ಮಹಾನ್ ಪುರುಷರ ಜೀವನ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಅವರ ವಿಚಾರಧಾರೆಗಳನ್ನು ನಾವೆಲ್ಲರೂ ಅರಿಯಬೇಕು ಎಂದು ಸಾಹಿತಿ ವೀರ ಹನುಮಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಮಹಾನ್ ಪುರುಷರ ಜೀವನ ಸಾಧನೆ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಅವರ ವಿಚಾರಧಾರೆಗಳನ್ನು ನಾವೆಲ್ಲರೂ ಅರಿಯಬೇಕು ಎಂದು ಸಾಹಿತಿ ವೀರ ಹನುಮಾನ್ ಅಭಿಪ್ರಾಯ ವ್ಯಕ್ತಪಡಿಸಿದರು.ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮದಲ್ಲಿ ಮಂಗಳವಾರ ವಿಶೇಷ ಉಪನ್ಯಾಸ ನೀಡಿದ ಅವರು. ಸವಿತಾ ಮಹರ್ಷಿಗಳು ತಿಳಿಸಿದ ಮಹತ್ವದ ತತ್ತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸವಿತಾ ಸಮಾಜವನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಮತ್ತು ಸಮಾಜವನ್ನು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಮುಂದೆ ತರುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು. ಸವಿತಾ ಮಹರ್ಷಿಗಳು ಸಾಧಕ ವ್ಯಕ್ತಿಯಾಗಿದ್ದು, ಸವಿತಾ ಸಮಾಜದ ಮೂಲ ಪುರುಷರಾಗಿದ್ದಾರೆ. ಲೋಕದ ಜ್ಞಾನವನ್ನು ಹೊಂದಿದ್ದ ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ನಿಟ್ಟಿನಲ್ಲಿ ಉತ್ತಮ ಸಂದೇಶಗಳನ್ನು ನೀಡಿದ್ದಾರೆ. ಮನುಕುಲದ ಉದ್ಧಾರಕ್ಕಾಗಿ ಜನ್ಮವೆತ್ತಿ, ಮಾನಕುಲಕ್ಕೆ ಸಮ ಸಮಾಜದ ಸಂದೇಶವನ್ನು ಸಾರಿ, ಮನುಷ್ಯನ ದೈಹಿಕ ಮತ್ತು ಮಾನಸಿಕ ವ್ಯಕ್ತಿತ್ವವನ್ನು ರೂಪಿಸುವ ನಿಟ್ಟಿನಲ್ಲಿ ಸಾಕಷ್ಟು ವಿಚಾರಗಳನ್ನು ನೀಡಿದ್ದಾರೆ. ಅಂತಹ ಮಹಾನ್ ಮಹರ್ಷಿಗಳ ವಿಚಾರಗಳನ್ನು ನಾವು ಅರಿಯಬೇಕು ಎಂದರು.
ಸವಿತಾ ಮಹರ್ಷಿ ಭಾವಚಿತ್ರ ಮೆರವಣಿಗೆ: ವೇದಿಕೆ ಕಾರ್ಯಕ್ರಮಕ್ಕೂ ಪೂರ್ವದಲ್ಲಿಸ್ಥಳೀಯ ಸವಿತಾ ಮಹರ್ಷಿ ವೃತ್ತ (ಎಂಪಿ ರಸ್ತೆ ಹತ್ತಿರ) ದಿಂದ ಸವಿತಾ ಮಹರ್ಷಿ ಭಾವಚಿತ್ರದ ಮೆರವಣಿಗೆಗೆ ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರಾದ ಸಂತೋಷ ರಾಣಿ ಅವರು ಚಾಲನೆ ನೀಡಿದರು. ಮೆರವಣಿಗೆಯು ವಿವಿಧ ಕಲಾ ತಂಡಗಳೊಂದಿಗೆ ಸಾಗಿ ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರಕ್ಕೆ ಬಂದು ಸೇರಿತು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ಡಾರ್ ಪರಶುರಾಮ, ಮಹಾನಗರ ಪಾಲಿಕೆಯ ಕಂದಾಯ ಅಧಿಕಾರಿ ನರಸಿಂಹ ರೆಡ್ಡಿ, ಸಮಾಜದ ಮುಖಂಡರಾದ ಗೋವಿಂದ, ನಾಗರಾಜ್, ನರಸರೆಡ್ಡಿ, ವೆಂಕಟೇಶ, ರಾಘವೇಂದ್ರ ಇಟಗಿ, ನಾಗರಾಜ್, ಸುಮಾ ಅಶೋಕ ಗಸ್ತಿ, ಗಾಯತ್ರಿ, ಜಿ.ಆನಂದ, ಬಸವರಾಜ, ಸುಶೀಲಾ, ಭೀಮೇಶ್ ಸೇರಿದಂತೆ ಇತರರು ಇದ್ದರು.