ಮಂಗಳೂರು: ಕೆಎಂಸಿ ಆಸ್ಪತ್ರೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಮಂಗಳೂರು ಹಾಗೂ ಮಂಗಳೂರು ನಗರ ಸಂಚಾರಿ ಪೊಲೀಸರ ಸಹಯೋಗದಲ್ಲಿ ಆಂಬ್ಯುಲೆನ್ಸ್ ಜಾಗೃತಿ ರ್‍ಯಾಲಿ ನಡೆಯಿತು.
ಮಂಗಳೂರು ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಕ್ಲಸ್ಟರ್ ಹೆಡ್ ಡಾ.ಜೀಧು ರಾಧಾಕೃಷ್ಣನ್ ಮಾತನಾಡಿ, ತುರ್ತು ಚಿಕಿತ್ಸೆ ಆಸ್ಪತ್ರೆ ತಲುಪುವ ಮೊದಲೇ ಆರಂಭವಾಗುತ್ತದೆ. ನಮ್ಮ ಐದು ಔಟ್‌ರೀಚ್ ಕೇಂದ್ರಗಳ ಮೂಲಕ 7,800ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದ್ದು, 250ಕ್ಕೂ ಹೆಚ್ಚು ಪ್ರಥಮ ಚಿಕಿತ್ಸಾ ತರಬೇತಿ ಕಾರ್ಯಕ್ರಮಗಳ ಮೂಲಕ 12,500ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ. 300ಕ್ಕೂ ಹೆಚ್ಚು ಫಸ್ಟ್ ರೆಸ್ಪಾಂಡರ್ ಪ್ರಮಾಣಪತ್ರ ಹಾಗೂ 250ಕ್ಕೂ ಹೆಚ್ಚು ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ವಿತರಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟು, ವಿಳಂಬವಿಲ್ಲದೆ ವೈದ್ಯಕೀಯ ನೆರವು ಪಡೆಯುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದರು.
ಕೆಎಂಸಿ ಆಸ್ಪತ್ರೆ ಮಂಗಳೂರಿನ ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯಸ್ಥ ಡಾ.ದತ್ತಾತ್ರೇಯ ಪ್ರಭು ಮಾತನಾಡಿ, ತುರ್ತು ಮತ್ತು ಕ್ರಿಟಿಕಲ್ ಕೇರ್ ಚಿಕಿತ್ಸೆ ಆಸ್ಪತ್ರೆ ತಲುಪಿದ ಬಳಿಕವೇ ಆರಂಭವಾಗಬೇಕೆಂದಿಲ್ಲ. ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಆಂಬ್ಯುಲೆನ್ಸ್‌ನಲ್ಲಿ ರೋಗಿಯ ತಪಾಸಣೆ, ಮೇಲ್ವಿಚಾರಣೆ, ಅಗತ್ಯವಿರುವ ಕೆಲವು ತುರ್ತು ಚಿಕಿತ್ಸಾ ಕ್ರಮಗಳನ್ನು ಪ್ರಯಾಣದ ಸಂದರ್ಭದಲ್ಲೇ ಕೈಗೊಳ್ಳಬಹುದು. ಹೃದಯಾಘಾತ, ಪಾರ್ಶ್ವವಾಯು ಹಾಗೂ ಗಂಭೀರ ಗಾಯಗಳಂತಹ ಸಂದರ್ಭಗಳಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ ಎಂದರು. ಕೆಎಂಸಿ ಆಸ್ಪತ್ರೆಯ ಪ್ರತಿನಿಧಿಗಳು ಇದ್ದರು.ರ‍್ಯಾಲಿ ಕ್ಲಾಕ್ ಟವರ್, ಸಿಟಿ ಸೆಂಟರ್, ಪಿವಿಎಸ್, ಕೊಟ್ಟಾರ ಚೌಕಿ, ಸುರತ್ಕಲ್, ಕೂಳೂರು, ಕಾವೂರು, ಬಜ್ಪೆ, ಕುಂಟಿಕಾನ, ನಂತೂರು, ಫರಂಗಿಪೇಟೆ, ಪಂಪ್‌ವೆಲ್, ನೇತ್ರಾವತಿ ಸೇತುವೆ, ಕಂಕನಾಡಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಕೆಎಂಸಿ ಆಸ್ಪತ್ರೆಗೆ ಮರಳಿತು. ತುರ್ತು ಪರಿಸ್ಥಿತಿಯಲ್ಲಿ ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡುವುದು ರೋಗಿಗಳು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯಲು ಅತ್ಯಂತ ಮುಖ್ಯ ಎಂಬ ಸಂದೇಶವನ್ನು ರ‍್ಯಾಲಿ ಸಾರಿತು.