ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ರಜತಮಹೋತ್ಸವ । ವೀರ ಯೋಧರಿಗೆ ಗೌರವಾರ್ಪಣೆಕನ್ನಡಪ್ರಭ ವಾರ್ತೆ ಪುತ್ತೂರು
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ, ದೇಶದ ಸಕಲ ಅನಾಹುತಗಳಿಗೆ ಶಿಕ್ಷಣ ಸಂಸ್ಥೆಗಳೇ ಕಾರಣ. ಕೊಡಬೇಕಾದ ಕಾಲದಲ್ಲಿ ದೇಶಭಕ್ತಿಯನ್ನು, ಸಂಸ್ಕಾರವನ್ನು ಕೊಡದಿರುವುದೇ ಸಮಸ್ಯೆಗಳ ಮೂಲಕೇಂದ್ರ. ಈ ಹಿನ್ನೆಲೆಯಲ್ಲಿ ನಿರಂತರ ದೇಶಪ್ರೇಮ ಸಹಿತ ಶಿಕ್ಷಣವನ್ನು ಅಂಬಿಕಾದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ನುಡಿದರು.ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ವೈಯಕ್ತಿಕ ನೆಲೆಯಿಂದ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರಿಗೆ ಮಿಲಿಟರಿ ಪಡೆಗಳ ಸಂಯುಕ್ತ ಚಿಹ್ನೆಯ ಬಂಗಾರದ ಪ್ರತಿಕೃತಿ ನೀಡಿ ಗೌರವಿಸಿದರು. ವಿವಿಧ ಸಂಘಟನೆಗಳು ಹಾಗೂ ವ್ಯಕ್ತಿಗಳಿಂದ ಸನ್ಮಾನ ಕಾರ್ಯಕ್ರಮ ನಡೆಯಿತು. ಅಂಬಿಕಾ ಸಂಸ್ಥೆಗಳ ವಿದ್ಯಾರ್ಥಿಗಳು ಸಂಜಯ್ ಕುಮಾರ್ ಅವರಿಗೆ ನೆನಪಿನ ಕಾಣಿಕೆಗಳನ್ನು ನೀಡಿ ಕೃತಜ್ಞತೆ ತೋರಿದರು.ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ಮೇಜರ್ ಜನರಲ್ ಎಂ.ವಿ.ಭಟ್, ಕರ್ನಲ್ ಶರತ್ ಚಂದ್ರ ಭಂಡಾರಿ, ಕೊಡಗು ಜಿಲ್ಲೆ ಮಾಜಿ ಸೈನಿಕ ಸಂಘದ ಅಧ್ಯಕ್ಷ ಕ್ಯಾಪ್ಟನ್ ದಯಾನಂದ್, ಪುತ್ತೂರಿನ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಾರ್ಜೆಂಟ್ ವಸಂತ ಕುಮಾರ್ ಮತ್ತಿತರರಿದ್ದರು. ವಿವಿಧ ಯುದ್ಧಗಳಲ್ಲಿ ಭಾಗವಹಿಸಿ ನಿವೃತ್ತಿ ಹೊಂದಿರುವ ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬಸ್ಥರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಪುತ್ತೂರಿನ ಮಾಜಿ ಸೈನಿಕರ ಸಂಘದ ಸುಬೇದಾರ್ ಸುಂದರ ಗೌಡ ಸ್ವಾಗತಿಸಿದರು. ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕಿ ಸುಚಿತ್ರಾ ಪ್ರಭು ಸನ್ಮಾನ ಪತ್ರ ವಾಚಿಸಿದರು. ಅಂಬಿಕಾ ಪದವಿಪೂರ್ವ ವಿದ್ಯಾಲಯದ ಉಪನ್ಯಾಸಕ ಆದರ್ಶ ಗೋಖಲೆ ನಿರ್ವಹಿಸಿದರು. ಮಡಿಕೇರಿ ಮಾಜಿ ಸೈನಿಕ ಸಂಘದ ಅಧ್ಯಕ್ಷ ಪೆಮ್ಮಯ್ಯ ಅನಿಸಿಕೆ ವ್ಯಕ್ತಪಡಿಸಿದರು. ಅಂಬಿಕಾ ವಿದ್ಯಾರ್ಥಿನಿಯರು ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರ ಬಗೆಗೆ ರಚಿಸಿದ ಕವನ ವಾಚಿಸಿದರು. ಭೋಜನದ ವ್ಯವಸ್ಥೆಯನ್ನು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಲಾಯಿತು.ಮೆರವಣಿಗೆ:
ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ದರ್ಬೆ ಸರ್ಕಲ್ ಬಳಿ ಐತಿಹಾಸಿಕ ಮೆರವಣಿಗೆಯನ್ನು ಶ್ರೀ ಮಹಾವೀರ ಆಸ್ಪತ್ರೆಯ ವೈದ್ಯ ಡಾ.ಸುರೇಶ್ ಪುತ್ತೂರಾಯ ಉದ್ಘಾಟಿಸಿದರು. ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಗೌರವಾಧ್ಯಕ್ಷ ಲಕ್ಷ್ಮೀಶ ತೋಳ್ಪಾಡಿ, ಆಡಳಿತ ಮಂಡಳಿ ಸದಸ್ಯ ಬಾಲಕೃಷ್ಣ ಬೋರ್ಕರ್, ಹಿರಿಯ ನ್ಯಾಯವಾದಿ ಮಹೇಶ್ ಕಜೆ,ಅಂಬಿಕಾ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ, ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ, ರಾಜಕೀಯ ನೇತಾರರಾದ ಸಾಜ ರಾಧಾಕರಷ್ಣ ಆಳ್ವ, ಶಿವರಾಮ ಆಳ್ವ ಮೊದಲಾದ ಗಣ್ಯರು ಹಾಜರಿದ್ದರು.ಅಂಬಿಕಾ ಶಿಕ್ಷಣ ಸಂಸ್ಥೆಗಳನ್ನೊಳಗೊಂಡಂತೆ ಪುತ್ತೂರಿನ ವಿವಿಧ ಶಿಕ್ಷಣ ಸಂಸ್ಥೆಯ ಉದ್ಯೋಗಿಗಳು, ವಿದ್ಯಾರ್ಥಿಗಳು, ಮಾಜಿ ಸೈನಿಕರ ಸಂಘದ ಸದಸ್ಯರು, ವಿವಿಧ ಸಂಘಟನೆಗಳ ಸದಸ್ಯರು ಪರಮವೀರ ಚಕ್ರ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರನ್ನು ವಿಶಿಷ್ಟವಾಗಿ ರೂಪಿಸಲಾಗಿದ್ದ ರಥದಲ್ಲಿ ಕುಳ್ಳಿರಿಸಿ ವೈಭವೋಪೇತವಾಗಿ ಕಿಲ್ಲೆ ಮೈದಾನದ ಬಳಿಯ ಅಮರ್ ಜವಾನ್ ಜ್ಯೋತಿ ಸ್ಮಾರಕದೆಡೆಗೆ ಮೆರವಣಿಗೆ ನಡೆಸಿದರು. ಸ್ಮಾರಕದಲ್ಲಿ ಈ ದೇಶಕ್ಕಾಗಿ ಪ್ರಾಣಾರ್ಪಣೆಗೈದ ವೀರ ಯೋಧರಿಗೆ ಲೆಫ್ಟಿನೆಂಟ್ ಸಂಜಯ್ ಕುಮಾರ್ ಗೌರವ ಸಲ್ಲಿಸಿದರು. ಹಾದಿಯುದ್ದಕ್ಕೂ ಸಾರ್ವಜನಿಕರು, ವರ್ತಕರು, ದೇಶಾಭಿಮಾನಿ ಬಂಧುಗಳು ವೀರ ಯೋಧನಿಗೆ ಮಾಲಾರ್ಪಣೆ ಮಾಡಿ ಗೌರವಿಸಿದರು. ಮೆರವಣಿಗೆಯಲ್ಲಿ ರಾಷ್ಟ್ರಧ್ವಜ, ಡೊಳ್ಳುಕುಣಿತ, ಚೆಂಡೆ, ಗೊಂಬೆ, ಸ್ಥಬ್ಧಚಿತ್ರಗಳು, ಗೌರವ ಸೂಚಕ ಬೃಹತ್ ಕೊಡೆಗಳು, ಜತೆಸೇರಿ ಮೆರವಣಿಗೆಯ ಸೌಂದರ್ಯವನ್ನು ಹೆಚ್ಚಿಸಿದವು. ಜತೆಗೆ ಎನ್‌ಸಿಸಿ, ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗಿಯಾಗಿ ಶಿಸ್ತಿನ ಸಂಚಲನವನ್ನು ನಡೆಸಿಕೊಟ್ಟರು. ಮೆರವಣಿಗೆಯ ಮಧ್ಯೆ ಭಾರತಾಂಬೆಯ ವೇಷ ಧರಿಸಿದ ಅಂಬಿಕಾ ವಿದ್ಯಾರ್ಥಿನಿ ಹಾಗೂ ಅದಕ್ಕೆ ಪೂರಕವಾಗಿ ಮೂಡಿಬಂದ ದೇಶಭಕ್ತಿ ಗೀತೆ ಎಲ್ಲರ ಗಮನ ಸೆಳೆಯಿತು. ಎಲ್ಲರಿಂದ ವಂದೇ ಮಾತರಂ ಗೀತೆ:
ಸಭಾ ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನೆಯ ವೇಳೆಗೆ ಇಡಿಯ ಸಭಾಂಗಣದಲ್ಲಿದ್ದವರೆಲ್ಲರೂ ಪ್ರಾರ್ಥಿಸುವುರೊಂದಿಗೆ ವಂದೇ ಮಾತರಂ ಗೀತೆಗೆ ಧ್ವನಿ ಸೇರಿಸಿದ್ದು ವಿಶೇಷವಾಗಿ ಮೂಡಿಬಂತು.ವಿಶಿಷ್ಟ ಉದ್ಘಾಟನೆ:ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತ ಲೆಫ್ಟಿನೆಂಟ್ ಸಂಜಯ್ ಕುಮಾರ್ ಅವರು ಗುಂಡಿ ಅದುಮಿದಾಗ ರೆಫೇಲ್ ಮಾದರಿಯ ವಿಮಾನ ಮೇಲೆ ಹಾರುವ ವಿಶಿಷ್ಟ ವ್ಯವಸ್ಥೆಯನ್ನು ಅಂಬಿಕಾದಲ್ಲಿ ರೂಪಿಸಲಾಗಿತ್ತು. ಆ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.