ಚಿತ್ರದುರ್ಗ: ಮನೋದಾಸ್ಯ, ಜಾತಿ ವ್ಯವಸ್ಥೆಯ ವಿರುದ್ಧ ತನ್ನದೇ ಕಟು ನಿಸ್ವಾರ್ಥ ರೀತಿಯಲ್ಲಿ ಹೋರಾಡಿ ವಿಶ್ವಮಾನವ ಸಂದೇಶ ಬಿತ್ತಿಹೋದವರು ಛಡಿ ಏಟಿನ ಚೌಡಯ್ಯ ಎಂದು ಸಾಹಿತಿ ಗೀತಾ ಭರಮಸಾಗರ ಹೇಳಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ, ಜಿಲ್ಲಾ ಗಂಗಾಭಿಕ ಬೆಸ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಸಮಾಜದಲ್ಲಿದ್ದ ಜಾತಿ ಪದ್ಧತಿ, ಮೌಢ್ಯ, ಅನ್ಯಾಯಗಳನ್ನು ಚೌಡಯ್ಯನವರು ತಮ್ಮ ವಚನಗಳ ಮೂಲಕ ಕಟುವಾಗಿ ಟೀಕಿಸುತ್ತಿದ್ದರು. ಸರ್ವಜ್ಞರ ವಚನಗಳನ್ನು ಸಿಡಿಲ ನುಡಿ ಎಂದು ಕರೆದರೆ, ಚೌಡಯ್ಯನವರ ವಚನಗಳನ್ನು ಛಡಿ ಏಟಿನ ನುಡಿ ಎಂದು ಬಣ್ಣಿಸಲಾಗಿದೆ. ಶೋಷಿತ ಸಮುದಾಯಗಳ ಆಶಯಗಳನ್ನು ಎತ್ತಿಹಿಡಿದು, ಸಮಾನತೆಯ ತತ್ವ ಸಾರಿದ ಚೌಡಯ್ಯನವರ ಬದುಕು ಇಂದಿಗೂ ಸಮಾಜಕ್ಕೆ ದಾರಿದೀಪ ಎಂದು ತಿಳಿಸಿದರು.12ನೇ ಶತಮಾನದ ವಚನ ಚಳವಳಿ ಸಮಾಜದ ಮೇಲೆ ಬೀರಿದ ಪ್ರಭಾವ ಅನನ್ಯವಾದುದು. ಸಮಾಜದ ನಾನಾ ಸ್ತರದವರು ಅನುಭವ ಮಂಟಪದ ಮೂಲಕ ತಮ್ಮೊಳಗಿನ ಬೆಳಕನ್ನು ಕಂಡುಕೊಂಡರು. ಜನಸಾಮಾನ್ಯರಿಗೂ ಬೆಳಕಾದರು. ಆ ಕಾಲದ ವಿಖ್ಯಾತ ಶಿವಶರಣ ಹಾಗೂ ವಚನಕಾರ ಅಂಬಿಗರ ಚೌಡಯ್ಯ ವೃತ್ತಿಯಿಂದ ದೋಣಿ ನಡೆಸುವವರಾಗಿದ್ದರೂ ಪ್ರವೃತ್ತಿಯಲ್ಲಿ ಅನುಭಾವಿ. ತಮ್ಮ ತೀಕ್ಷ್ಮ ವಚನಗಳಿಂದ ಶರಣ ವಚನಕ್ರಾಂತಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು, ನ್ಯಾಯನಿಷ್ಠುರವಾದಿಯಾಗಿದ್ದರು. ಅಂಬಿಗರ ಚೌಡಯ್ಯನವರು ವಚನಗಳಿಗೆ ತಮ್ಮ ಹೆಸರನ್ನೇ ಅಂಕಿತವಾಗಿ ಬಳಸಿರುವುದು ಚೌಡಯ್ಯನವರ ದಿಟ್ಟತನ ತೋರಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗಂಗಾಭಿಕ ಬೆಸ್ತರ ಸಮಾಜದ ಹಿರಿಯ ಮುಖಂಡ ಚಂದ್ರಣ್ಣ, ತಹಸೀಲ್ದಾರ್ ಬಿ.ಎಂ.ಗೋವಿಂದರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಜಿಲ್ಲಾ ಗಂಗಾಭಿಕ ಬೆಸ್ತರ ಸಂಘದ ಕಾರ್ಯದರ್ಶಿ ಪಿ.ಶ್ರೀನಿವಾಸ್, ಉಪಾಧ್ಯಕ್ಷ ಕೃಷ್ಣ ಮೂರ್ತಿ, ಖಜಾಂಚಿ ರಂಗನಾಥ್, ಸಂಘಟನಾ ಕಾರ್ಯದರ್ಶಿ ಶಿವಕುಮಾರ್, ಮುಖಂಡರಾದ ಚಂದ್ರ, ಎಸಿಎಫ್ ಬಹುಗುಣ, ಶಶಿ, ಟಿಪ್ಪು ಸುಲ್ತಾನ್ ವೇದಿಕೆಯ ಟಿಪ್ಪು ಖಾಸಿಂ ಅಲಿ ಸೇರಿದಂತೆ ಮತ್ತಿತರರು ಇದ್ದರು.