ಹಡಿನಬಾಳ ಗ್ರಾಪಂನಲ್ಲಿ ಗ್ರಾಮಸ್ಥರು ಪಿಡಿಒ ನಡುವೆ ಮಾತಿನ ಚಕಮಕಿ
ಗ್ರಾಮಸ್ಥರು ಹಾಗೂ ಪಿಡಿಒ ನಡುವೆ ಮಾತಿನ ಚಕಮಕಿ ನಡೆದ ಬಳಿಕ ಗ್ರಾಪಂ ಸಿಬ್ಬಂದಿ ಕಚೇರಿಗೆ ಬೀಗ ಹಾಕದೇ ಹಾಗೆಯೇ ಹೊರನಡೆದ ಘಟನೆ ತಾಲೂಕಿನ ಹಡಿನಬಾಳದಲ್ಲಿ ಬುಧವಾರ ಸಂಜೆ ನಡೆದಿದೆ. ಕಚೇರಿ ವ್ಯವಸ್ಥೆ ಸರಿಪಡಿಸಿ ಎಂದು ಗ್ರಾಮಸ್ಥರು ಪಿಡಿಒಗೆ ಹೇಳಿದರು. ಇದಕ್ಕೆ ಪಿಡಿಒ ಸರಿಯಾಗಿ ಸ್ಪಂದಿಸಿಲ್ಲ ಎಂದು ಅಲ್ಲಿಯೇ ಧರಣಿ ನಡೆಸಲು ಜನರು ಮುಂದಾದರು. ಆದರೆ ಅಲ್ಲಿನ ಸಿಬ್ಬಂದಿ ಜನರ ಬಗ್ಗೆ ತಲೆಕೆಡಿಸಿಕೊಳ್ಳದೆ ಎದ್ದು ಹೊರನಡೆದಿದ್ದಾರೆ.ಐದಾರು ತಿಂಗಳುಗಳಿಂದ ತಾಲೂಕಿನ ಹಡಿನಬಾಳ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಮೇಲೆ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿರುವ ಅಕ್ರಮ ಹಾಗೂ ಕಳಪೆ ಕಾಮಗಾರಿಗಳ ಕುರಿತು ದೂರುತ್ತಿದ್ದಾರೆ. ಸಾಕ್ಷ್ಯಗಳನ್ನು ನೀಡಿದ್ದಾರೆ. ಆದರೆ ಗ್ರಾಪಂ ಆಡಳಿತ ಯಾವುದೇ ಆರೋಪಕ್ಕೂ ಸೊಪ್ಪು ಹಾಕುತ್ತಿಲ್ಲ ಎಂಬುದು ಗ್ರಾಮಸ್ಥರ ಆರೋಪ.
ಗ್ರಾಮಸ್ಥರ ಕರೆಯದೆ ಸಭೆ ಮುಕ್ತಾಯ:ಜನರು ಗ್ರಾಮಸಭೆ ಕರೆಯಿರಿ ಎಂದು ಹೇಳುತ್ತಲೆ ಬಂದಿದ್ದಾರೆ. ಈ ಹಿಂದೆ ನಾಲ್ಕು ಬಾರಿ ಗ್ರಾಮಸಭೆ ಅರ್ಧಕ್ಕೆ ನಿಂತಿತ್ತು. ಆದರೆ ಗ್ರಾಮಸಭೆ ಮುಗಿದಿದೆ ಎಂದು ಪಂಚಾಯಿತಿ ಸಿಬ್ಬಂದಿ ಹೇಳುತ್ತಾರೆ. ಗ್ರಾಮಸ್ಥರ ಹಾಜರಿ ಇಲ್ಲದೆ ಅದು ಹೇಗೆ ಗ್ರಾಮಸಭೆ ಮುಗಿಯುತ್ತದೆ? ಗ್ರಾಮಸ್ಥರು ಆರೋಪಕ್ಕೆ ಉತ್ತರ ಕೊಡಲಾಗದೆ ಹೋದಿರಾ? ಇದೆಂತ ಆಡಳಿತ ವ್ಯವಸ್ಥೆ ಇರಬಹುದು ಎನ್ನುತ್ತಾರೆ ಗ್ರಾಮಸ್ಥರು.
ಪಂಚಾಯತ್ ಬೀಗ ಹಾಕದೇ ತೆರಳಿದ ಸಿಬ್ಬಂದಿ:ಬುಧವಾರ ಸಂಜೆ ಗ್ರಾಮಸ್ಥರ ಜತೆ ವಾಗ್ವಾದ ನಡೆದ ಬಳಿಕ 6 ಗಂಟೆ ಸುಮಾರಿಗೆ ಕಚೇರಿ ಮುಚ್ಚದೇ ಪಿಡಿಒ ಹಾಗೂ ಸಿಬ್ಬಂದಿ ತೆರಳಿದ್ದಾರೆ. ಆಮೇಲೆ 7.56ರ ಸುಮಾರಿಗೆ ಪೊಲೀಸರೊಂದಿಗೆ ಬಂದು ಬೀಗ ಹಾಕಿದ್ದಾರೆ. ಸಿಬ್ಬಂದಿ ನಡೆ ಗ್ರಾಮದಲ್ಲಿ ಚರ್ಚೆಗೆ ಕಾರಣವಾಗಿದೆ. ಸ್ಥಳೀಯ ಆಡಳಿತದ ಮಹತ್ವದ ದಾಖಲೆಗಳಿರುವ ಕಚೇರಿ ಮುಚ್ಚದೇ ಹೋಗಿದ್ದು ಎಲ್ಲಿಗೆ? ಅಲ್ಲಿಯ ಕಾಗದಪತ್ರ, ದಾಖಲೆಗಳ ಹೊಣೆ ಯಾರದ್ದು ಎಂದು ಜನರು ಪ್ರಶ್ನಿಸಿದ್ದಾರೆ.