ಕಂದವಾರ ವಾರ್ಡ್ ನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿದ್ದ 19 ಗುಂಟೆ ಜಾಗ ದಾವೂದ್ ಷಾ ವಾಲೀ ದರ್ಗಾ ಸುನ್ನಿ ವಕ್ಫ್ ಸ್ವತ್ತು ಎಂದು ಬದಲಾವಣೆ ಮಾಡಲಾಗಿತ್ತು. 2015- 16 ರಲ್ಲಿ ಪಹಣಿಯಲ್ಲಿ ಶಾಲೆ ಬದಲು ವಕ್ಫ್ ಸ್ವತ್ತು ಎಂದು ನಮೂದಾಗಿದೆ.
ಚಿಕ್ಕಬಳ್ಳಾಪುರ : ವಿಶ್ವವಿಖ್ಯಾತ ಇಂಜಿನಿಯರ್ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ನವರು ವ್ಯಾಸಂಗ ಮಾಡಿದ್ದ ಸರ್ಕಾರಿ ಹಿರಿಯ ಶಾಲೆಯ ಆಸ್ತಿ ವಕ್ಫ್ ಹೆಸರಿಗೆ ಪರಭಾರೆಯಾಗಿದ್ದ ಬಗ್ಗೆ ಶುಕ್ರವಾರ ‘ಕನ್ನಡಪ್ರಭ’ ಪತ್ರಿಕೆಯಲ್ಲಿ ‘ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಓದಿದ ಶಾಲೆಯೂ ವಕ್ಫ್ ಮಂಡಳಿ ಆಸ್ತಿಯಂತೆ’ ಎಂದು ಸುದ್ದಿ ಪ್ರಕಟಿಸಿತ್ತು.
ಈ ಬಗ್ಗೆ ಎಚ್ಚೆತ್ತ ಕಂದಾಯ ಅಧಿಕಾರಿಗಳಿಂದ ಪಹಣಿಯಲ್ಲಿ ತಿದ್ದುಪಡಿ ಮಾಡಿದ್ದು, ನಗರದ ಕಂದವಾರ ವಾರ್ಡ್ ನಲ್ಲಿ 1965 ರಲ್ಲಿ ವಕ್ಫ್ ಆಸ್ತಿ ದಾವೂದ್ ಷಾ ವಾಲೀ ದರ್ಗಾ ಸುನ್ನಿ ವಕ್ಫ್ ಸ್ವತ್ತು 76×19 ಅಡಿಗಳ ವಿಸ್ತೀರ್ಣ ಮಾತ್ರ ಇತ್ತು. 2019ರಲ್ಲಿ ಭೂಮಿ ಶಾಖೆಯಲ್ಲಿ ಉಪ ವಿಭಾಗಾಧಿಕಾರಿಗಳ ಆದೇಶವನ್ನು ಸೇರಿಸುವಾಗ ಎಡವಟ್ಟು ಆಗಿ, 76×19 ಅಡಿಗಳು ಮಾತ್ರ(ಸುಮಾರು ಒಂದು ಕಾಲು ಗುಂಟೆ) ಎಂದು ನಮೂದು ಮಾಡುವ ವೇಳೆ 19 ಗುಂಟೆಗೆ ಸೇರಿದ್ದು ಎಂದು ನಮೂದು ಮಾಡಿದ್ದರು. ಇದರ ತಿದ್ದುಪಡಿಗೆ ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದರೂ ಸಿಗದ ಫಲ,ಕನ್ನಡಪ್ರಭ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾದ ಹಿನ್ನೆಲೆ ಎಚ್ಚೆತ್ತ ಅಧಿಕಾರಿಗಳಿಂದ ಪಹಣಿಯಲ್ಲಿ ತಿದ್ದುಪಡಿ ಮಾಡಿ, ಒಟ್ಟು ವಿಸ್ತೀರ್ಣ19 ಗುಂಟೆ ಪೈಕಿ 17.12 ಗುಂಟೆ ಜಮೀನು ಶಾಲೆಗೆ ಸೇರಿದ್ದು ಎಂದು ತಿದ್ದುಪಡಿಗೊಳಿಸಿ ಆದೇಶ ಹೊರಡಿಸಿರುವುದಾಗಿ ತಹಸೀಲ್ದಾರ್ ಅನಿಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಕಂದವಾರ ವಾರ್ಡ್ ನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹೆಸರಿನಲ್ಲಿದ್ದ 19 ಗುಂಟೆ ಜಾಗ ದಾವೂದ್ ಷಾ ವಾಲೀ ದರ್ಗಾ ಸುನ್ನಿ ವಕ್ಫ್ ಸ್ವತ್ತು ಎಂದು ಬದಲಾವಣೆ ಮಾಡಲಾಗಿತ್ತು. 2015- 16 ರಲ್ಲಿ ಪಹಣಿಯಲ್ಲಿ ಶಾಲೆ ಬದಲು ವಕ್ಫ್ ಸ್ವತ್ತು ಎಂದು ನಮೂದಾಗಿದೆ. ಸರ್ಕಾರಿ ಶಾಲೆಯ ಜಾಗದ ಉಳಿವಿಗಾಗಿ ಕಂದವಾರದ ನಿವಾಸಿಗಳು, ಶಾಲಾ ಶಿಕ್ಷಕರು ನಿರಂತರ ಹೋರಾಟ ನಡೆಸಿದ್ದಾರೆ.
ಕೆಲ ವರ್ಷಗಳ ಹಿಂದೆ ಶಾಲಾ ಆವರಣದಲ್ಲಿ ದರ್ಗಾ ತಲೆ ಎತ್ತಿದೆ. ಕಂದವಾರದ ನಿವಾಸಿಗಳು ಸರ್ಕಾರಿ ಶಾಲೆ ಉಳಿವಿಗಾಗಿ ಕಾನೂನು ಮೊರೆ ಹೋಗಿದ್ದಾರೆ.
ಈ ಕುರಿತು ಹಿಂದಿನ ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿಯಾಗಿದ್ದ ನ್ಯಾ.ಅರುಣಾಕುಮಾರಿಯವರು ಸಹ ಸಮಾರು ಒಂದು ವರ್ಷದ ಹಿಂದೆಯೇ ತಹಸೀಲ್ದಾರ್ ರಿಗೆ ಪತ್ರ ಬರೆದು ಶಾಲೆಯ ಆಸ್ತಿ ಶಾಲೆಗೆ ನೀಡುವಂತೆ ಮನವಿ ಮಾಡಿದ್ದರು. ನಂತರ ಬಂದ ನ್ಯಾಯಾಧೀಶರೂ ಸಹ ತಿಳಿಸಿದ್ದರೂ ಇಂದಿಗೂ ಪಹಣಿಯಲ್ಲಿ ಶಾಲೆಯ ಹೆಸರು ನಮೂದಾಗಿಲ್ಲ ಎಂದು ‘ಕನ್ನಡಪ್ರಭ’ ಸುದ್ದಿ ವರದಿ ಮಾಡಿತ್ತು.