ಎರಡು ದಶಕಗಳ ಬಳಿಕ ಆಯೋಜನೆಗೊಂಡಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಮೇಲೆ ನಗರ ಕ್ಷೇತ್ರದ ಬಿಜೆಪಿ ಶಾಸಕ ಡಾ.ಎಸ್‌.ಶಿವರಾಜ ಪಾಟೀಲ್ ಮುನಿಸಾಗಿದ್ದಾರೆ.

ಕನ್ನಡಪ್ರಭ ವಾರ್ತೆ ರಾಯಚೂರು

ಎರಡು ದಶಕಗಳ ಬಳಿಕ ಆಯೋಜನೆಗೊಂಡಿರುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವದ ಮೇಲೆ ನಗರ ಕ್ಷೇತ್ರದ ಬಿಜೆಪಿ ಶಾಸಕ ಡಾ.ಎಸ್‌.ಶಿವರಾಜ ಪಾಟೀಲ್ ಮುನಿಸಾಗಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬರುವ ಫೆ.5 ರಿಂದ 7 ವರೆಗೆ ಹಮ್ಮಿಕೊಂಡಿರುವ ಉತ್ಸವದ ಪೂರ್ವ ಸಿದ್ಧತೆ, ಕಾರ್ಯಕ್ರಮಗಳ ಆಯ್ಕೆ, ಕಲಾವಿದರಿಗೆ ಅವಕಾಶ ಸೇರಿ ವಿವಿಧ ವಿಚಾರಗಳಲ್ಲಿ ಹಲವಾರು ಲೋಪದೋಷಗಳಿವೆ. ಉತ್ಸವಕ್ಕೆ ಸ್ಥಳೀಯ ಶಾಸಕರನ್ನೇ ಕಡೆಗಣಿಸ ಲಾಗಿದೆ ಎಂದು ಅವರು ಬಹಿರಂಗ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಉತ್ಸವ ಪೂರ್ವದಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಸಿದ್ಧತೆಯ ಸಭೆ ಇತರೆ ಕಾರ್ಯಕ್ರಮಗಳಿಗೆ ಶಾಸಕರನ್ನು ಆಹ್ವಾನಿಸುತ್ತಿಲ್ಲ, ಇಷ್ಟು ವರ್ಷಗಳ ನಂತರ ಜಿಲ್ಲಾ ಉತ್ಸವವನ್ನು ನಡೆಸಲಾಗುತ್ತಿದ್ದು, ಸ್ಥಳೀಯ ಐತಿಹಾಸಿಕ ಸ್ಮಾರಕಗಳು, ಸಾಹಿತ್ಯ, ಸಂಸ್ಕೃತಿ, ಆಚಾರ ವಿಚಾರ ಆದ್ಯತೆ ನೀಡಿಲ್ಲ, ಸ್ಥಳೀಯ ಕಲಾವಿದರನ್ನು ನಾಮ್‌ಕೆವಾಸ್ತೆ ಪರಿಗಣಿಸಿದ್ದಾರೆ, ಜಿಲ್ಲೆಯಲ್ಲಿ ನೂರಾರು ಸಂಘಟನೆಗಳು, ಸಂಸ್ಥೆಗಳು, ಸ್ವಯಂ ಸೇವಕರಿದ್ದು ಇಲ್ಲಿ ತನಕ ಅವರ ಭಾಗಿತ್ವವು ಎಲ್ಲೂ ಕಾಣುತ್ತಿಲ್ಲ, ಕೇವಲ ಸಭೆಗಳಿಗೆ ಮಾತ್ರ ಅವರನ್ನು ಸೀಮಿತಗೊಳಿಸಿದ್ದಾರೆ ಎಂದು ಶಾಸಕ ಡಾ.ಎಸ್.ಶಿವರಾಜ ಪಾಟೀಲ್‌ ಅವರು ಕನ್ನಡ ಪ್ರಭದೊಂದಿಗೆ ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಉತ್ಸವ ಪೂರ್ವ ಸಿದ್ಧತೆ ವಿಚಾರದಲ್ಲಿ ಸ್ಥಳೀಯ ಶಾಸಕರನ್ನು ಜಿಲ್ಲಾಡಳಿತ ಪರಿಗಣಿಸಿ, ಉತ್ಸವಕ್ಕೆ ಸಂಬಂಧಿಸಿದ ಸಭೆಗಳು, ಕಾರ್ಯಕ್ರಮಗಳು, ಸಲಹೆ ಸೂಚನೆ ಸೇರಿ ಇತರೆ ವಿಷಯಗಳನ್ನು ಗಮನಕ್ಕೆ ತಾರದೇ ಮಾಡುತ್ತಿದ್ದಾರೆ. ಸ್ಥಳೀಯ ಕಲಾ ವಿದರಿಗೆ ನೀಡಬೇಕಾದ ಚಿತ್ರ ಬಿಡಿಸುವುದು, ಪೆಂಡಾಲ್‌, ವಿಚಾರಗೋಷ್ಠಿಗಳು, ಸಂಗೀತ,ನೃತ್ಯದ ಮುಖ್ಯ ವೇದಿಕೆಯಲ್ಲಿ ಅನ್ಯ ಜಿಲ್ಲೆಯವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ದೂರಿದ್ದಾರೆ.

ಕಿಚಡಿಯಾಗಿರುವ ಉತ್ಸವ: ಪ್ರತಿ ವರ್ಷ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಮೂರು ದಿನಗಳ ಕಾಲ ಕೃಷಿ ಮೇಳ ಆಯೋಜಿಸುತ್ತಾರೆ ಇದೀಗ ಅದೇ ಕೃಷಿ ಮೇಳದಲ್ಲಿ ಜಿಲ್ಲಾ ಉತ್ಸವನ್ನು ಸೇರಿಸಿದ್ದಾರೆ, ಅದರೊಟ್ಟಿಗೆ ಉದ್ಯೋಗ ಮೇಳ, ಗ್ಯಾರಂಟಿ ಸಮಾವೇಶವನ್ನು ಸೇರಿಸಿ ಒಂದು ಥರಾ ಕಿಚಡಿಯನ್ನಾಗಿಸಿದ್ದಾರೆ. ಜಿಲ್ಲಾ ಉತ್ಸವದ ಹೆಸರಿನಲ್ಲಿ ರಾಜ್ಯ ಸರ್ಕಾರದ ಯೋಜನೆಗಳನ್ನು, ಕಾಮಗಾರಿಗಳನ್ನು ಉದ್ಘಾಟಿಸುವ ತಯಾರಿಯನ್ನು ಮಾಡಿಕೊಳ್ಳುತ್ತಿದ್ದು ಇದು ಜಿಲ್ಲೆಯ ಉತ್ಸವವಲ್ಲ ಒಂದು ಪಕ್ಷದ ಉತ್ಸವವಾಗಿದೆ ಎಂದು ಗಂಭೀರವಾಗಿ ಆರೋಪಿಸುತ್ತಿದ್ದಾರೆ.

ಉಸ್ತುವಾರಿ ಸಚಿವರಿಂದ ಪ್ರಶ್ನೆ

ರಾಯಚೂರಿನಲ್ಲಿ ಸೋಮವಾರ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಉಸ್ತುವಾರಿ ಸಚಿವ ಡಾ.ಶರಣ ಪ್ರಕಾಶ ಪಾಟೀಲ್‌ ಅವರು ವೇದಿಕೆಯಲ್ಲಿ ಕುಳಿತುಕೊಂಡಿದ್ದಾಗ ಶಾಸಕ ಡಾ.ಎಸ್.ಶಿವರಾಜ ಪಾಟೀಲ್‌ ಅವರನ್ನು ಉತ್ಸವದ ಕುರಿತ ಅಧಿಕಾರಿಗಳ ಸಭೆಗೆ ಬರುವಂತೆ ತಿಳಿಸಿದ್ದು, ಆದರೆ ಜಿಲ್ಲಾಡಳಿತವು ನನಗೆ ಮಾಹಿತಿ ನೀಡಿಲ್ಲವೆಂದು ಶಾಸಕರು ನೇರವಾಗಿಯೇ ಉಸ್ತುವಾರಿ ಸಚಿವರಿಗೆ ಹೇಳಿದ್ದಾರೆ. ನಂತರ ಸ್ಥಳೀಯ ಹೊಸ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಉಸ್ತುವಾರಿ ಸಚಿವರು ಇದನ್ನೇ ಪ್ರಶ್ನಿಸಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಫೋನ್‌ ಮುಖಾಂತರ ಶಾಸಕರಿಗೆ ಮಾಹಿತಿ ನೀಡುವುದಾಗಿ ತಿಳಿಸಿದ್ದು, ಇದನ್ನು ಕೇಳಿದ ಮೇಲೆ ಸಚಿವರು ಸಭೆಯನ್ನು ಮುಂದುವರೆಸಿದ್ದಾರೆ.

---

ಇಷ್ಟು ವರ್ಷಗಳ ನಂತರ ನಡೆಯುತ್ತಿರುವ ಜಿಲ್ಲಾ ಉತ್ಸವದಲ್ಲಿ ಹಲವಾರು ಲೋಪದೋಷಗಳನ್ನು ಮಾಡಲಾಗುತ್ತಿದೆ. ಕೃಷಿ ಮೇಳದಲ್ಲಿ ಎಲ್ಲವನ್ನೂ ಸೇರಿಸಿ ಜಿಲ್ಲಾ ಉತ್ಸವನ್ನು ಪಕ್ಷದ ಉತ್ಸವವನ್ನಾಗಿಸಿದ್ದಾರೆ. ಮೊನ್ನೆ ನಡೆದ ಸಭೆಗೆ ನನಗೆ ಆಹ್ವಾನ ನೀಡಿಲ್ಲ ಇದನ್ನೇ ಉಸ್ತುವಾರಿ ಸಚಿವರ ಗಮನಕ್ಕುಕ್ಕೂ ತರಲಾಗಿತ್ತು.

- ಡಾ.ಎಸ್.ಶಿವರಾಜ ಪಾಟೀಲ್‌, ಶಾಸಕರು, ರಾಯಚೂರು