ಹಾವೇರಿ: ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಪ್ರತಿ ವರ್ಷ ಡಾ. ಬೇಂದ್ರೆ ಅವರ ಜನ್ಮ ದಿನದಂದು ನೀಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸನ್ಮಾನಿಸಲಾಯಿತು.
ಈ ವೇಳೆ ಖ್ಯಾತ ಸಾಹಿತಿ ಡಾ. ಶ್ರೀಪಾದ ಶೆಟ್ಟಿ ಮಾತನಾಡಿ, ಬರೆದಂತೆ ಬದುಕಿ, ಸಮುಷ್ಠಿಪ್ರಜ್ಞೆಯನ್ನು ಮೈಗೂಡಿಸಿಕೊಂಡಿರುವ ಸತೀಶ ಕುಲಕರ್ಣಿ ಐವತ್ತು ವರ್ಷಗಳ ಹಿಂದೆ ಕಪ್ಪು ನೆಲದ ಕೆಂಪು ಕಾವ್ಯದ ಮೂಲಕ ಪ್ರಸಿದ್ಧರಾದವರು. ಬೆಂಕಿಯನ್ನು ಬೆಳದಿಂಗಳಾಗಿಸುವ ಸಾಮರ್ಥ್ಯದ ಕವಿ ಎಂದರು.
ಹಿರಿಯ ಜಾನಪದ ವಿದ್ವಾಂಸ ಶಂಭು ಬಳಿಗಾರ ಮಾತನಾಡಿ, ಹಾವೇರಿ ನೆಲದ ಅಸ್ಮಿತೆಯಾಗಿರುವ ಸತೀಶ ತಾವು ಮಾತ್ರ ಬೆಳೆಯದೆ ಮಹಾವೃಕ್ಷವಾಗಿ ಅನೇಕರನ್ನು ಬೆಳೆಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದ ಕ್ರಿಯಾಶೀಲರಾಗಿ ತೊಡಗಿಸಿಕೊಳ್ಳುವ ಸತೀಶ ಅವರು ಈಗಲೂ ಅನೇಕರಿಗೆ ಮಾದರಿಯಾಗಿದ್ದಾರೆ ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಮಾತನಾಡಿ, ಈ ವರೆಗೆ ರಾಜ್ಯ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದ ಸತೀಶ ಅವರಿಗೆ ರಾಷ್ಟ್ರೀಯ ಪುರಸ್ಕಾರ ಲಭಿಸಿದ್ದು ವಿಶೇಷವಾಗಿದೆ. ಕಾವ್ಯವನ್ನೇ ಉಸಿರಾಗಿಸಿಕೊಂಡಿರುವ ಕುಲಕರ್ಣಿ ಅವರ ಸಾಧನೆ ಅಮೋಘ ಎಂದರು.
ಈ ವೇಳೆ ವಿಜಯಕುಮಾರ ಮುದಕಣ್ಣನವರ, ವೈ.ಬಿ. ಆಲದಕಟ್ಟಿ, ಎಸ್.ಎನ್. ದೊಡ್ಡಗೌಡರ ಮಾತನಾಡಿದರು. ಡಾ. ಗೀತಾ ಸುತ್ತಕೋಟಿ. ರೇಣುಕಾ ಗುಡಿಮನಿ, ಶಂಕರ ಸುತಾರ, ನೇತ್ರಾ ಅಂಗಡಿ, ಎನ್.ಬಿ. ಕಾಳೆ, ಈರಣ್ಣ ಬೆಳವಡಿ, ಎ.ಬಿ. ಗುಡ್ಡಳ್ಳಿ, ಮಾಲತೇಶ ಮರಿಗೂಳಪ್ಪನವರ ಇತರರಿದ್ದರು. ಎಸ್.ಆರ್. ಹಿರೇಮಠ ಸ್ವಾಗತಿಸಿದರು. ಪೃಥ್ವಿರಾಜ ಬೆಟಗೇರಿ ಕಾರ್ಯಕ್ರಮ ನಿರೂಪಿಸಿದರು. ಶಂಕರ ಬಡಿಗೇರ ವಂದಿಸಿದರು.