ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ರೇಣುಕಾಂಬೆಯ ಗುಡ್ಡದಲ್ಲಿ ಅಮ್ಮನಹೊಂಡ ಜಲಪಾತ ಸೃಷ್ಠಿ

KannadaprabhaNewsNetwork |  
Published : Aug 6, 2024 12:31 AM ISTUpdated : Aug 6, 2024 2:06 PM IST
ಫೋಟೋ:೦೫ಕೆಪಿಸೊರಬ-೦೨ : ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬೆಯ ಗುಡ್ಡದಲ್ಲಿ ಅಮ್ಮನಹೊಂಡ ಜಲಪಾತ ಸೃಷ್ಠಿಯಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. | Kannada Prabha

ಸಾರಾಂಶ

ಸೊರಬ ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬೆಯ ಗುಡ್ಡದಲ್ಲಿ ಅಮ್ಮನಹೊಂಡ ಜಲಪಾತ ಸೃಷ್ಠಿಯಾಗಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ.

 ಸೊರಬ :  ತಾಲೂಕಿನ ಚಂದ್ರಗುತ್ತಿ ಗ್ರಾಮದ ಶ್ರೀ ರೇಣುಕಾಂಬೆಯ ಗುಡ್ಡದಲ್ಲಿ ಜಲಪಾತ ಸೃಷ್ಠಿಯಾಗಿದ್ದು, ದೇವಿಯ ಭಕ್ತರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರ ಕಣ್ಮನ ಸೆಳೆಯುತ್ತಿದೆ.

ಪ್ರಸಕ್ತ ತಾಲೂಕಿನಲ್ಲಿ ಅಧಿಕ ಮಳೆಯಾಗಿದ್ದು, ಜೀವನದಿಗಳಾದ ವರದಾ ಮತ್ತು ದಂಡಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಅಲ್ಲದೇ ಕೆರೆ, ಹಳ್ಳಗಳು ತುಂಬಿ ಕೋಡಿ ಬಿದ್ದಿವೆ. ಐತಿಹಾಸಿಕ ಮತ್ತು ಪುರಾಣ ಪ್ರಸಿದ್ಧ ಚಂದ್ರಗುತ್ತಿ ಗುಡ್ಡದಲ್ಲಿರುವ ಶ್ರೀ ರೇಣುಕಾಂಬೆ ದೇವಸ್ಥಾನದ ಕೆಲವೇ ಅಂತರದಲ್ಲಿರುವ ಆಳದ ಅಮ್ಮನ ಹೊಂಡದಲ್ಲಿ ಅಧಿಕ ನೀರು ಸಂಗ್ರಹವಾಗಿ ಕೋಡಿ ಬಿದ್ದಿದೆ. ಈ ನೀರು ತ್ರಿಶೂಲ ಬೈರಪ್ಪನ ದೇವಸ್ಥಾನದ ಪಕ್ಕದಲ್ಲಿ ಹರಿದು ಇಳಿಜಾರು ಪ್ರದೇಶದ ಗುಡ್ಡದ ಉಬ್ಬು-ತೆಗ್ಗುಗಳನ್ನು ದಾಟಿ ರಭಸವಾಗಿ ಧುಮ್ಮಿಕ್ಕುವ ಮೂಲಕ ಜಲಪಾತ ಸೃಷ್ಠಿಯಾಗಿದೆ.

ಸುಮಾರು ೧೦೦ ಅಡಿ ಮೇಲಿನಿಂದ ಗುಡ್ಡದ ಇಳಿಜಾರು ಪ್ರದೇಶಕ್ಕೆ ವೈಯಾರಿದಿಂದ ಧುಮ್ಮುಕ್ಕುವ ನೀರು ಹಾವಿನ ನಡುಗೆಯಂತೆ ಕಂಡು ವೀಕ್ಷಕರನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿದೆ. ಪ್ರತೀ ವರ್ಷ ಮಳೆಗಾಲದಲ್ಲಿ ಝರಿಯಂತೆ ಕಂಡು ಬರುತ್ತಿದ್ದ ಅಮ್ಮನ ಹೊಂಡ ಜಲಪಾತ ನೀರು ಸರಾಗವಾಗಿ ಹರಿಯಲು ಕಸ-ಕಡ್ಡಿ ಮತ್ತು ನಿರ್ಜಿವ ಗಿಡಗಳು ಅಡೆತಡೆಯಾಗಿದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಗ್ರಾಮದ ಪರಿಸರ ಪ್ರೇಮಿಗಳು ಗುಡ್ಡದಲ್ಲಿನ ಕಸ-ಕಡ್ಡಿಗಳನ್ನು ತೆರವುಗೊಳಿಸಿ ಹೊಂಡದಿಂದ ಧುಮ್ಮಿಕ್ಕುವ ನೀರು ಸರಾಗವಾಗಿ ಹರಿಯುವಂತೆ ಮಾಡಿದ್ದಾರೆ.

ಧುಮ್ಮುಕ್ಕುವ ನೀರು ವ್ಯರ್ಥವಾಗದೇ ಗುಡ್ಡದ ಆಜುಬಾಜಿನ ಜಮೀನುಗಳಿಗೆ ನೀರುಣಿಸುತ್ತದೆ. ಇದು ದೀಪಾವಳಿ ಹಬ್ಬದವರೆಗೂ ಇದರ ಸೊಬಗು ಮತ್ತು ನೀರಿನ ಸೆಲೆ ಇರುತ್ತದೆ. ಪ್ರತಿ ವಾರದ ಮಂಗಳವಾರ, ಶುಕ್ರವಾರ ಮತ್ತು ತಿಂಗಳ ಹುಣ್ಣಿಮೆಯಂದು ಶ್ರೀ ರೇಣುಕಾಂಬೆಯ ದರ್ಶನಕ್ಕೆ ಸೇರುವ ಸಾವಿರಾರು ಸಂಖ್ಯೆಯ ಭಕ್ತರು ಅಮ್ಮನ ಹೊಂಡ ಜಲಪಾತವನ್ನು ವೀಕ್ಷಿಸಿ ಪುಳಕಿತರಾಗುತ್ತಾರೆ.

ಪ್ರತೀ ವರ್ಷ ಮಳೆಗಾಲದಲ್ಲಿ ಸೃಷ್ಠಿಯಾಗುವ ಜಲಪಾತ ಮತ್ತಷ್ಟು ರಮಣೀಯವಾಗಿ ಜನಮಾನಸದಲ್ಲಿ ನೆಲೆ ನಿಲ್ಲುವಂತೆ ಮಾಡುವ ಅವಶ್ಯಕತೆ ಇದೆ. ಇದರಿಂದ ಧಾರ್ಮಿಕವಾಗಿ ತಮ್ಮ ಇಷ್ಟಾರ್ಥಗಳನ್ನು ಶ್ರೀದೇವಿಯಲ್ಲಿ ಈಡೇರಿಸಿಕೊಳ್ಳಲು ಆಗಮಿಸುವ ಭಕ್ತರಿಗೆ ಜಲಪಾತದಿಂದ ಸಣ್ಣ ಪಿಕ್ನಿಕ್ ಆಗುತ್ತದೆ. ಈ ಬಗ್ಗೆ ಜನಪ್ರತಿನಿಧಿಗಳು, ಪ್ರವಾಸೋದ್ಯಮ ಇಲಾಖೆ ಮತ್ತು ಮುಜರಾಯಿ ಇಲಾಖೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸುವ ಅವಶ್ಯಕತೆ ಇದೆ ಸ್ಥಳೀಯ ಗ್ರಾಮಸ್ಥರ ಒತ್ತಾಸೆಯಾಗಿದೆ.

ಇನ್ನು, ವರ್ಷದ ಮಳೆಗೆ ಗುಡ್ಡದ ಮೇಲಿನ ಅಮ್ಮನ ಹೊಂಡ ತುಂಬಿ ಕೋಡಿ ಬಿದ್ದ ನೀರು ಕಸ-ಕಡ್ಡಿಗಳಿಂದ ತಡೆಯಾಗಿ ಸರಾಗವಾಗಿ ಹರಿಯದೇ ಅಲ್ಲಲ್ಲಿ ನಿಂತು ಪಾಚಿ ಕಟ್ಟಿ ವ್ಯರ್ಥವಾಗುತ್ತಿತ್ತು. ಆದರೆ ಈ ಬಾರಿ ಕಸ-ಕಡ್ಡಿಗಳಿಂದ ಆವೃತ್ತವಾಗಿದ್ದ ನೀರು ಹರಿಯುವ ಜಾಗವನ್ನು ಸ್ವಚ್ಛಗೊಳಿಸಿ, ಜಲಪಾತಕ್ಕೆ ನೆರವಾಗುವಂತೆ ಮಾಡಲಾಗಿದ್ದು, ಅಧಿಕ ಮಳೆ ಪರಿಣಾಮ ನೀರು ಎತ್ತರದಿಂದ ಧುಮ್ಮಿಕ್ಕಿ ಕಣ್ಮನ ತುಂಬುತ್ತಿದೆ ಎನ್ನುತ್ತಾರೆ ಪರಿಸರ ಪ್ರೇಮಿಗಳಾದ ಚಂದ್ರಗುತ್ತಿ ರಘು ಸ್ವಾಧಿ, ವಾಸುದೇವ ಎಂಬೀರ್ವರು.

PREV