ರಾಜ್ಯ ಆಹಾರ ಆಯೋಗದ ಅಧ್ಯಕ್ಷ, ಸದಸ್ಯರ ತಂಡ ವಿವಿಧೆಡೆ ದಿಢೀರ್ ಭೇಟಿ, ಪರಿಶೀಲನೆ

KannadaprabhaNewsNetwork |  
Published : Feb 06, 2026, 02:45 AM IST
ರಾಜ್ಯ ಆಹಾರ ಆಯೋಗದ ಅಧ್ಯಕ್ಷರಾದ ಡಾ.ಎಚ್.ಕೃಷ್ಣ ಮತ್ತುಸದಸ್ಯರ ತಂಡ ಆಸ್ಪತ್ರೆಗೆ ಭೇಟಿ ನೀಡಿದರು.  | Kannada Prabha

ಸಾರಾಂಶ

ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್. ಕೃಷ್ಣ ಮತ್ತು ತಂಡದ ಸದಸ್ಯರು ನಗರದ ನ್ಯಾಯ ಬೆಲೆ ಅಂಗಡಿ, ಆಹಾರ ಧಾನ್ಯ ಸಗಟು ಮಳಿಗೆ, ಅಂಗನವಾಡಿ ಕೇಂದ್ರ, ಮಧ್ಯಾಹ್ನದ ಉಪಾಹಾರ ಯೋಜನೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿರುವ ಎನ್‌ಆರ್‌ಸಿ ಘಟಕ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಗುರುವಾರ ದಿಢೀರ್ ಭೇಟಿ

ಮಡಿಕೇರಿ: ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಎಚ್. ಕೃಷ್ಣ ಮತ್ತು ತಂಡದ ಸದಸ್ಯರು ನಗರದ ನ್ಯಾಯ ಬೆಲೆ ಅಂಗಡಿ, ಆಹಾರ ಧಾನ್ಯ ಸಗಟು ಮಳಿಗೆ, ಅಂಗನವಾಡಿ ಕೇಂದ್ರ, ಮಧ್ಯಾಹ್ನದ ಉಪಾಹಾರ ಯೋಜನೆ, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಯಲ್ಲಿರುವ ಎನ್‌ಆರ್‌ಸಿ ಘಟಕ ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು. ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ ಕೋಟೆ, ಸುಮಂತ್ ರಾವ್, ಮಾರುತಿ ಎಂ. ದೊಡ್ಡಲಿಂಗನವರ್, ಎ. ರೋಹಿಣಿ ಪ್ರಿಯಾ, ಕೆ.ಎಸ್. ವಿಜಯಲಕ್ಷ್ಮಿ ಹಾಗೂ ಸದಸ್ಯ ಕಾರ್‍ಯದರ್ಶಿ ಸುಜಾತ ಡಿ. ಹೊಸಮನಿ ಅವರು ಪರಿಶೀಲನಾ ಸಂದರ್ಭದಲ್ಲಿ ಇದ್ದು, ಆಹಾರ ಸುರಕ್ಷತೆ, ಪೌಷ್ಠಿಕ ಆಹಾರ ವಿತರಣೆ, ಮತ್ತಿತರ ಬಗ್ಗೆ ಮಾಹಿತಿ ಪಡೆದರು. ಮೊದಲಿಗೆ ನಗರದ ಜನತಾ ಬಜಾರ್ ಸಂಖ್ಯೆ 59 ಕ್ಕೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಮತ್ತು ತಂಡದ ಸದಸ್ಯರು ಆಹಾರ ದಾಸ್ತಾನುವಿನಲ್ಲಿ ವ್ಯತ್ಯಾಸ, ಜಾಗೃತಿ ನಾಮಫಲಕ ಪ್ರದರ್ಶನ ಹಾಗೂ ತೂಕ ನವೀಕರಣ ಪತ್ರ ಇಲ್ಲದಿರುವುದು ಸೇರಿದಂತೆ ಹಲವು ನ್ಯೂನತೆಗಳನ್ನು ಕಂಡುಬಂದಿರುವುದನ್ನು ಮನಗಂಡ ಆಹಾರ ಆರೋಗ್ಯದ ಅಧ್ಯಕ್ಷರಾದ ಕೃಷ್ಣ ಅವರು ಅಮಾನತು ಮಾಡುವಂತೆ ಆಹಾರ ಇಲಾಖೆ ಉಪ ನಿರ್ದೇಶಕರಿಗೆ ಸ್ಥಳದಲ್ಲೇ ಸೂಚಿಸಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಭೋದಕ ಆಸ್ಪತ್ರೆಯ ಅಡುಗೆ ಕೋಣೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಜಿಲ್ಲಾಸ್ಪತ್ರೆ ಎನ್‌ಆರ್‌ಸಿ ಘಟಕಕ್ಕೆ ಭೇಟಿ ನೀಡಿ ಕಡತ ನಿರ್ವಹಣೆ ಪರಿಶೀಲಿಸಿದ ರಾಜ್ಯ ಆಹಾರ ಆಯೋಗದ ಅಧ್ಯಕ್ಷರು ಸಮರ್ಪಕ ನಿರ್ವಹಣೆ ಮಾಡದಿರುವುದಕ್ಕೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿ ಗುಣಮಟ್ಟದ ಹಾಗೂ ಪೌಷ್ಠಿಕ ಆಹಾರ ವಿತರಿಸಬೇಕು. ಯಾವುದೇ ಕಾರಣಕ್ಕೂ ಮುಲಾಜಿಗೆ ಒಳಗಾಗಬಾರದು ಎಂದು ತಾಕೀತು ಮಾಡಿದರು. ಸರ್ಕಾರಿ ಆಸ್ಪತ್ರೆಯನ್ನು ನಂಬಿ ಹಲವು ಬಡ ಕುಟುಂಬಗಳು ಚಿಕಿತ್ಸೆಗೆ ದಾಖಲಾಗುತ್ತಾರೆ. ಅವರಿಗೆ ಸರಿಯಾದ ಊಟೋಪಚಾರ ಮತ್ತು ವೈದ್ಯಕೀಯ ಚಿಕಿತ್ಸೆ ನೀಡುವುದು ಆದ್ಯ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಆಹಾರ ಆಯೋಗದ ಅಧ್ಯಕ್ಷರು ಸ್ಪಷ್ಟ ಸೂಚನೆ ನೀಡಿದರು. ಬಳಿಕ ದಾಸವಾಳ ಬಳಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಆಹಾರ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರು ಅಲ್ಲಿನ ಮಕ್ಕಳ ಹಾಜರಾತಿ, ತಾಯಿ ಕಾರ್ಡು ವಿತರಣೆ, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಠಿಕ ಆಹಾರ ಪೂರೈಕೆ, ಮೊಟ್ಟೆ, ಕಾರದಪುಡಿ, ಹೆಸರು ಕಾಳು, ಸಕ್ಕರೆ, ಅಕ್ಕಿ, ಗೋಧಿ ವಿತರಣೆ ಬಗ್ಗೆ ಸಂಬಂಧಪಟ್ಟವರಿಗೆ ಸಂಚಾರಿ ಮೊಬೈಲ್ ಮೂಲಕ ಕರೆ ಮಾಡಿ ಖಾತರಿಪಡಿಸಿಕೊಂಡರು. ಮೊಟ್ಟೆ, ಹೆಸರು ಕಾಳು, ಸಕ್ಕರೆ, ಅಕ್ಕಿ, ಗೋದಿ ಮತ್ತಿತರ ಪೌಷ್ಠಿಕ ಆಹಾರ ವಿತರಿಸುತ್ತಿದ್ದಾರೆ ಎಂದು ಗರ್ಭಿಣಿ ಪ್ರತಿಕ್ರಿಯಿಸಿದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ತಂಡವು ಮಧ್ಯಾಹ್ನದ ಬಿಸಿಯೂಟ ಯೋಜನೆ ಸಂಬಂಧಿಸಿದಂತೆ ಮಾಹಿತಿ ಪಡೆಯಿತು. ಸರ್ಕಾರ ಮಧ್ಯಾಹ್ನದ ಬಿಸಿಯೂಟಕ್ಕಾಗಿ ಸಾಕಷ್ಟು ಹಣ ನೀಡುತ್ತಿದೆ. ಬಡ ಮಕ್ಕಳಿಗೆ ಸದ್ಬಳಕೆಯಾಗಬೇಕು. ಪೌಷ್ಠಿಕ ಆಹಾರದ ಜೊತೆಗೆ ವಿದ್ಯಾರ್ಜನೆಗೆ ಕಡೆಗೆ ಮಕ್ಕಳು ಗಮನ ನೀಡಬೇಕು. ಸರ್ಕಾರ ಎಲ್ಲ ರೀತಿಯ ಸೌಲಭ್ಯ ಕಲ್ಪಿಸುತ್ತಿದ್ದು, ಸರ್ಕಾರದ ಯೋಜನೆಗಳು ಸಮರ್ಪಕವಾಗಿ ವಿದ್ಯಾರ್ಥಿಗಳಿಗೆ ತಲುಪಬೇಕು ಎಂದು ಹೇಳಿದರು. ನಂತರ ನಗರದ ರೈತ ಸಂಪರ್ಕ ಕೇಂದ್ರ ಹಾಗೂ ಕೀಟನಾಟಕ ಔಷಧ ದಾಸ್ತಾನು ಮಳಿಗೆ ವೀಕ್ಷಿಸಿ, ಕೀಟನಾಶಕ ಔಷಧ ವಿತರಣೆ ಬಗ್ಗೆ ಪರಿಶೀಲಿಸಿ, ಮಾಹಿತಿ ಪಡೆದರು. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಂಕಿತಾಧಿಕಾರಿ ಡಾ. ಅನಿಲ್ ಧಾವನ್ ಹಾಗೂ ಆಹಾರ ಇಲಾಖೆಯ ಉಪ ನಿರ್ದೇಶಕ ಭೀಮರಾಯ ಕಲ್ಲೂರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಸನ್ನ ಕುಮಾರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಎ.ಜೆ. ಲೋಕೇಶ್, ಡಾ. ನಂಜುಂಡಯ್ಯ, ಡಾ. ಸೋಮಶೇಖರ್, ಡಾ. ಅಭಿನಂದನ್, ಡಾ. ಪುರುಷೋತ್ತಮ, ಆಹಾರ ಇಲಾಖೆಯ ಉಪ ನಿರ್ದೇಶಕರಾದ ಐಟಿಡಿಪಿ ಇಲಾಖಾ ಅಧಿಕಾರಿ ಹೊನ್ನೇಗೌಡ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮ,ತ್ತಿತರರು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ರಾಜ್ಯ ಆಹಾರ ಆಯೋಗದ ಸದಸ್ಯರ ತಂಡವು ಸೋಮವಾರಪೇಟೆ, ವಿರಾಜಪೇಟೆ, ಪೊನ್ನಂಪೇಟೆ ಹಾಗೂ ಕುಶಾಲನಗರ ತಾಲೂಕುಗಳಿಗೆ ಭೇಟಿ ಪರಿಶೀಲಿಸಿ, ಮಾಹಿತಿ ಪಡೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌