;Resize=(412,232))
ದೇವದುರ್ಗ : ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ಸಾಗಾಣಿಕೆ ಮಿತಿ ಮೀರಿದ್ದು, ದಂಧೆಕೋರರು ಏಕಾಏಕಿ ಭಾನುವಾರ ಅಮಾವ್ಯಾಸೆಯಂದು ಮನೆಗೆ ಬಂದು ಭಯದ ವಾತಾವರಣ ನಿರ್ಮಾಣ ಮಾಡಿದ್ದಾರೆ. ನಾನೂ ಜೀವ ಭಯದಲ್ಲಿದ್ದೇನೆ ಎಂದು ಜೆಡಿಎಸ್ ಶಾಸಕಿ ಕರೆಮ್ಮ ಜಿ. ನಾಯಕ ಆತಂಕ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರೊಂದಿಗೆ ಮಾತನಾಡಿ, ಕ್ಷೇತ್ರದಲ್ಲಿ ಅಕ್ರಮಗಳಿಗೆ ಕಡಿವಾಣ ಹಾಕಲು ನಡೆಸಿರುವ ಯತ್ನ ದಂಧೆಕೋರರಿಗೆ ನುಂಗಲಾರದ ತುತ್ತಾಗಿದ್ದು, ಬೆದರಿಕೆ ತಂತ್ರಗಳು ವ್ಯವಸ್ಥಿತವಾಗಿ ನಡೆದಿವೆ. ಅನ್ಯ ಜಿಲ್ಲೆಯವರು ತಾಲೂಕಿನಲ್ಲಿ ಭಯದ ವಾತಾವರಣ ನಿರ್ಮಿಸುತ್ತಿದ್ದಾರೆ. ಮರಳು ದಂಧೆಕೋರ ಶ್ರೀನಿವಾಸ ನಾಯಕ ನೇತೃತ್ವದಲ್ಲಿ ನೂರಾರು ವಾಹನಗಳು ಮನೆಯಲ್ಲಿ ಜಮೆಗೊಂಡಿದ್ದವು. ಅವರ ನಡೆ-ನುಡಿ ನೋಡಿದರೆ ನಾವು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತೇವೆ. ಅಡ್ಡಿ ಪಡಿಸಬೇಡಿ, ತಂಟೆಗೆ ಬಂದರೆ ಹುಷಾರ್! ಎಂಬ ವರ್ತನೆ ಅವರಲ್ಲಿತ್ತು. ಸುದ್ದಿ ತಿಳಿಯುತ್ತಲೇ ನಮ್ಮ ಬೆಂಬಲಿಗರು, ಕಾರ್ಯಕರ್ತರು ದಿಢೀರನೇ ಮನೆಗೆ ಧಾವಿಸಿದ್ದು, ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿತ್ತು. ನಾನೇ ಎಲ್ಲರನ್ನು ಸಮಾಧಾನ ಮಾಡಿ ಸಾಂತ್ವನ ಹೇಳಿ ಕಳಿಸಿರುವೆ ಎಂದು ವಿವರಿಸಿದ್ದಾರೆ.
ಕ್ಷೇತ್ರದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿಷ್ಕ್ರಿಯವಾಗಿದ್ದು, ಮರಳು ದಂಧೆಕೋರರಿಗೆ ಬಹಿರಂಗವಾಗಿ ಬೆಂಬಲಕ್ಕೆ ನಿಂತಿದೆ. ಪೊಲೀಸ್ ಇಲಾಖೆಯಲ್ಲಿ ಗುಪ್ತದಳ ಏನು ಕೆಲಸ ಮಾಡುತ್ತಿದೆಯೋ ತಿಳಿಯುತ್ತಿಲ್ಲ. ಸ್ಥಳೀಯರಿಗೆ ತೊಂದರೆಯಾಗುತ್ತದೆ ಎಂಬ ಉದ್ದೇಶದಿಂದ ಟೋಲ್ ತೆರಿಗೆ ಸಂಗ್ರಹ ವಿರುದ್ಧ ಧ್ವನಿ ಎತ್ತಿದವರ ಮೇಲೆ ಪೊಲೀಸರು ಕೇಸ್ ಹಾಕುತ್ತಾರೆ. ಆದರೆ ಶಾಸಕರ ಮನೆಗೆ ನೂರಾರು ಜನರು ಅಕ್ರಮ ಕೂಟ ಕಟ್ಟಿಕೊಂಡು ಬೆದರಿಸಿದ್ದರೂ ಪ್ರಕರಣ ದಾಖಲಿಸಿಲ್ಲ ಎಂದು ಆರೋಪಿಸಿದ್ದಾರೆ.
ದೇವಸ್ಥಾನಕ್ಕೆ ಹೋಗುವಾಗ ಟಿಪ್ಪರ್ ಅನ್ನು ನನ್ನ ವಾಹನದ ಮೇಲೆ ಹೇರುವ ಪ್ರಯತ್ನಗಳೂ ನಡೆದಿವೆ. ಅಕ್ರಮ ಮರಳು ತಡೆಯಲು ಹೋದ ನಮ್ಮ ಕಂದಾಯ ಅಧಿಕಾರಿ ಮೇಲೆ ಲಾರಿ ಹಾಯಿಸಲು ಬಂದಿದ್ದರು ಎಂದು ಸ್ವತಃ ತಹಸೀಲ್ದಾರರೇ ಹೇಳುತ್ತಿದ್ದಾರೆಂದ ಮೇಲೆ ಪರಿಸ್ಥಿತಿ ಹೇಗಿದೇ? ಎಂಬುದು ಅರ್ಥವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಶಾಸಕಿ, ಈ ಘಟನೆ ಕುರಿತು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವರ ಬಳಿ ದೂರು ನೀಡಲಾಗುವದು. ಜೊತೆಗೆ ಬರುವ ಅಧಿವೇಶನದಲ್ಲೂ ಸದನದ ಗಮನ ಸೆಳೆಯುವೆ ಎಂದಿದ್ದಾರೆ.
ಶಾಸಕರ ಮನೆಗೆ ಏಕಾಏಕಿ ಗುಂಪು ಕಟ್ಟಿಕೊಂಡು ಬಂದು ಭಯದ ವಾತಾವರಣ ನಿರ್ಮಿಸಿರುವವರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ವಕೀಲ ಮತ್ತು ಜೆಡಿಎಸ್ ಮುಖಂಡ ಹನುಮಂತ್ರಾಯ ಚಿಂತಲಕುಂಟಿ ದೂರು ನೀಡಿದ್ದು, 60ಕ್ಕೂ ಅಧಿಕ ಜನರ ಮೇಲೆ ಅಕ್ರಮಕೂಟ ರಚನೆ ಮತ್ತು ಅಕ್ರಮ ಪ್ರವೇಶ ಹಾಗೂ ಜೀವಭಯದ ಆರೋಪಗಳ ಆಧರಿಸಿ ಪ್ರಕರಣ ದಾಖಲಾಗಿದೆ.