ನೇರ ನಿಷ್ಠೂರ ಶ್ರೇಷ್ಠ ವಚನಕಾರ ಅಂಬಿಗರ ಚೌಡಯ್ಯ

KannadaprabhaNewsNetwork |  
Published : May 21, 2025, 12:15 AM IST
ಸೈದಾಪುರ ಸಮೀಪದ ಗೊಂದಡಗಿ ಗ್ರಾಮದಲ್ಲಿ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ನೂತನ ಮೂರ್ತಿ ಲೋಕರ್ಪಣೆ ಸಮಾರಂಭದಲ್ಲಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳು ಮಾತನಾಡಿದರು. | Kannada Prabha

ಸಾರಾಂಶ

Ambigara Choudaiah, a direct, stern and great orator

-ಶಾಂತಭೀಷ್ಮ ಚೌಡಯ್ಯ ಸ್ವಾಮಿ ಅಭಿಮತ । ಗೊಂದಡಗಿ: ಚೌಡಯ್ಯ ಮೂರ್ತಿ ಲೋಕಾರ್ಪಣೆ

-----

ಕನ್ನಡಪ್ರಭ ವಾರ್ತೆ ಯಾದಗಿರಿ

ಬಸವಾದಿ ಶರಣರಲ್ಲಿ ಒಬ್ಬರಾಗಿ ಅಂದಿನ ಶಿವಭಕ್ತಿ, ಕಾಯಕ, ಪರೋಪಕಾರಿ ಹಾಗೂ ಸಮತವಾದಿಯ ಬಗ್ಗೆ ತನ್ನ ನಿಷ್ಠೂರ ವಚನಗಳ ಮೂಲಕ ಜನರಿಗೆ ಅರಿವು ಮೂಡಿಸಿದ ಶ್ರೇಷ್ಠ ವಚನಕಾರ ಅಂಬಿಗರ ಚೌಡಯ್ಯ ಎಂದು ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದ ಪೀಠಾಧ್ಯಕ್ಷ ಶ್ರೀ ಶಾಂತ ಭೀಷ್ಮಚೌಡಯ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಸೈದಾಪುರ ಸಮೀಪದ ಗೊಂದಡಗಿ ಗ್ರಾಮದಲ್ಲಿ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರ ನೂತನ ಮೂರ್ತಿ ಲೋಕರ್ಪಣೆ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದರು. ಅಂಬಿಗರ ಚೌಡಯ್ಯನವರು 12ನೇ ಶತಮಾನದಲ್ಲಿ ಸಮಾಜದಲ್ಲಿದ್ದ ಅಂಕುಡೊಂಕುಗಳನ್ನು ತಿದ್ದುವುದು, ಕಾಯಕ ನಿಷ್ಠೆಯನ್ನು ಜನರಿಗೆ ತಮ್ಮ ವಚನಗಳ ಮೂಲಕ ಜಗತ್ತಿಗೆ ಸಾರಿದರು. ಅಂತಹ ಮಹಾಪುರುಷ ಜನಿಸಿದ ಸಮಾಜದಲ್ಲಿನ ನಾವುಗಳು ಅವರ ಆದರ್ಶಗಳನ್ನು ದಿನಾನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಹಾಗೂ ದೇವರ ಹೆಸರಿನಲ್ಲಿ ನಡೆಯುವ ಮೂಡನಂಬಿಕೆ ತೊಲಗಿಸಿ, ನಿಮ್ಮ ಮಕ್ಕಳಿಗೆ ಉತ್ತಮ ಮತ್ತು ಉನ್ನತ ಶಿಕ್ಷಣವನ್ನು ನೀಡಿ ಸಮಾಜಕ್ಕೆ ಕೊಡುಗೆಯಾಗಿ ನೀಡಿ ಎಂದು ಕರೆ ನೀಡಿದರು.

ಅಖಿಲ ಭಾರತೀಯ ಕೋಲಿ ಸಮಾಜದ ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಉಮೇಶ ಮುದ್ನಾಳ ಮಾತನಾಡಿ, ದೇವರ ಹೆಸರಿನಲ್ಲಿ ಪ್ರಾಣಿಬಲಿ ನೀಡಿ ಹಣ ವ್ಯರ್ಥ ಮಾಡುವ ಬದಲು ಅದನ್ನು ಮಕ್ಕಳ ಉನ್ನತ ಶಿಕ್ಷಣಕ್ಕೆ ಖರ್ಚುಮಾಡಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ. ಬಡವರು ಕಷ್ಟಪಟ್ಟು ವರ್ಷಪೂರ್ತಿ ದುಡಿದು ಸಂಗ್ರಹಿಸಿದ ಲಕ್ಷಾಂತರ ಹಣವನ್ನು ಮೂಢ ನಂಬಿಕೆಗೆ ಬಲಿಯಾಗಿ ದೇವರಿಗೆ ಪ್ರಾಣಿಬಲಿಗೆ ಖರ್ಚು ಮಾಡುವುದು ನಿಲ್ಲಿಸುವ ನಿಟ್ಟಿನಲ್ಲಿ ಜಾಗೃತರಾಗಬೇಕು ಎಂದರು.

ರಾಜ್ಯದ ವಿಧಾನಸಭೆ ಕ್ಷೇತ್ರಗಳ ಪೈಕಿ ಹೆಚ್ಚು ಕೋಲಿ ಕಬ್ಬಲಿಗ ಸಮಾಜ ಹೆಚ್ಚಿರುವ ಮತ್ತು ನಿರ್ಣಾಯ ಪಾತ್ರವಿರುವ ಕ್ಷೇತ್ರಗಳ ಪೈಕಿ ಗುರುಮಠಕಲ್ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಅನೇಕ ಮತಕ್ಷೇತ್ರಗಳಿವೆ. ಇಲ್ಲಿ ನಮ್ಮ ಜನರು ಯಾವುದೇ ರಾಜಕೀಯ ಕುತಂತ್ರಕ್ಕೆ ಒಳಗಾಗದೆ ಒಗ್ಗಟ್ಟಾಗಿ ಇರುವುದು ಅತ್ಯಂತ ಅವಶ್ಯಕವಾಗಿದೆ. ಮುಂದಿನ ದಿನಗಳಲ್ಲಿ ಬರುವ ಯಾವುದೇ ಚುನವಣೆಯಲ್ಲಿ ನಿಮ್ಮ ಶಕ್ತಿಯನ್ನು ತೋರಿಸಿ, ಇದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರವು ನಮ್ಮ ಕಡೆ ಗಮನ ಹರಿಸುತ್ತವೆ ಎಂದು ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯಾಧ್ಯಕ್ಷ ದತಾತ್ರೇಯ ರೆಡ್ಡಿ ಮನವಿ ಮಾಡಿದರು.

ಇದಕ್ಕೆ ಮುಂಚಿತವಾಗಿ ಗ್ರಾಮದ ಪ್ರಮುಖ ರಸ್ತೆಯಲ್ಲಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳನ್ನು ಅಶ್ವಾರೂಢ ರಥದಲ್ಲಿ ಕುರಿಸಿ, ಮಹಿಳೆಯರ ಕುಂಭದೊಂದಿಗೆ ವಿವಿಧ ವಾದ್ಯಗಳ ಮೂಲಕ ಮೆರವಣಿಗೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಶ್ರೀಕ್ಷೇತ್ರ ನೇರಡಗಂ ಪಶ್ಚಿಮಾದ್ರಿ ವಿರಕ್ತಮಠದ ಪೀಠಾಧಿಪತಿ ಪಂಚಮ ಸಿದ್ದಲಿಂಗ ಮಹಾಸ್ವಾಮಿ, ಶ್ರೀ ಕ್ಷೀರಲಿಂಗಯ್ಯ ಮಹಾಸ್ವಾಮಿ ಚೇಗುಂಟ, ಸಿದ್ದಚೇತನಾಶ್ರಮ ಸಿದ್ದರೂಡ ಮಠದ ಪೀಠಾಧದಿಪತಿ ಸೋಮೇಶ್ವರಾನಂದ ಮಹಾಸ್ವಾಮಿ, ಉತ್ತನಯ್ಯಸ್ವಾಮಿ, ಮಹಾಲಿಂಗಯ್ಯ ಸ್ವಾಮಿ ಗೊಂದಡಗಿ, ಅಖಿಲ ಭಾರತೀಯ ಕೋಲಿ ಸಮಾಜದ ರಾಜ್ಯಾಧ್ಯಕ್ಷ ದತಾತ್ರೇಯರೆಡ್ಡಿ, ಸೈದಾಪುರ ಕೋಲಿ ಕಬ್ಬಲಿಗ ಸಮಾಜದ ಉಪಾಧ್ಯಕ್ಷ ವೆಂಕಟೇಶ ಗಡದ್, ಕಾರ್ಯದರ್ಶಿ ಪ್ರಭು ಗೂಗಲ್, ತಾಯಪ್ಪ ಚಿಗರಿ, ಸೇರಿದಂತೆ ವಿವಿಧ ಸಮಾಜದ ಗ್ರಾಮಸ್ಥರು ಉಪಸ್ಥಿತರಿದ್ದರು.

------

17ವೈಡಿಆರ್‌8: ಸೈದಾಪುರ ಸಮೀಪದ ಗೊಂದಡಗಿ ಗ್ರಾಮದಲ್ಲಿ ನಿಜ ಶರಣ ಶ್ರೀ ಅಂಬಿಗರ ಚೌಡಯ್ಯನವರ ನೂತನ ಮೂರ್ತಿ ಲೋಕರ್ಪಣೆ ಸಮಾರಂಭದಲ್ಲಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ಶಾಂತಭೀಷ್ಮಚೌಡಯ್ಯ ಮಹಾಸ್ವಾಮಿಗಳು ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ