ಶಿವಮೊಗ್ಗ: ದೇಶದಲ್ಲಿ ಪದೇ ಪದೆ ದಾಳಿಯಾಗುತ್ತಿದ್ದರೂ ಉಗ್ರರ ಅಟ್ಟಹಾಸ ತಡೆಗಟ್ಟಲು ವಿಫಲವಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಅಂಚೆ ಕಚೇರಿ ಮುಂಭಾಗ ನಗರ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಗೃಹ ಸಚಿವರ ವೈಫಲ್ಯ ಖಂಡಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬಳೆಗಳನ್ನು ಪೋಸ್ಟ್ ಮಾಡಿದರು. ಗೃಹ ಸಚಿವರು ಬಳೆ ತೊಟ್ಟುಕೊಳ್ಳಬೇಕು ಎಂದು ಲೇವಡಿ ಮಾಡಿದರು.2019ರಲ್ಲಿ ಸೇನಾ ವಾಹನಗಳ ಮೇಳೆ ಪುಲ್ವಾಮಾದಲ್ಲಿ ದಾಳಿಯಾಗಿತ್ತು. 2025ರಲ್ಲಿ ಕಾಶ್ಮೀರದಲ್ಲಿ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ 26 ನಾಗರಿಕರ ಹತ್ಯೆ ಮಾಡಲಾಗಿತ್ತು. ಈಗ ದಹೆಲಿಯ ಅತ್ಯಂತ ಬಿಗಿ ಭದ್ರತಾ ಪ್ರದೇಶವಾದ ಕೆಂಪು ಕೋಟೆ ಸಮೀಪ ಬಾಂಬ್ ಸ್ಫೋಟ ಸಂಭವಿಸಿದೆ. ಉಗ್ರರ ಅಟ್ಟಹಾಸ ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ. ಆದ್ದರಿಂದ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನಗೌಡ ಅವರು, ಬಾಂಬ್ ಸ್ಫೋಟಕ್ಕೆ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರೇ ಕಾರಣ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಮಣಿಪುರ, ಪೆಹಲ್ಗಾಂ ಸೇರಿದಂತೆ ವಿವಿಧೆಡೆ ದಾಳಿಗಳಾಗಿವೆ. ದೆಹಲಿಯ ಕೆಂಪು ಕೋಟೆಯ ಬಳಿಯೇ ಸ್ಫೋಟ ಸಂಭವಿಸಿದೆ. ಅಮಿತ್ ಶಾ ಚುನಾವಣೆಗಷ್ಟೆ ಚಾಣಾಕ್ಷತನ ತೋರಿಸುತ್ತಿದ್ದಾರೆ. ದೇಶದ ರಕ್ಷಣೆಗೆ ಚಾಣಾಕ್ಷತನ ತೋರಿಸಲಿ ಎಂದು ಆಗ್ರಹಿಸಿದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದಲೂ ಇಂತಹ ದಾಳಿಗಳು ಚುನಾವಣಾ ಸಂದರ್ಭದಲ್ಲೇ ನಡೆಯುತ್ತಿವೆ. ೨೦೧೯ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪುಲ್ವಾಮಾ ದಾಳಿ ನಡೆದಿತ್ತು. ನಂತರ ಮಣಿಪುರದಲ್ಲಿ, ಇದೀಗ ಬಿಹಾರ ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಈ ದಾಳಿ ನಡೆದಿದೆ. ಬಿಹಾರ ಚುನಾವಣೆಯಲ್ಲಿ ಎನ್‌ಡಿಎಗೆ ಮುಖಭಂಗವಾಗುವುದು ಖಚಿತ ಎಂದು ಸಮೀಕ್ಷೆಗಳು ಹೇಳಿದ ಬೆನ್ನಲ್ಲೇ ದಾಳಿ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆದ್ದರಿಂದ ಕೂಡಲೇ ರಾಷ್ಟ್ರಪತಿಗಳು ಅಸಮರ್ಥ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ದಾಳಿಯ ತನಿಖೆಯನ್ನು ಪಾರದರ್ಶಕವಾಗಿ ನಡೆಸಬೇಕು. ದೇಶದ ಮತ್ತು ನಾಗರಿಕರ ಸುರಕ್ಷತೆಗಾಗಿ ಉಗ್ರರು ದೇಶದೊಳಗೆ ಪ್ರವೇಶಿಸದಂತೆ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಯುವ ನಾಯಕರಾದ ರಂಗೇಗೌಡರು, ಯುವ ಕಾಂಗ್ರೆಸ್ ನ ರೇಷ್ಮ,ಗಿರೀಶ್, ಮಧುಸೂದನ್, ಯುವ ಕಾಂಗ್ರೆಸ್ ನ ಶಿವಮೊಗ್ಗ ನಗರ ಅಧ್ಯಕ್ಷ ಚರಣ್ ಜಿ.ಶೆಟ್ಟಿ, ಗಿರೀಶ್, ಮಹಮ್ಮದ್ ಗೌಸ್, ಅಬ್ದುಲ್, ಆಕಾಶ್, ಅನಿಲ್, ಗೌತಮ್, ರವಿ, ಲಿಂಗರಾಜು, ಥೌಪಿಕ್ ಸೇರಿದಂತೆ ಅನೇಕ ಯುವಕರು ಇದ್ದರು.