ಧಾರವಾಡ:
ಜಕಣಾಚಾರಿ ತಮ್ಮ ಜೀವನವನ್ನು ಕಲೆಗಾಗಿ ಮುಡಿಪಾಗಿಟ್ಟಿದ್ದರು. ತಮ್ಮ ವೃತ್ತಿ ಜೀವನದಲ್ಲಿ ನಾಡಿನ ಹಲವು ದೇವಾಲಯ ನಿರ್ಮಿಸಿದ್ದಾರೆ. ಅವರ ಬದುಕು ಭವ್ಯ ಕಲಾಪರಂಪರೆಯ ಪ್ರತೀಕ ಎಂದು ಮೇಯರ್ ರಾಮಪ್ಪ ಬಡಿಗೇರ ಹೇಳಿದರು.ಜಿಲ್ಲಾಡಳಿತವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಲೂರು ಭವನದಲ್ಲಿ ಬುಧವಾರ ಆಯೋಜಿಸಿದ್ದ ಜಕಣಾಚಾರಿ ಸಂಸ್ಮರಣಾ ದಿನದಲ್ಲಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದ ಅವರು, ಭಾರತೀಯ ಇತಿಹಾಸದಲ್ಲಿ ಕಲೆಗೆ ತನ್ನದೇ ಆದ ಮಹತ್ವ ಇದೆ. ಆ ದಿಸೆಯಲ್ಲಿ ಜಕಣಾಚಾರಿ ಬೇಲೂರು, ಹಳೆಬೀಡು, ಸೋಮನಾಥಪುರ ಮತ್ತಿತರ ಕಡೆಗಳಲ್ಲಿ ಕೆತ್ತಿರುವ ಕೆತ್ತನೆಗಳೆ ಅವರ ಕಲೆಗೆ ಸಾಕ್ಷಿ ಎಂದರು.
ಶಿಲ್ಪಕಲೆ ಅತ್ಯಂತ ಕಷ್ಟಕರ ಕೆತ್ತನೆಯ ಕಲೆ. ಇಂತಹ ವಿಶೇಷ ಕಲೆಯ ಮೂಲಕ ಅಮರಶಿಲ್ಪಿ ಜಕಣಾಚಾರಿ ನಾಡಿನ ಶಿಲ್ಪಕಲೆಗೆ ಅಪಾರ ಕೊಡುಗೆ ನೀಡಿದ್ದಾರೆ. ವಿದೇಶಿಗರು ನಮ್ಮ ನಾಡಿನ ಶಿಲ್ಪಕಲೆ ನೋಡಿ ಬೆರಗಾಗುವಂತೆ ಮತ್ತು ನೋಡುಗರನ್ನು ಸೆಳೆಯುವಂತಹ ಶಿಲ್ಪಕಲೆ ನಿರೂಪಿಸಲಾಗಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ನಾಡಿನಲ್ಲಿರುವ ಕಸೂತಿ, ಬಟ್ಟೆ ನೇಯುವುದು, ಕುಂಬಾರಿಕೆ, ಬುಟ್ಟಿ ನೇಯುವುದು, ಹಾಸಿಗೆ ನೇಯುವುದು ಮುಂತಾದ ಕಲೆಗಳು ನಶಿಸಿ ಹೋಗುತ್ತಿವೆ. ಇವುಗಳ ಸಂರಕ್ಷಣೆ ಮತ್ತು ಮುಂದುವರಿಕೆಗಾಗಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದ್ದು, ಪ್ರಯೋಜನ ಪಡೆಯಲು ತಿಳಿಸಿದರು.
ಆಕಾಶವಾಣಿ ನಿವೃತ್ತ ಕಾರ್ಯಕ್ರಮ ನಿರ್ವಾಹಕ ಡಾ. ವಿರೂಪಾಕ್ಷ ಬಡಿಗೇರ ಜಕಣಾಚಾರಿ ಜೀವನ ಚರಿತ್ರೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಾಧಕರಾದ ರವೀಂದ್ರಾಚಾರ್ಯ ಮತ್ತು ಕೃಷ್ಣಾ ಹಿತ್ತಾಳೆ ಅವರನ್ನು ಸನ್ಮಾಸಲಾಯಿತು. ಮೌನೇಶ್ವರ ಧರ್ಮನಿಧಿ ಸಂಸ್ಥೆಯ ಅಧ್ಯಕ್ಷ ಮಹಾರುದ್ರ ಬಡಿಗೇರ, ವಿಶ್ವಕರ್ಮ ಜಿಲ್ಲಾ ಮಹಾಸಭಾ ಅಧ್ಯಕ್ಷ ಕಾಳಪ್ಪ ಬಡಿಗೇರ, ಜನಜಾಗೃತಿ ಸಮಿತಿ ಅಧ್ಯಕ್ಷ ವಸಂತ ಅರ್ಕಾಚಾರ, ಮುಖಂಡರಾದ ನಿರಂಜನ ಬಡಿಗೇರ, ವಿಠ್ಠಲ್ ಕಮ್ಮಾರ, ಸಂತೋಷ ಬಡಿಗೇರ, ಲಕ್ಷ್ಮಿ ಬಡಿಗೇರ ಇದ್ದರು. ಕುಮಾರ ಬೆಕ್ಕೇರಿ ಸ್ವಾಗತಿಸಿದರು.