ಹುಬ್ಬಳ್ಳಿ: ಕೇಂದ್ರ ಸರ್ಕಾರ ದೇಶ ಒಡೆಯುವ ದುರುದ್ದೇಶದಿಂದ ವಕ್ಫ್ ಮಸೂದೆ ತಿದ್ದುಪಡಿಗೆ ಮುಂದಾಗಿದೆ. ಈ ಕುರಿತು ಸಮಾಜ ಬಾಂಧವರು ಜಾಗೃತಿ ವಹಿಸಿ ಎಂದು ರಾಜ್ಯಸಭಾ ಸದಸ್ಯ ಡಾ. ಸೈಯ್ಯದ ನಾಸೀರ್ ಹುಸೇನ್ ಕರೆ ನೀಡಿದರು.
ವಕ್ಫ್ ಮಸೂದೆ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸುವ ಕುರಿತು ಭಾನುವಾರ ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ ಮೊದಲನೇ ಮುಸ್ಲಿಂ ವಕೀಲರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಿರಂತರವಾಗಿ ದ್ವೇಷದ ರಾಜಕಾರಣ, ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಆಡಳಿತ ನಡೆಸುತ್ತಿದೆ. ವಕ್ಫ್ ಆಸ್ತಿಗಳನ್ನು ಐತಿಹಾಸಿಕವಾಗಿ ದತ್ತಿ ಮತ್ತು ಧಾರ್ಮಿಕ ಉದ್ದೇಶಗಳಿಗೆ ಬಳಸಲಾಗಿದೆ. ಎಲ್ಲಿಯೂ ಕಾನೂನು ಉಲ್ಲಂಘಿಸಿ ಆಸ್ತಿ ಪಡೆದಿರುವುದಲ್ಲ. ಈ ವಕ್ಫ್ ಆಸ್ತಿಗಳು ಅಲ್ಲಾಹನ ಮಾಲಿಕತ್ವದ ಆಸ್ತಿಗಳು ಮತ್ತು ಮುತವಲ್ಲಿ ಹಾಗೂ ವ್ಯವಸ್ಥಾಪಕ ಸಮಿತಿಗಳು ಇವುಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡುತ್ತವೆ. ಹಲವರು ಸ್ವ ಇಚ್ಛೆಯಿಂದ ವಕ್ಫ್‌ಗೆ ಆಸ್ತಿ ನೀಡಿದ್ದಾರೆಯೇ ಹೊರತು ಎಲ್ಲಿಯೂ ದಬ್ಬಾಳಿಕೆ, ಒತ್ತಾಯಪೂರ್ವಕವಾಗಿ ಪಡೆದಿರುವ ಆಸ್ತಿಗಳಲ್ಲ ಎಂದು ಸ್ಪಷ್ಟಪಡಿಸಿದರು.
ವಕ್ಫ್ ತಿದ್ದುಪಡಿ ಮಾಡುವಂತೆ ದೇಶದಲ್ಲಿ ಎಲ್ಲಿಯೂ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಆದರೆ, ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ಈ ಮಸೂದೆ ತಿದ್ದುಪಡಿಯ ಹೆಸರಿನಲ್ಲಿ ಸಂಪೂರ್ಣವಾಗಿ ಬದಲಾಯಿಸಲು ಹೊರಟಿದೆ. ಸರ್ಕಾರ ಏಕೆ ಈ ಮಸೂದೆ ತಿದ್ದಪಡೆಗೆ ಮುಂದಾಗಿದೆ. ಇದರ ಹಿಂದಿನ ಉದ್ದೇಶವಾದರೂ ಏನು ಎಂಬುದನ್ನು ಸ್ಪಷ್ಟಪಡಿಸಲಿ ಎಂದರು.ಎಲ್ಲದಕ್ಕೂ ಅನ್ವಯವಾಗಲಿ
ಒಂದು ದೇಶ ಒಂದು ಕಾನೂನು ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರವು ವಕ್ಫ್ ತಿದ್ದುಪಡಿ ಮಾಡಿದಂತೆ ಹಿಂದೂ ಧಾರ್ಮಿಕ ಕೇಂದ್ರಗಳ ವಿಚಾರದಲ್ಲೂ ಇದೇ ಕಾಯ್ದೆ ಅನುಸರಿಸಲಿ. ಆಚರಣೆ ಆಯಾ ಧರ್ಮದವರಿಗೆ ಬಿಟ್ಟದ್ದು. ಆದರೆ, ಈ ನಿಯಮ ಬದಲಿಸುವುದಾದರೆ ಎಲ್ಲ ಧರ್ಮದಲ್ಲೂ ಬದಲಾವಣೆಗಳಾಗಲಿ ಎಂದರು.ವಕ್ಫ್ ಬೋರ್ಡ್‌ನಲ್ಲಿ ಪಾರದರ್ಶಕತೆಯ ಹೆಸರಿನಲ್ಲಿ ಅನ್ಯ ಧರ್ಮೀಯರನ್ನು ಸೇರಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಹಾಗಾದರೆ, ಬೇರೆ ಧಾರ್ಮಿಕ ಕೇಂದ್ರಗಳ ವಿಚಾರದಲ್ಲಿಯೂ ಇದೆ ನಡೆ ಅನುಸರಿಸಬೇಕು. ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಲ್ಲೂ ಮುಸ್ಲಿಂ, ಕ್ರೈಸ್ತ, ಶಿಖ್ ಸಮುದಾಯದವರನ್ನು ಸದಸ್ಯರನ್ನಾಗಿಸಲಿ ಎಂದು ಸವಾಲು ಹಾಕಿದರು.
ಅಪಪ್ರಚಾರವಾಟ್ಸ್ಆ್ಯಪ್ ಯುನಿವರ್ಸಿಟಿಯಲ್ಲಿ ಕಲಿತ ಕೆಲವು ಸಂಘ ಪರಿವಾರದವರು ದೇಶಾದ್ಯಂತ ಈ ರೀತಿಯಾಗಿ ಅಪಪ್ರಚಾರ ಮಾಡುವ ಮೂಲಕ ಅಣ್ಣ-ತಮ್ಮಂದಿರಂತೆ ಜೀವನ ನಡೆಸುತ್ತಿರುವ ಹಿಂದು- ಮುಸ್ಲಿಮರಲ್ಲಿ ದ್ವೇಷದ ಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಈಗಾಗಲೇ ಹೈದರಾಬಾದ್, ರಾಂಚಿ, ಪಟ್ನಾದಲ್ಲಿ ಸಮಾಜ ಬಾಂಧವರನ್ನು ಸೇರಿಸಿ ಜಾಗೃತಿ ಮೂಡಿಸಲಾಗಿದೆ. ಈಗ ಕರ್ನಾಟಕದಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ ವಕೀಲರ ಸಮ್ಮೇಳನ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು, ಜೈಪುರ, ದಿಲ್ಲಿ, ಕೋಲ್ಕತ್ತಾದಲ್ಲೂ ಜಾಗೃತಿ ಸಭೆ ಹಮ್ಮಿಕೊಂಡು ಜನರಿಗೆ ಮನವರಿಕೆ ಮಾಡಲಾಗುವುದು. ಯಾವುದೇ ಕಾರಣಕ್ಕೂ ವಕ್ಫ್ ಮಸೂದೆ ತಿದ್ದುಪಡಿ ಮಾಡಲು ಬಿಡುವುದಿಲ್ಲ ಎಂದರು.
ನ್ಯಾಯವಾದಿ ಮೆಹಮೂದ ಪ್ರಾಚಾ, ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಜಿ. ಕೊಸ್ಲೆ ಪಾಟೀಲ ಮಸೂದೆಯ ತಿದ್ದುಪಡಿಯಿಂದಾಗುವ ತೊಂದರೆಗಳ ಕುರಿತು ಮಾತನಾಡಿದರು.ವಕ್ಫ್ ಮಂಡಳಿ ಸದಸ್ಯ ಆಸೀಫ್ ಅಲಿ ಶೇಖ್‌ಹುಸೇನ್, ಸಂಘದ ಅಧ್ಯಕ್ಷ ಎಂ.ಆರ್. ಮುಲ್ಲಾ, ಉಪಾಧ್ಯಕ್ಷರಾದ ಎಂ.ಎ. ನದಿಮುಲ್ಲಾ, ಐ.ಕೆ. ಬೆಳಗಲಿ, ಬಿ.ಎನ್. ಜಮಾದಾರ, ರಾಜೇಸಾಬ್, ಕಾರ್ಯದರ್ಶಿಗಳಾದ ಅಯೂಬ ಚೆನ್ನಾಪುರ, ಎಂ.ಎಂ. ಮೈಸೂರ, ಎಸ್.ಕೆ. ಮುಲ್ಲಾ, ಎಂ.ಎಚ್. ಬೆಂಡಿಗೇರಿ, ಎಂ.ಎಚ್. ಲಕ್ಕುಂಡಿ ಸೇರಿದಂತೆ ರಾಜ್ಯದ 19 ಜಿಲ್ಲೆಗಳಿಂದ ಸಾವಿರಕ್ಕೂ ಅಧಿಕ ವಕೀಲರು ಪಾಲ್ಗೊಂಡಿದ್ದರು.
ದಲಿತ ಮುಖ್ಯಮಂತ್ರಿ ಹೇಳಿಕೆ ಅಪ್ರಸ್ತುತಹುಬ್ಬಳ್ಳಿ:
ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ. ಹೀಗಾಗಿ, ದಲಿತ ಮುಖ್ಯಮಂತ್ರಿ ಇತ್ಯಾದಿ ವಿಚಾರಗಳು ಸದ್ಯಕ್ಕೆ ಅಪ್ರಸ್ತುತ ಎಂದು ರಾಜ್ಯಸಭಾ ಸದಸ್ಯ ಡಾ. ಸೈಯದ್ ನಾಸಿರ್ ಹುಸೇನ್ ಹೇಳಿದರು.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಎಲ್ಲ ಸಮುದಾಯದವರಿಗೂ ತಮ್ಮ ಸಮುದಾಯದವರು ಮುಖ್ಯಮಂತ್ರಿಯಾಗಬೇಕು ಎನ್ನುವ ಬಯಕೆ ಇರುವುದು ಸಹಜ ಎಂದರು.ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಯಾವುದೇ ತಪ್ಪಿಲ್ಲ. ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲವಾಗಿ ನಿಂತಿದೆ. ಅವರ ವಿರುದ್ಧ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಬಿಜೆಪಿಯವರು ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಹಾಗಾದರೆ ಕೇಂದ್ರದಲ್ಲಿರುವ ಶೇ. 30ರಷ್ಟು ಮಂತ್ರಿಗಳ ಮೇಲೆ ಬಹಳ ಗಂಭೀರವಾದ ಪ್ರಕರಣಗಳಿವೆ. ಅದಕ್ಕೂ ಇದಕ್ಕೂ ತಾಳೆ ಮಾಡಲು ಬರುವುದಿಲ್ಲ. ಹಾಗೆ ನೋಡಿದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಚಿವರಾಗುವುದಕ್ಕೆ ಬರುವುದಿಲ್ಲ ಎಂದರು.