇಕೆಂಬ ಹಕ್ಕೊತ್ತಾಯವಿದೆ. ಅನೇಕ ಮುಖ್ಯಮಂತ್ರಿಗಳು, ಸಚಿವರು ಭರವಸೆ ನೀಡಿದ್ದರೂ ಇನ್ನೂ ಈಡೇರಿಲ್ಲ. ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು. ಕಲಬುರಗಿ ಜಿಲ್ಲೆಯ ಚೌಡಾಳದಲ್ಲಿ 16 ಎಕರೆ ಜಾಗ ಸಿಕ್ಕಿದ್ದು, ಶಾಖಾ ಪೀಠ ಪ್ರಾರಂಭಿಸಲಾಗುವುದು. ಉಳಿದಂತೆ ಬೆಳಗಾವಿ, ಬೆಂಗಳೂರು ಹಾಗೂ ಮೈಸೂರ ಭಾಗದಲ್ಲಿ ಸೇರಿದಂತೆ 4 ಶಾಖಾ ಪೀಠ ಸ್ಥಾಪಿಸಲು ಉದ್ದೇಶ ಹೊಂದಲಾಗಿದೆ ಎಂದು ಶಾಂತಭೀಷ್ಮ ಚೌಡಯ್ಯ ಶ್ರೀ ತಿಳಿಸಿದರು.ಜಿಲ್ಲಾಧ್ಯಕ್ಷ ಮಂಜುನಾಥ ಭೋವಿ, ಬಸವರಾಜ ಕಳಸೂರ, ಎಸ್.ಎನ್. ಮೇಡ್ಲೇರಿ, ಶಂಕರ ಸುತಾರ, ನಾಗಪ್ಪ ಶೇಷಗಿರಿ, ಶೇಖಣ್ಣ ಬಾರ್ಕಿ, ನಿಂಗಪ್ಪ ಹೆಗ್ಗಣ್ಣವರ, ಕರಬಸಪ್ಪ ಹಳದೂರ ಇತರರು ಇದ್ದರು.